ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ವಿರೋಧಿಸಿ ಹಳ್ಳಿ ಮಟ್ಟದಿಂದ ಹೋರಾಟ: ಸಿದ್ದರಾಮಯ್ಯ

Update: 2020-07-22 13:17 GMT

ಬೆಂಗಳೂರು, ಜು. 22: ರೈತರನ್ನು ಬೀದಿಪಾಲು ಮಾಡಿ, ಅವರ ಕತ್ತು ಹಿಚುಕುವ ಕರಾಳ ಶಾಸನ `ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ'ಯನ್ನು ವಿರೋಧಿಸಿ ಹಳ್ಳಿ ಮಟ್ಟದಿಂದ ಹೋರಾಟ ಆರಂಭಿಸಲಾಗುವುದು ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ತಮ್ಮ ನಿವಾಸದಲ್ಲಿ ರೈತ ಸಂಘಟನೆಗಳ ಮುಖಂಡರ ಜೊತೆ ಕಾಯ್ದೆ ವಿರೋಧಿಸಿ ಹೋರಾಟ ರೂಪಿಸುವ ಸಂಬಂಧ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರಕಾರದ ಈ ಕಾಯ್ದೆ ಜಾರಿಯಿಂದ ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿ ಬುಡಮೇಲು ಆಗುತ್ತದೆ. ಆಹಾರ ಸ್ವಾವಲಂಬನೆಗೆ ಧಕ್ಕೆ ತರುವ ಕುಟಿಲ ಪ್ರಯತ್ನ ಎಂದು ಟೀಕಿಸಿದರು.

ಕಾಯ್ದೆ ವಿರುದ್ಧ ಗ್ರಾಮ ಮಟ್ಟದಿಂದ ಹೋರಾಟ ಮಾಡಿ ಸಂಘರ್ಷದ ಹಾದಿ ಹಿಡಿಯಲು ನಾವು ಸಿದ್ಧ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಚಳವಳಿ ಆರಂಭಿಸುತ್ತೇವೆ ಎಂದ ಸಿದ್ಧರಾಮಯ್ಯ, ಮೊದಲು ವೈದ್ಯಕೀಯ ಉಪಕರಣ ಖರೀದಿಯಲ್ಲಿ ಆಗಿರುವ ಅವ್ಯವಹಾರ ಕುರಿತು ಮೊದಲು ಹೋರಾಟ ಕೈಗೆತ್ತಿಕೊಳ್ಳುತ್ತೇವೆ. ಬಳಿಕ ಭೂ ಸುಧಾರಣಾ ಕಾಯಿದೆಗೆ ಸಂಬಂಧಿಸಿದ ಚಳವಳಿ ಆರಂಭವಾಗಲಿದೆ ಎಂದರು.

ಅಲ್ಲದೆ, ಎಪಿಎಂಸಿ, ಇಂಧನ ಕಾಯಿದೆಗೆ ತಿದ್ದುಪಡಿ ಸೇರಿದಂತೆ ವಿವಿಧ ಕಾಯಿದೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೆ ತಂದಿರುವ ತಿದ್ದುಪಡಿ ಬಗ್ಗೆಯೂ ನಾವು ಹೋರಾಟ ನಡೆಸಲಿದ್ದೇವೆ. ರೈತರು ಹಾಗೂ ಜನಸಾಮಾನ್ಯರಿಗೆ ಮಾರಕವಾಗುವಂಥ ತಿದ್ದುಪಡಿಗಳನ್ನು ಉಭಯ ಸರಕಾರಗಳು ಜಾರಿಗೊಳಿಸುತ್ತಿವೆ ಎಂದು ಸಿದ್ಧರಾಮಯ್ಯ ಇದೇ ವೇಳೆ ದೂರಿದರು.

ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 13 ಸಾವಿರಕ್ಕೂ ಹೆಚ್ಚು ಕೇಸುಗಳು ನ್ಯಾಯಾಲಯಗಳಲ್ಲಿವೆ. ಒಂದು ವರದಿ ಪ್ರಕಾರ 1.70 ಲಕ್ಷ ಎಕರೆ ಜಮೀನು ಈ ವ್ಯಾಜ್ಯಗಳಿಗೆ ಸಂಬಂಧಿಸಿದೆ. ಒಂದು ಎಕರೆಗೆ 50 ಲಕ್ಷವಾದರೂ 70-80 ಕೋಟಿ ರೂ.ಮೌಲ್ಯದ ಜಮೀನು ಇದಾಗಿದೆ. ಆ ಎಲ್ಲ ಜಮೀನುಗಳು ಖರೀದಿ ಮಾಡಿರುವವರ ವಿರುದ್ಧವಾಗಿದೆ. ಇದನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು. ಆದರೆ, ಕಾಯಿದೆಗೆ ತಿದ್ದುಪಡಿ ತಂದು ಕೇಸುಗಳನ್ನು ವಜಾ ಮಾಡಿರುವುದರಿಂದ ಕೋಟ್ಯಂತರ ರೂ. ಮೌಲ್ಯದ ಜಮೀನುಗಳು ಉಳ್ಳವರ ಪಾಲಾಗುತ್ತಿದೆ. ಹೌಸಿಂಗ್ ಸೊಸೈಟಿ, ರಿಯಲ್ ಎಸ್ಟೇಟ್ ಉದ್ಯಮಿಗಳು, ಶ್ರೀಮಂತರು ಜಮೀನಿನ ಮೇಲೆ ಹಣ ಹೂಡಿಕೆ ಮಾಡುತ್ತಾರೆ. ಇದು ಮುಂದೆ ಹಣ ಮಾಡಿಕೊಳ್ಳುವ ಹುನ್ನಾರ. ಅವರ ಒತ್ತಡಕ್ಕೆ ಸರಕಾರ ಮಣಿದಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದರು. 

