ಕೋವಿಡ್ ಲಸಿಕೆ ಅಧ್ಯಯನ ಮಾಹಿತಿಗಳಿಗೆ ಕನ್ನ ಹಾಕಲು ಯತ್ನಿಸಿದ ಇಬ್ಬರು ಚೀನೀ ಸೈಬರ್ ಕ್ರಿಮಿನಲ್ಸ್!

Update: 2020-07-22 06:12 GMT

ವಾಷಿಂಗ್ಟನ್: ಕೋವಿಡ್-19 ವಿರುದ್ಧ ಹೋರಡುವ ಲಸಿಕೆ ಕುರಿತ ಅಧ್ಯಯನದ ವಿವರಗಳನ್ನು ಕದಿಯಲು ಯತ್ನಿಸಿದ ಹಾಗೂ ಅಮೆರಿಕ ಮತ್ತು ಇತರ ದೇಶಗಳಲ್ಲಿ ನೂರಾರು ಕಂಪೆನಿಗಳ ಹಾಗೂ ರಕ್ಷಣಾ ಗುತ್ತಿಗೆದಾರರ ಮಾಹಿತಿಗಳಿಗೆ ಕನ್ನ ಹಾಕಿದ ಆರೋಪವನ್ನು ಇಬ್ಬರು ಚೀನೀ ನಾಗರಿಕರ ಮೇಲೆ ಹೊರಿಸಲಾಗಿದೆ ಎಂದು ಅಮೆರಿಕಾದ ನ್ಯಾಯಾಂಗ ಇಲಾಖೆ ಹೇಳಿದೆ.

ಚೀನಾದಲ್ಲಿದ್ದಾರೆಂದು ತಿಳಿಯಲಾದ ಲಿ ಕ್ಸಿಯೋಯು (34) ಹಾಗೂ ಡೊಂಗ್ ಜಿಯಾಝಿ (33)  ಇಬ್ಬರೂ ಅಮೆರಿಕ, ಚೀನಾ ಮತ್ತು ಹಾಂಕಾಂಗ್‍ನಲ್ಲಿರುವ ಮಾನವ ಹಕ್ಕು ಕಾರ್ಯಕರ್ತರನ್ನೂ ಟಾರ್ಗೆಟ್ ಮಾಡಿದ್ದರು ಎಂದು ಸಹಾಯಕ ಅಟಾರ್ನಿ ಜನರಲ್ ಜಾನ್ ಡೆಮೆರ್ಸ್ ಹೇಳಿದ್ದಾರೆ.

ಇಬ್ಬರು ಆರೋಪಿಗಳೂ ಕೆಲವೊಂದು ಸಂದರ್ಭಗಳಲ್ಲಿ ತಮ್ಮದೇ ವೈಯಕ್ತಿಕ ಲಾಭಕ್ಕಾಗಿ ಹಾಗೂ ಇನ್ನು ಕೆಲ ಸಂದರ್ಭ ಚೀನಾದ ಭದ್ರತಾ ಸಚಿವಾಲಯದ ಲಾಭಕ್ಕಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿಯಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಡೆಮೆರ್ಸ್ ಹೇಳಿದರು.

ಚೆಂಗ್ಡು ಎಂಬಲ್ಲಿನ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದ ಇಬ್ಬರು ಆರೋಪಿಗಳೂ ಕಳೆದ 10 ವರ್ಷಗಳಲ್ಲಿ ಕಂಪ್ಯೂಟರ್ ಹ್ಯಾಕಿಂಗ್ ಕೆಲಸಗಳಲ್ಲಿ ಸಕ್ರಿಯರಾಗಿದ್ದರು ಹಾಗೂ ಅವರು ಅಮೆರಿಕ, ಆಸ್ಟ್ರೇಲಿಯಾ, ಬೆಲ್ಜಿಯಂ, ಜರ್ಮನಿ, ಜಪಾನ್, ಲಿಥುವೇನಿಯ, ನೆದಲ್ರ್ಯಾಂಡ್ಸ್. ಸ್ಪೇನ್, ದಕ್ಷಿಣ ಕೊರಿಯ, ಸ್ವೀಡನ್ ಹಾಗೂ ಬ್ರಿಟನ್ ದೇಶಗಳ ಉತ್ಪಾದನಾ ಕ್ಷೇತ್ರಗಳ, ವೈದ್ಯಕೀಯ ಸಾಧನಗಳ, ಶೈಕ್ಷಣಿಕ, ಗೇಮಿಂಗ್ ಸಾಪ್ಟ್‍ವೇರ್, ಫಾರ್ಮಾ ಕಂಪೆನಿಗಳನ್ನು ಟಾರ್ಗೆಟ್ ಮಾಡಿದ್ದರು ಎಂದು ತಿಳಿದು ಬಂದಿದೆ.

ಅವರು ಕ್ಯಾಲಿಫೋರ್ನಿಯಾ, ಮೇರಿಲ್ಯಾಂಡ್, ಮೆಸಾಚುಸೆಟ್ಸ್ ಮತ್ತಿತರ ಕಡೆಗಳ ಬಯೋಟೆಕ್ ಕಂಪೆನಿಗಳನ್ನೂ ಟಾರ್ಗೆಟ್ ಮಾಡಿದ್ದರೂ ಯಾವುದೇ ಮಹತ್ವದ ಕೋವಿಡ್ ಸಂಶೋಧನೆಯ ಕುರಿತಾದ ದಾಖಲೆಗಳನ್ನು ಸೋರಿಕೆ ಮಾಡಿರಲಿಕ್ಕಿಲ್ಲ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News