ಎಸ್‌ಸಿ, ಎಸ್‌ಟಿ ಕುರಿತ ಬಿ.ಎಲ್.ಸಂತೋಷ್ ಹೇಳಿಕೆ ಸಂವಿಧಾನ ವಿರೋಧಿ ಧೋರಣೆಗೆ ಪ್ರಬಲ ಸಾಕ್ಷಿ: ಪ್ರೊ.ಮಹೇಶ್ ಚಂದ್ರಗುರು

Update: 2020-07-19 16:30 GMT

ಮೈಸೂರು,ಜು.19: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜನಾಂಗಗಳು ಈ ದೇಶದ ಮೂಲನಿವಾಸಿಗಳಲ್ಲ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮೈಸೂರಿನಲ್ಲಿ ಇತ್ತೀಚೆಗೆ ಜರುಗಿದ ಸಿಎಎ ಕುರಿತ ಕಾರ್ಯಕ್ರಮವೊಂದರಲ್ಲಿ ಹೇಳಿರುವುದು ಇವರ ಸಂವಿಧಾನ ವಿರೋಧಿ ಮತ್ತು ಬಹುಜನ ವಿರೋಧಿ ಧೋರಣೆಗೆ ಪ್ರಬಲ ಸಾಕ್ಷಿಯಾಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ತಿಳಿಸಿದ್ದಾರೆ. 

ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಅವರು, ಇಂತಹ ಹುನ್ನಾರಗಳ ವಿರುದ್ಧ ದನಿಯೆತ್ತದೆ ರಾಜಕೀಯ ಅಧಿಕಾರವೆಂಬ ಎಂಜಲಿಗೆ ಬಹುತ್ವವನ್ನು ಬಲಿಕೊಟ್ಟು ಸ್ವಾಭಿಮಾನವನ್ನು ಕಳೆದುಕೊಂಡು ಬದುಕುತ್ತಿರುವ ಅಹಿಂದ ನಾಯಕರು ಬದುಕುವ ಅರ್ಹತೆಯನ್ನೇ ಕಳೆದುಕೊಂಡಿದ್ದಾರೆ. ಇವರೇ ವಾಸ್ತವವಾಗಿ ಮೀಸಲಾತಿ ಫಲಾನುಭವಿ ಅವಕಾಶವಾದಿ ದೇಶದ್ರೋಹಿಗಳು ಮತ್ತು ನಯವಂಚಕರು ಎಂದು ಹೇಳಲು ನೋವುಂಟಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಜಕೀಯ ಅಧಿಕಾರದ ಆಸೆಗಾಗಿ ಸ್ವಾಭಿಮಾನವನ್ನೇ ಮಾರಿಕೊಂಡಿರುವ ಲಜ್ಜೆಗೇಡಿ ಅಹಿಂದ ನಾಯಕರು ಬುದ್ಧ, ಬಸವ, ಗಾಂಧಿ, ಪೆರಿಯಾರ್, ಅಂಬೇಡ್ಕರ್, ನಾರಾಯಣ ಗುರು, ಲೋಹಿಯಾ ಮೊದಲಾದ ಮಹನೀಯರ ಆದರ್ಶಗಳಿಗೆ ತಿಲಾಂಜಲಿ ನೀಡಿದ್ದಾರೆ. ಅಧಿಕಾರಕ್ಕಾಗಿ ಸ್ವಾಭಿಮಾನವನ್ನು ಮಾರಿಕೊಳ್ಳಬೇಡಿ ಎಂಬ ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಇಂತಹ ಹೊಣೆಗೇಡಿಗಳನ್ನು ಇತಿಹಾಸ ಕ್ಷಮಿಸುವುದಿಲ್ಲ. ಏಕತ್ವದ ಪ್ರತಿಪಾದಕರಾದ ಮನುವಾದಿಗಳು ಬರೆದ ಇತಿಹಾಸವನ್ನು ನಂಬಿ ಬಹುಜನ ಬಂಧುಗಳನ್ನು ದಾರಿತಪ್ಪಿಸುತ್ತಿರುವ ಚಿಂತಕರು ಮತ್ತು ನಾಯಕರ ಬಗ್ಗೆ ಬಹುಜನರು ಹೆಚ್ಚು ಎಚ್ಚರಿಕೆಯಿಂದ ಬದುಕಿ ಸಂವಿಧಾನಾತ್ಮಕ ಮೌಲ್ಯಗಳನ್ನು ರಕ್ಷಿಸುವ ಅನಿವಾರ್ಯತೆ ಎಂದಿಗಿಂತ ಇಂದು ಹೆಚ್ಚಾಗಿದೆ. ಅಯೋಧ್ಯೆಯಲ್ಲಿ ಅಗೆದಷ್ಟು - ಬಗೆದಷ್ಟು ಬೌದ್ಧ ಸ್ಮಾರಕಗಳೇ ಸಿಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಕೈಬಿಟ್ಟು ಬುದ್ಧಮಂದಿರವನ್ನು ನಿರ್ಮಿಸಬೇಕೆಂಬ ಕೂಗು ಜಾಗತಿಕ ಆಯಾಮವನ್ನು ಪಡೆದುಕೊಳ್ಳುತ್ತಿದೆ. ನಮಗೆ ರಾಮರಾಜ್ಯ ಬೇಡ, ಭೀಮರಾಜ್ಯ ಬೇಕು ಎಂಬ ಹೊಸ ಅರಿವು ಬಹುಜನರಲ್ಲಿ ಮೂಡುತ್ತಿದೆ ಎಂದು ಮಹೇಶ್ ಚಂದ್ರಗುರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News