ವಿಧಾನ ಪರಿಷತ್​ಗೆ ಎಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್ ಸೇರಿ ಐವರ ನಾಮನಿರ್ದೇಶನ

Update: 2020-07-22 17:24 GMT
ಎಚ್.ವಿಶ್ವನಾಥ್- ಸಿ.ಪಿಯೋಗೇಶ್ವರ್

ಬೆಂಗಳೂರು, ಜು.22: ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದ ಪತನಕ್ಕೆ ಪ್ರಮುಖ ಕಾರಣಕರ್ತರು ಎನ್ನಲಾದ ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್ ಹಾಗೂ ಎಚ್.ವಿಶ್ವನಾಥ್ ಸೇರಿದಂತೆ ಐವರಿಗೆ ವಿಧಾನಪರಿಷತ್ತಿಗೆ ನಾಮ ನಿರ್ದೇಶನ ಮಾಡುವಂತೆ ರಾಜ್ಯ ಸರಕಾರ ಮಾಡಿದ್ದ ಶಿಫಾರಸ್ಸಿಗೆ ರಾಜ್ಯಪಾಲ ವಜುಭಾಯಿ ವಾಲಾ ಬುಧವಾರ ಅಂಕಿತ ಹಾಕಿದ್ದಾರೆ.

ಸಿ.ಪಿ.ಯೋಗೇಶ್ವರ್, ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತಾರಾಮ್ ಬುಡ್ನಾ ಸಿದ್ದಿ ಹಾಗೂ ಡಾ.ತಳವಾರ್ ಸಾಬಣ್ಣ ಅವರನ್ನು ವಿಧಾನಪರಿಷತ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಎದುರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರದ ಪತನದ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದರು.

ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್ ಪರಾಭವಗೊಂಡಿದ್ದರು. ಇದೀಗ, ವಿಧಾನಪರಿಷತ್ ಪ್ರವೇಶಿಸುವ ಮೂಲಕ ಮತ್ತೊಂದು ಅವಕಾಶ ಪಡೆದುಕೊಂಡಿದ್ದಾರೆ.

ಸಾಹಿತ್ಯ ಕ್ಷೇತ್ರದಿಂದ ಎಚ್​. ವಿಶ್ವನಾಥ್​​​, ಸಿನಿಮಾ ಕ್ಷೇತ್ರದಿಂದ ಸಿ.ಪಿ ಯೋಗೇಶ್ವರ್​​, ಸಮಾಜ ಸೇವೆ ಕ್ಷೇತ್ರದಿಂದ ಭಾರತಿ ಶೆಟ್ಟಿ, ಶಿಕ್ಷಣ ಕ್ಷೇತ್ರದಿಂದ ಸಾಬಣ್ಣ ತಳವಾರ, ಬುಡಕಟ್ಟು ಕ್ಷೇತ್ರದಿಂದ ಶಾಂತಾರಾಂ ಸಿದ್ದಿರನ್ನು ಪರಿಷತ್​​ಗೆ ನಾಮನಿರ್ದೇಶನ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News