ಹಾಸನ: ಕೊರೋನದಿಂದ ಮೃತಪಟ್ಟ ಒಟ್ಟು 14 ಮಂದಿಯ ಅಂತ್ಯಸಂಸ್ಕಾರ ಮಾಡಿದ ಪಿಎಫ್ಐ ಕಾರ್ಯಕರ್ತರು

Update: 2020-07-21 18:37 GMT

ಹಾಸನ, ಜು.21: ಕೊರೋನ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾಸನದ ಪಿಎಫ್ಐ ಕಾರ್ಯಕರ್ತರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಇದುವರೆಗೆ 14 ಶವಗಳನ್ನು ಅಂತ್ಯಕ್ರಿಯೆ ನಡೆಸಿದ್ದಾರೆ.

ಅಂತ್ಯಕ್ರಿಯೆ ನೆರವೇರಿಸುವ ನಗರದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಿಎಫ್ಐ ಯುವಕರ ತಂಡ ಜಿಲ್ಲಾಡಳಿತ ನೀಡುವ ಪಿಪಿಇ ಕಿಟ್ ಧರಿಸಿ ವಿಧಿವಿಧಾನ ಪ್ರಕಾರ ಅಂತಿಮ ಕಾರ್ಯ ಗೌರವ ಪೂರ್ವಕವಾಗಿ ಪೂರ್ಣಗೊಳಿಸುತ್ತಿದೆ. ಕೊರೋನ ಸೋಂಕಿನಿಂದ ಮೃತಪಟ್ಟಾಗ ಆರೋಗ್ಯ ಅಧಿಕಾರಿಗಳು ಪಿಎಫ್ಐ ಕಾರ್ಯಕರ್ತರಿಗೆ ಮಾಹಿತಿ ನೀಡುತ್ತಾರೆ. ಕೂಡಲೇ ಆಸ್ಪತ್ರೆಗೆ ತೆರಳುವ ಕಾರ್ಯಕರ್ತರು ಸರಕಾರಿ ಸಿಬ್ಬಂದಿ, ಕುಟುಂಬ ಸದಸ್ಯರಲ್ಲಿ ಚರ್ಚಿಸಿ ಶವವನ್ನು ತೆಗೆದುಕೊಂಡು ಅಂತ್ಯಸಂಸ್ಕಾರ ನಡೆಸುತ್ತಾರೆ. ಹೀಗೆ ಇದುವರೆಗೆ ಒಟ್ಟು 14 ಶವಗಳ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

"ಮೃತ ವ್ಯಕ್ತಿಯನ್ನು ಗೌರವದಿಂದ ಬೀಳ್ಕೊಡಬೇಕೆಂಬ ಉದ್ದೇಶದಿಂದ ಅಂತ್ಯಸಂಸ್ಕಾರ ಕಾರ್ಯದಲ್ಲಿ ತೊಡಗಿದ್ದೇವೆ. ಜಿಲ್ಲಾಡಳಿತ ಸಹಕಾರದೊಂದಿಗೆ ಹಾಸನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಸರಕಾರದ ಶಿಷ್ಟಾಚಾರ ಪ್ರಕಾರ ತರಬೇತಿ ನೀಡಲಾಗಿದ್ದು, ಪಿಪಿಇ ಕಿಟ್ ಗಳನ್ನು ಜಿಲ್ಲಾಡಳಿತ ನೀಡುತ್ತಿದೆ. ನಗರಸಭೆ ಮೂಲಕ ಜೆಸಿಬಿಯಲ್ಲಿ ಗುಂಡಿ ತೆಗೆಯಲಾಗುತ್ತದೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಪಿಎಫ್ ಐ ಕಾರ್ಯಕರ್ತ ವಸೀಮ್ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News