ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಮುನ್ನ ಎಚ್ಚರಿಕೆ ಅಗತ್ಯ: ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್

Update: 2020-07-20 17:45 GMT

ಬೆಂಗಳೂರು, ಜು.20: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಸಾವಿನ ಪ್ರಮಾಣವು ಏರಿಕೆಯಾಗುತ್ತಿದೆ. ಆದುದರಿಂದ, ಸಾರ್ವಜನಿಕರು ತಮ್ಮ ಬಂಧುಗಳು, ಸ್ನೇಹಿತರು, ಪರಿಚಯಸ್ಥರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಮನವಿ ಮಾಡಿದ್ದಾರೆ.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹಾಗೂ ನ್ಯೂಮೋನಿಯಾದಿಂದ ಸಾಕಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಇವುಗಳಲ್ಲಿ ಶೇ.90ರಷ್ಟು ಸಾವುಗಳು ಕೊರೋನ ಸೋಂಕಿನಿಂದ ಸಂಭವಿಸಿವೆ ಎಂಬ ಅಂಶ ತಿಳಿದು ಬಂದಿದೆ ಎಂದರು.

ಕೊರೋನ ಸೋಂಕು ಮೊದಲು ದಾಳಿ ಮಾಡುವುದು ಗಂಟಲಿಗೆ, ಆನಂತರ ಒಣ ಕೆಮ್ಮು ಕಾಣಿಸಿಕೊಳ್ಳುತ್ತದೆ. ಬಳಿಕ ಸೋಂಕು ಶ್ವಾಸಕೋಶಗಳಿಗೆ ಹರಡಿಕೊಳ್ಳುತ್ತದೆ. ಶ್ವಾಸಕೋಶಗಳಲ್ಲಿ ಕಫ ತುಂಬಿಕೊಳ್ಳುವುದರಿಂದ, ವೈದ್ಯರು ಇದನ್ನು ನ್ಯುಮೋನಿಯಾ ಎನ್ನುತ್ತಾರೆ. ಹೃದಯ, ಮೆದುಳು ಸೇರಿದಂತೆ ದೇಹದ ಇನ್ನಿತರ ಅಂಗಗಳಿಗೆ ಆಮ್ಲಜನಕ ಸರಬರಾಜು ಆಗದೆ, ಹೃದಯಘಾತವಾಗಿ ಸಾವು ಸಂಭವಿಸುತ್ತದೆ ಎಂದು ಅವರು ಹೇಳಿದರು.

ಹೃದಯಾಘಾತ ಅಥವಾ ನ್ಯೂಮೋನಿಯಾದಿಂದ ಯಾರಾದರೂ ಸಾವನ್ನಪ್ಪಿದರೆ, ಮೃತ ವ್ಯಕ್ತಿಗೆ ಕೋವಿಡ್ ಸೋಂಕು ತಗುಲಿತ್ತೆ ಇಲ್ಲವೆ ಎಂದು ಪರೀಕ್ಷೆ ಮಾಡಲು ಹೋಗುವುದಿಲ್ಲ. ಕೆಲವೆ ಗಂಟೆಗಳಲ್ಲಿ ಅಂತ್ಯ ಸಂಸ್ಕಾರ ನಡೆಸಿಬಿಡುತ್ತಾರೆ. ಇದು ತುಂಬಾ ಅಪಾಯಕಾರಿ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಭಾವಿಸಿ ನೆರೆ ಹೊರೆಯವರು, ಬಂಧುಗಳು ಅಂತಿಮ ದರ್ಶನ ಪಡೆಯಲು, ಕುಟುಂಬದವರಿಗೆ ಸಾಂತ್ವಾನ ಹೇಳಲು ಆಗಮಿಸುತ್ತಾರೆ. ಸೋಂಕು ಹರಡಲು ಇದು ಒಂದು ಕಾರಣವಾಗಿರುತ್ತದೆ ಎಂದು ಅಝೀಮ್ ಹೇಳಿದರು.

ಇತ್ತೀಚೆಗೆ ಕೆಲವು ಕಡೆ ಅಂತಿಮ ಸಂಸ್ಕಾರದಲ್ಲಿ 500-1000 ಜನ ಸೇರಿರುವುದನ್ನು ನಾವು ನೋಡಿದ್ದೇವೆ. ಒಂದು ವೇಳೆ ಅಲ್ಲಿ ಸೇರಿದ್ದ ಶೇ.10ರಷ್ಟು ಮಂದಿಗೂ ಸೋಂಕು ತಗುಲಿದರೂ ಎಷ್ಟು ಮಂದಿಗೆ ಸಮಸ್ಯೆಯಾಗಬಹುದು ಎಂದು ನಾವು ಊಹಿಸಲು ಸಾಧ್ಯವಿಲ್ಲ. ಆದುದರಿಂದ, ಹೃದಯಾಘಾತ ಹಾಗೂ ನ್ಯುಮೋನಿಯಾದಿಂದ ಸಾವು ಸಂಭವಿಸಿದರೂ ತಮ್ಮ ಹಾಗೂ ತಮ್ಮ ಕುಟುಂಬದ ಒಳಿತಿಗಾಗಿ ಅಂತಹ ಅಂತಿಮ ಸಂಸ್ಕಾರದಲ್ಲಿ ಈಗಿನ ಪರಿಸ್ಥಿತಿಯನ್ನು ಅರಿತುಕೊಂಡು ನೇರವಾಗಿ ಪಾಲ್ಗೊಳ್ಳದೆ ಇರುವುದು ಉತ್ತಮ ಎಂದು ಅವರು ಸಲಹೆ ನೀಡಿದರು.

ಮುಸ್ಲಿಮರು, ಕ್ರೈಸ್ತರು, ಹಿಂದೂಗಳು ಸೇರಿದಂತೆ ಎಲ್ಲರಲ್ಲೂ ಒಂದು ಮನವಿ, ಯಾವುದೆ ಕಾರಣಕ್ಕೂ ಈಗಿನ ಪರಿಸ್ಥಿತಿಯಲ್ಲಿ ಅಂತಿಮ ಸಂಸ್ಕಾರದಲ್ಲಿ ನೇರವಾಗಿ ಪಾಲ್ಗೊಳ್ಳಬೇಡಿ. ಇಂತಹ ಸಾವುಗಳು ಸಂಭವಿಸಿದಾಗ ಕೆಲವರು ಮಾತ್ರ ಪಿಪಿಇ ಕಿಟ್ ಸೇರಿದಂತೆ ಅಗತ್ಯ ಸುರಕ್ಷಾ ವಿಧಾನಗಳನ್ನು ಬಳಸಿಕೊಂಡು ಅಂತಿಮ ಸಂಸ್ಕಾರ ಮಾಡುವುದು ಉತ್ತಮ ಎಂದು ಅಬ್ದುಲ್ ಅಝೀಮ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News