'ಆತ್ಮಹತ್ಯೆಯೊಂದೇ ದಾರಿ': ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಮೈಸೂರಿನ ಕುಟುಂಬದ ಅಳಲು

Update: 2020-07-20 09:51 GMT

ಮೈಸೂರು, ಜು.20: "ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿ 45 ದಿನಗಳಾಗಿದ್ದು, ಈ ಸಂಬಂಧ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಮಗೆ ಆತ್ಮಹತ್ಯೆಯೊಂದೆ ದಾರಿ" ಎಂದು ರೈತ ಕುಟುಂಬವೊಂದು ತಮ್ಮ ಅಳಲನ್ನು ತೋಡಿಕೊಂಡಿದೆ.

ಜಿಲ್ಲೆಯ ನಂಜನಗೂಡು ತಾಲೂಕು ಶಿರಮಳ್ಳಿ ಗ್ರಾಮದ ರೈತ ಮಹದೇವಪ್ಪ ಮತ್ತು ಶೈಲಜ ಅವರ ಕುಟುಂಬ ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ತಮಗೆ ಆಗಿರುವ ಅನ್ಯಾಯವನ್ನು ತೋಡಿಕೊಂಡು ದುಖಿಃತರಾದರು.

ಈ ಸಂಬಂಧ ಅವರ ಪುತ್ರ ಇಂಜಿನಿಯರಿಂಗ್ ಪದವೀದರ ನವೀನ್ ಮಾತನಾಡಿ, ಶಿರಮಳ್ಳಿ ಗ್ರಾಮದ ನಮ್ಮ ಮನೆಯ ಮುಂದೆ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದೇವೆ. ಈಗ ನಮ್ಮ ಮನೆಯ ಮುಂಭಾಗದ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗುತ್ತಿದೆ. ಹಾಗಾಗಿ ರಸ್ತೆಯ ಎರಡು ಬದಿಯಲ್ಲಿ ಚರಂಡಿ ನಿಮಾರ್ಣ ಮಾಡಲು ಮುಂದಾಗಿ ನಮ್ಮ ಹದ್ದುಬಸ್ತಿನಲ್ಲಿರುವ ಶೌಚಾಲಯವನ್ನು ತೆರವುಗೊಳಿಸುವಂತೆ ವೈಯಕ್ತಿಕ ದ್ವೇಷದಿಂದ ನಮ್ಮ ಗ್ರಾಮದ ಮುಖಂಡರಾದ ರೈತ ಸಂಘದ ಸಿದ್ದಪ್ಪ, ಕಾರ್ಯದರ್ಶಿ ಪುಟ್ಟಬಸಪ್ಪ, ಗೌಡಿಕೆ ಗುರುಸ್ವಾಮಿ ಒತ್ತಾಯ ಮಾಡಿದರು. ನಾವು ತೆರವು ಮಾಡುವುದಿಲ್ಲ ಎಂದ ಒಂದೇ ಒಂದು ಕಾರಣಕ್ಕೆ ನಮ್ಮ ಕುಟುಂಬವನ್ನು ಸಾಮಾಜಿಕ ಬಹಿಷ್ಕಾರಕ್ಕೊಳಪಡಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

ಸಾಮಾಜಿಕ ಬಹಿಷ್ಕಾರದಿಂದ ನಮ್ಮ ಗ್ರಾಮದಲ್ಲಿ ಯಾರೂ ಸಹ ನಮ್ಮನ್ನು ಮಾತನಾಡಿಸುವಂತಿಲ್ಲ, ನಮ್ಮ ಮನೆಯ ಕೆಲಸ ಕಾರ್ಯಗಳಿಗೆ ಬರುವಂತಿಲ್ಲ, ನಾವು ಸಹ ಯಾರ ಬಳಿಯೂ ಹೋಗುವಂತಿಲ್ಲ. ಇದರಿಂದ ಮಾನಸಿಕ ಹಿಂಸೆಗೆ ಒಳಗಾಗಿದ್ದು, ಸಾಕಷ್ಟು ನೋವನ್ನು ಅನುಭವಿಸಿದ್ದೇವೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸರಿಗೆ, ನಂಜನಗೂಡು ತಹಶೀಲ್ದಾರ್, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದರೂ ಯಾವುದೇ ನ್ಯಾಯ ಸಿಕ್ಕಿಲ್ಲ. ಹಾಗಾಗಿ ನಮಗೆ ಉಳಿದಿರುವುದು ಆತ್ಮಹತ್ಯೆ ಒಂದೇ ಎಂದು ಹೇಳಿದರು.

ನಾವು ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದೇವೆ. ನಮ್ಮ ಜಮೀನಿನಲ್ಲಿ ರೇಷ್ಮೆ, ಚಂಡು ಹೂವು ಬೆಳೆಯಲಾಗಿದ್ದು ಇದನ್ನು ಕಟಾವು ಮಾಡಲು ಕೆಲಸಕ್ಕೆ ಯಾರೂ ಬರುತ್ತಿಲ್ಲ. ಇದರಿಂದ ಬೆಳಯೆಲ್ಲಾ ಹಾನಿಯಾಗಿ 3 ಲಕ್ಷ ರೂ. ಗಳಷ್ಟು ನಷ್ಟವಾಗಿದೆ. ಕಳೆದ 45 ದಿನಗಳಿಂದ ಆಗುತ್ತಿರುವ ಹಿಂಸೆಯಿಂದ ನರಳುವಂತಾಗಿದೆ ಎಂದು ಹೇಳಿದರು.

ಅವರ ತಾಯಿ ಶೈಲಜ ಮಾತನಾಡಿ, ನಮಗೆ ಸಂಬಂಧಪಟ್ಟವರು ನ್ಯಾಯ ದೊರಕಿಸಿ ಜೀವನ ನಡೆಸಲು ಅವಕಾಶ ಕಲ್ಪಿಸಿ ಇಲ್ಲದಿದ್ದರೆ ನಾವು ಬದಕಲು ಸಾಧ್ಯವಿಲ್ಲ, ನಮ್ಮ ಮನವಿಯನ್ನು ಸ್ವೀಕರಿಸಿ ನ್ಯಾಯ ದೊರಕಿಸಿಕೊಡಿ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮಹದೇವಪ್ಪ, ಪತ್ನಿ ಶೈಲಜ, ಮಗಳು ಶಿಲ್ಪ, ಮಗ ನವೀನ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News