ಕೋಲಾರದಲ್ಲಿ ಭಾರೀ ಮಳೆ: ಅಪಾರ ಬೆಳೆ ನಾಶ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

Update: 2020-07-19 19:08 GMT

ಕೋಲಾರ, ಜು.19: ಕೋಲಾರ ಸೇರಿದಂತೆ ವಿವಿಧೆಡೆ ರವಿವಾರ ಧಾರಾಕಾರ ಮಳೆ ಸುರಿದಿದ್ದು, ನಗರದ ವಿವಿಧ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಮಳೆಯಿಂದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡ ಹಿನ್ನೆಲೆ ವಾಹನ ಸವಾರರು ಪರದಾಟ ನಡೆಸಿದರು. ಇದುವರೆಗೆ ಬಿಸಿಲ ಬೇಗೆಯಿಂದ ಬಳಲಿ ಬೆಂಡಾಗಿದ್ದ ಜನರಿಗೆ ವರುಣ ಇಂದು ತಂಪೆರೆದಿದ್ದಾನೆ. ಸಂಜೆ ಸುರಿದ ಮಳೆಗೆ ರೈಲ್ವೆ ಅಂಡರ್ ಪಾಸ್ ನಲ್ಲಿ ನೀರು ನಿಂತಿದ್ದು, ಅಂಡರ್ ಪಾಸ್ ಬಳಿ ರಸ್ತೆ ದಾಟಲು ವಾಹನ ಸವಾರರು ಹಾಗೂ ಸಾರ್ವಜನಿಕರು ಹರಸಾಹಸಪಟ್ಟರು.

ಭಾರೀ ಮಳೆಗೆ ಕೋಲಾರ ನಗರದ ಕಾರಂಜಿಕಟ್ಟೆ ಬಡಾವಣೆಯಲ್ಲಿ ಪರಮೇಶ್ ಎಂಬುವರಿಗೆ ಸೇರಿದ ಜೋಳ ಹಾಗೂ ರಾಗಿ ಬೆಳೆ ಕೊಚ್ಚಿಹೋಗಿದೆ. ರಾಜಕಾಲುವೆ ಮುಚ್ಚಿಹೋಗಿರುವ ಹಿನ್ನೆಲೆ ಹೊಲಗಳಿಗೆ ನೀರು ನುಗ್ಗಿದೆ. ಅಲ್ಲದೇ, ತಗ್ಗು ಪ್ರದೇಶದ ಮನೆಗಳು, ಅಂಗಡಿ ಸೇರಿದಂತೆ ಎಟಿಎಂಗಳಿಗೆ ನೀರು ನುಗ್ಗಿದೆ.

ಕೋಲಾರ ನಗರದ ಕೀಲುಕೋಟೆ ಹಾಗೂ ಖಾದ್ರಿಪುರ ರೈಲ್ವೆ ಅಂಡರ್ ಪಾಸ್ ಸಂಪೂರ್ಣ ಜಲಾವೃತಗೊಂಡಿದೆ. ಪ್ರತಿ ಬಾರಿ ಮಳೆ ಬಂದಾಗ ಇದೇ ರೀತಿ ಆಗುತ್ತದೆ. ಅವೈಜ್ಞಾನಿಕವಾಗಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿದಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News