ಆನ್‍ಲೈನ್ ಸಭೆ ಮತ್ತು ಇ-ತಪಾಸಣೆಗಳಿಗೆ ಅವಕಾಶ ನೀಡಿ: ಎಚ್.ಕೆ.ಪಾಟೀಲ್

Update: 2020-07-21 15:17 GMT

ಬೆಂಗಳೂರು, ಜು.21: ಸಾರ್ವಜನಿಕ ಲೆಕ್ಕಪತ್ರ ಸಮಿತಿಯಂತಹ ವಿಧಾನಮಂಡಲದ ಮಹತ್ವದ ಸಮಿತಿ ತನ್ನ ಕರ್ತವ್ಯದಿಂದ ವಿಮುಖವಾಗಲು ಸಾಧ್ಯವೇ ಇಲ್ಲದಿರುವುದರಿಂದ ಸಮಿತಿಯ ಸಭೆಗಳನ್ನು ರೂಢಿಯಂತೆ ಮತ್ತು ವಿಧಾನಮಂಡಲದ ನಿಯಮಗಳಂತೆ ನಡೆಸಲು ಅಥವಾ ಆನ್‍ಲೈನ್ ಮೂಲಕ ನಡೆಸಲು ಮತ್ತು ಇ-ತಪಾಸಣೆಗಳಿಗೆ ಅವಕಾಶ ನೀಡಬೇಕೆಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಈ ಕುರಿತು ಪತ್ರ ಬರೆದಿರುವ ಅವರು, ವಿಶ್ವದಾದ್ಯಂತ ಮಹಾಮಾರಿ ಕೊರೋನ ವೈರಸ್‍ನಿಂದಾಗಿ ಆಘಾತಕಾರಿ ಹಂತ ತಲುಪುತ್ತಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿಯೂ ಅತ್ಯಂತ ಗಂಭೀರವಾದ ಪರಿಸ್ಥಿತಿ ಈಗ ನಿರ್ಮಾಣವಾಗಿರುವ ಸನ್ನಿವೇಶದಲ್ಲಿ ಗುರುತರ ಜವಾಬ್ದಾರಿಯನ್ನು ಹೊಂದಿರುವ ಕರ್ನಾಟಕ ವಿಧಾನಮಂಡಲ ಮತ್ತು ವಿಧಾನಮಂಡಲದ ಸಮಿತಿಗಳು ಅತ್ಯಂತ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕಾದ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕೋವಿಡ್-19ರಿಂದಾಗಿ ಕರ್ನಾಟಕದಲ್ಲಿ ಒಂದು ವಾರ ಮತ್ತೊಂದು ಲಾಕ್‍ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಮತ್ತು ಬೆಂಗಳೂರಲ್ಲಿ ಹಾಗೂ ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸಮಿತಿಗಳ ಸಭೆಗಳನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯಂತಹ ಮಹತ್ವದ ಸಮಿತಿಯು ತನ್ನ ಸಭೆಗಳನ್ನು ಮುಂದಕ್ಕೆ ಹಾಕಿದೆ ಎಂದು ಅವರು ತಿಳಿಸಿದ್ದಾರೆ.

ಜೂ.30ರಂದು ನಡೆದ ಕೊನೆಯ ಸಭೆಯಲ್ಲಿ ಸಮಿತಿಯ ಸದಸ್ಯರ ಅಭಿಪ್ರಾಯ ಪಡೆದು ಸಮಿತಿಯ ಸಭೆಗಳನ್ನು ಒಂದು ತಿಂಗಳ ಕಾಲ ಮುಂದಕ್ಕೆ ಹಾಕಲು ನಿರ್ಣಯಿಸಲಾಗಿತ್ತು. ಇದಾದ ನಂತರ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಯನ್ನು ಸರಕಾರದ ಎಲ್ಲ ಸಭೆಗಳಂತೆಯೇ ಅಂತರ್ಜಾಲ ತಾಣದ ಮೂಲಕ ಆನ್‍ಲೈನ್ ಸಭೆ ನಡೆಸಲು ಅವಕಾಶ ಕೋರಿ ಜು.1ರಂದು ವಿಧಾನಸಭೆಯ ಕಾರ್ಯದರ್ಶಿಗೆ ಕಡತದ ಮೂಲಕ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಉಪ ಕಾರ್ಯದರ್ಶಿ ಸಮಿತಿಯ ನಿರ್ದೇಶನದಂತೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಈವರೆಗೂ ಆ ಕಡತ ಕುರಿತು ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ ಎಂದು ತಮ್ಮ ಪತ್ರದಲ್ಲಿ ವಿಧಾನಸಭಾಧ್ಯಕ್ಷರನ್ನು ನೆನಪಿಸಿರುವ ಎಚ್.ಕೆ.ಪಾಟೀಲ್, ಕರ್ನಾಟಕ ಸರಕಾರದ ಇ-ಆಡಳಿತ ವ್ಯವಸ್ಥೆಯಲ್ಲಿ ವಿದ್ಯುನ್ಮಾನಚಾಲಿತ ವ್ಯವಸ್ಥೆ ಹೊಂದಿರುವ ವಾಹನದ ಮೂಲಕ ತಪಾಸಣೆ ಕೈಗೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತಂದು ದಶಕ ಕಳೆದಿದೆ ಎಂದು ಹೇಳಿದ್ದಾರೆ.

ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಇಂಥ ವಿಶಿಷ್ಟ ಸಂಕಷ್ಟದ ಸನ್ನಿವೇಶದಲ್ಲಿ ಈ ಸೌಲಭ್ಯವನ್ನು  ಉಪಯೋಗಿಸಿಕೊಂಡು ತನ್ನ ಕರ್ತವ್ಯ ನಿರ್ವಹಣೆಗೆ ಯಾವುದೇ ಅಡ್ಡಿ ಇಲ್ಲದಂತೆ ಕಾರ್ಯನಿರ್ವಹಿಸಬೇಕು. ಸಮಿತಿಯ ಸ್ಥಳ ಪರಿಶೀಲನೆಗೆ ಅಡ್ಡಿಯುಂಟು ಮಾಡಿರುವ ವಿಧಾನಮಂಡಲ ಸಚಿವಾಲಯದ ಪ್ರಕಟಣೆ ಸಂಖ್ಯೆ: 104 ಮತ್ತು 2ನೇ ಲಾಕ್‍ಡೌನ್ ಘೋಷಣೆಯ ನಂತರ ಸಮಿತಿಯ ಸಭೆಗಳಿಗೆ ವಿಧಿಸಿರುವ ನಿರ್ಬಂಧದ ಪ್ರಕಟಣೆಯ ಸಂಖ್ಯೆ 110 ಇವುಗಳಿಂದ ನಮ್ಮ ಮಹತ್ವದ ಸಮಿತಿಯ ಕಾರ್ಯನಿರ್ವಹಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಸುರಕ್ಷಿತ ಅಂತರ ಮತ್ತು ಸದಸ್ಯರ ಸುರಕ್ಷತೆಯ ಹಿನ್ನೆಲೆಯಲ್ಲಿ ಈ ಪ್ರಕಟಣೆಗಳನ್ನು ಹೊರಡಿಸಲಾಗಿದೆ ಎಂದು ಆ ಪ್ರಕಟಣೆಗಳಲ್ಲಿ ತಿಳಿಸಲಾಗಿದೆ. ಆನ್‍ಲೈನ್ ಸಭೆ ಮತ್ತು ಇ-ತಪಾಸಣೆ ಕೈಗೊಳ್ಳುವುದಕ್ಕೆ ಕೋವಿಡ್ ನಿಯಂತ್ರಣದ ಯಾವುದೇ ಕಾರಣಗಳು ಅಡ್ಡಿಯಾಗುವುದಿಲ್ಲ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಆದುದರಿಂದಾಗಿ, ಇಂಥ ಸಂದರ್ಭದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಂತಹ ಮಹತ್ವದ ಸಮಿತಿಯು ತನ್ನ ಕರ್ತವ್ಯದಿಂದ ವಿಮುಖವಾಗಲು ಸಾಧ್ಯವಿಲ್ಲ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು. ಸಭೆಗಳನ್ನು ನಡೆಸಬೇಕು, ಅಧಿಕಾರಿಗಳಿಂದ ವಿವರಣೆ ಪಡೆಯಬೇಕು, ತಪ್ಪಿತಸ್ಥರನ್ನು ಗುರುತಿಸಬೇಕು, ತಪ್ಪಿತಸ್ಥರ ಮೇಲೆ ಕ್ರಮಗಳಾಗಬೇಕು. ಇದಕ್ಕಾಗಿ ಸಮಿತಿ ಸಭೆ ನಡೆಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಕೋವಿಡ್-19 ಕೊರೋನ ವೈರಸ್ ನಿರ್ವಹಣೆಯಲ್ಲಿ ರಾಜ್ಯ ಸರಕಾರವು ಎಲ್ಲ ರಂಗಗಳಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಭಾವನೆಗಳು ಜನಮಾನಸದಲ್ಲಿ ಗಟ್ಟಿಗೊಳ್ಳುತ್ತಿವೆ. ಕೋವಿಡ್ ಸೋಂಕಿತರಿಗೆ ಮತ್ತು ಶಂಕಿತರಿಗೆ ಗುಣಮಟ್ಟದ ಸೇವೆ ಮತ್ತು ಉತ್ತಮ ಚಿಕಿತ್ಸೆ ಒದಗಿಸುವಲ್ಲಿ ಆಗುತ್ತಿರುವ ದೈನಂದಿನ ವೈಫಲ್ಯಗಳು ರಾಜ್ಯದಲ್ಲಿ ಒಂದು ಕರಾಳ ಅಧ್ಯಾಯವನ್ನು ಆರಂಭಿಸಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸೋಂಕಿತರಿರಲಿ ಅಥವಾ ಶಂಕಿತರಿರಲಿ ಅವರಿಗೆ ಕನಿಷ್ಠ ಸೌಲಭ್ಯಗಳುಳ್ಳ ಸೇವೆ ದೊರಕುವುದು ಮರೀಚಿಕೆಯಾಗಿ ಮಾನವೀಯ ಅನುಕಂಪದ ಕ್ರಮಗಳು ಇಲ್ಲದಿರುವುದರಿಂದ ಶಂಕಿತರು ಮತ್ತು ಸೋಂಕಿತರು ವಿಲವಿಲ ಒದ್ದಾಡುವಂತಾಗಿದೆ. ಆಂಬುಲೆನ್ಸ್ ಗಳ ಕೊರತೆ ತೀವ್ರ ಪ್ರಮಾಣದಲ್ಲಿದೆ ಎಂದು ಅವರು ಹೇಳಿದ್ದಾರೆ.

ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು 2-3 ದಿನಗಳ ವಿಳಂಬವಾಗುತ್ತಿದೆ. ಆಂಬುಲೆನ್ಸ್ ಸಿಗದೇ ಮನೆ ಬಾಗಿಲಲ್ಲಿ ಕೆಲವರು ಮೃತಪಟ್ಟಿದ್ದಾರೆ. ಕೆಲವರಂತೂ ಹಾಸಿಗೆ ಸಿಗದೇ ಆಸ್ಪತ್ರೆಯ ಆವರಣದಲ್ಲಿಯೇ ಮೃತಪಟ್ಟಿದ್ದಾರೆ. ಉತ್ತಮ ಚಿಕಿತ್ಸೆ, ಆಂಬುಲೆನ್ಸ್ ಸೇವೆ ಮತ್ತು ಗೌರವಯುತ ಅಂತ್ಯಸಂಸ್ಕಾರಗಳು ಅತ್ಯಂತ ಪ್ರಮುಖವಾದ ಅವಶ್ಯಕತೆಗಳು ದಿನನಿತ್ಯವು ಈ ಸೇವೆಗಳನ್ನು ಒದಗಿಸುವಲ್ಲಿ ಆಗುತ್ತಿರುವ ಪ್ರಮಾದ ಮತ್ತು ಹೀನಾಯವಾದ ಪರಿಸ್ಥಿತಿಯ ಬಗ್ಗೆ ತಕ್ಷಣವೇ ಸರಿಪಡಿಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಕೊರೋನ ಪೀಡಿತರಾಗಿ ಮನೆಯಲ್ಲಿಯೇ ಪ್ರತ್ಯೇಕಿಸಲ್ಪಟ್ಟಿರುವವರಿಗೆ 8-10 ದಿನಗಳು ಕಳೆದರೂ ಹೋಮ್ ಕ್ವಾರಂಟೈನ್ ಕಿಟ್ ನೀಡಲಾಗಿಲ್ಲ ಎಂಬ ವರದಿಗಳಿವೆ. ಕೊರೋನ ನಿರ್ವಹಣೆಯಲ್ಲಿ ಪ್ರತಿಯೊಂದು ಪರಿಕರದ ಖರೀದಿಯಲ್ಲಿ ಭ್ರಷ್ಟಾಚಾರದ ದೂರುಗಳು ಕೇಳಿಬಂದಿದ್ದು, ಸರಕಾರ ಖರೀದಿಸಿರುವ ಉಪಕರಣಗಳು, ಪರಿಕರಗಳು, ಚಿಕಿತ್ಸಾ ಸಾಮಗ್ರಿಗಳು ಕಳಪೆ ಮಟ್ಟದ್ದವೆಂದು ದೂರುಗಳು ಪುಂಖಾನುಪುಂಖವಾಗಿ ಕೇಳಿಬರುತ್ತಿರುವುದರಿಂದ ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಟಾಚಾರದ ಸಂದೇಹಗಳು ಬಲವಾಗುತ್ತಿವೆ ಎಂದು ಎಚ್.ಕೆ.ಪಾಟೀಲ್ ತಮ್ಮ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News