ರೈತರ ಜೊತೆ ನಡೆದ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಡಾ.ಎಚ್.ಸಿ.ಮಹಾದೇವಪ್ಪ, ರಾಮಲಿಂಗಾರೆಡ್ಡಿ, ಕೆ.ಆರ್. ರಮೇಶ್ ಕುಮಾರ್, ನಸೀರ್ ಅಹಮದ್, ರೈತ ಸಂಘಟನೆಗಳ ಪ್ರಮುಖರಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಚಾಮರಸಮಾಲಿ ಪಾಟೀಲ್, ವೀರಸಂಗಯ್ಯ, ಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.

ಸಚಿವ ಅಶೋಕ್ ನೇಗಿಲು ಹಿಡಿದಿದ್ದಾರೆಯೇ?

ಕಂದಾಯ ಸಚಿವ ಅಶೋಕ್ ರಾಜಕಾರಣಕ್ಕೆ ಬಂದಿದ್ದು ಯಾವಾಗ? 1974ರಲ್ಲಿ ಅವರು ರಾಜಕಾರಣದಲ್ಲಿ ಇದ್ದರೆ? ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಅಥವಾ ಕಾಗೋಡು ತಿಮ್ಮಪ್ಪ ಅವರನ್ನು ಕೇಳಿದರೆ ಭೂ ಸುಧಾರಣೆ ಕಾಯಿದೆ ಜಾರಿಗೆ ಬಂದ ಬಗ್ಗೆ ಹೇಳುತ್ತಾರೆ. ಅದರ ಇತಿಹಾಸ ವಿವರಿಸುತ್ತಾರೆ. ಕಂದಾಯ ಸಚಿವರಾದ ತಕ್ಷಣ ಎಲ್ಲ ಮಾಹಿತಿ ಅವರ ಬಳಿ ಇರುವುದೇ? ಎಂದಾದರೂ ಅವರು ಹೊಲ ಉಳುಮೆ ಮಾಡಿದ್ದಾರೆಯೇ? ನೇಗಿಲು ಹಿಡಿದಿದ್ದಾರೆಯೇ? ಎಂದು ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರಶ್ನಿಸಿದರು.

ನಮ್ಮ ಮನೆಯಲ್ಲಿ ಕೆಲಸದವರ ಜೊತೆ ನಾನೂ ಹೊಲ ಉಳುಮೆ ಮಾಡಲು ಹೋಗುತ್ತಿದ್ದೆ. ನೇಗಿಲ ಹಿಡಿ ಹಿಡಿದು ಅಂಗೈ ಗಾಯವಾಗುತ್ತಿತ್ತು. ನಾನು ಈಗಲೂ ನೇಗಿಲು ಕಟ್ಟಬಲ್ಲೆ, ಕುಂಟೆ ಕಟ್ಟಬಲ್ಲೆ, ಹಲುಬೆ ಹೊಡೆಯಬಲ್ಲೆ, ಮಟ್ಟ ಹೊಡೆಯಬಲ್ಲೆ, ಹೊಲ ಉಳುಮೆ ಮಾಡಬಲ್ಲೆ ಎಂದ ಸಿದ್ದರಾಮಯ್ಯ, ರೈತನಾಗಿ ಈ ಎಲ್ಲವನ್ನೂ ಅಶೋಕ್ ಮಾಡಿದ್ದಾರೆಯೇ? ಪ್ರಧಾನಿ ನರೇಂದ್ರ ಮೋದಿಯವರು ಹೊಲ ಉಳುಮೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ನಾನು ಚಹಾ ಮಾರಿದ್ದೇನೆ ಎಂದವರು ತಿಳಿಸಿದ್ದಾರೆ.

ಕಂದಾಯ ಸಚಿವರಾದವರು ಈ ಎಲ್ಲವನ್ನೂ ತಿಳಿದುಕೊಳ್ಳಬೇಕು. ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತರುವುದರಿಂದ ಏನೇನು ಅನಾಹುತ ಆಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಏನೂ ಗೊತ್ತಿಲ್ಲ ಎಂದು ಹೇಳುವುದಿಲ್ಲ. ಈ ಎಲ್ಲವನ್ನೂ ತಿಳಿದುಕೊಳ್ಳುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News