ಕೊರೋನದಿಂದ ಗುಣಮುಖರಾದ ಉದ್ಯಮಿ ಖಾದರ್ ಶೇಖ್ ರಿಂದ ಬಡವರಿಗಾಗಿ ಹೊಸ ಆಸ್ಪತ್ರೆ !

Update: 2020-07-22 14:34 GMT
ಸಾಂದರ್ಭಿಕ ಚಿತ್ರ

ಸೂರತ್, ಜು. 22: ಸ್ವತಃ ಕೊರೋನ ಸೋಂಕಿಗೆ ಒಳಗಾಗಿ ಗುಣಮುಖರಾದ ಸೂರತ್‌ನ ಉದ್ಯಮಿಯೊಬ್ಬರು ಕೊರೋನ ಸೋಂಕಿತರಿಗಾಗಿ ಇಲ್ಲಿ ಆಸ್ಪತ್ರೆಯೊಂದನ್ನು ನಿರ್ಮಿಸಿ ಹೃದಯ ವೈಶಾಲ್ಯ ಮೆರೆದಿದ್ದಾರೆ. ಸೂರತ್‌ನ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ 63ರ ಹರೆಯದ ಖಾದರ್ ಶೇಖ್ ಕಳೆದ ತಿಂಗಳು ಕೊರೋನ ಸೋಂಕಿಗೆ ಒಳಗಾಗಿದ್ದರು. ಅನಂತರ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗುಣಮುಖರಾಗಿದ್ದರು. ಈ ಸಂದರ್ಭ ಅವರು ಬಡವರಿಗೆ ಇಷ್ಟೊಂದು ವೆಚ್ಚ ಮಾಡಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವೇ ಎಂದು ಚಿಂತಿಸಿದ್ದರು.

ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಶೇಖ್ ಶ್ರೇಯಮ್ ಸಂಕೀರ್ಣಲ್ಲಿರುವ ತನ್ನ 30 ಸಾವಿರ ಚದರ ಅಡಿ ವಿಸ್ತೀರ್ಣದ ಕಚೇರಿಯನ್ನು ಕೊರೋನ ಸೋಂಕಿತ ಬಡ ರೋಗಿಗಳಿಗೆ ಚಿಕಿತ್ಸೆ ನೀಡಲು ಆಮ್ಲಜನಕ ಹಾಗೂ 85 ಬೆಡ್‌ಗಳ ಸೌಲಭ್ಯ ಇರುವ ಆಸ್ಪತ್ರೆಯಾಗಿ ಪರಿವರ್ತಿಸುವ ಕೆಲಸ ಆರಂಭಿಸಿದ್ದರು. ಸೂರತ್‌ನ ಅಡಜಾನ ಪ್ರದೇಶದಲ್ಲಿ 15 ತುರ್ತು ನಿಗಾ ಘಟಕದ ಬೆಡ್‌ಗಳಿರುವ ಈ ಆಸ್ಪತ್ರೆಗೆ ವೈದ್ಯಕೀಯ ಸಿಬ್ಬಂದಿ ಹಾಗೂ ಸಲಕರಣೆಗಳನ್ನು ಪೂರೈಸಲು ಸೂರತ್ ನಗರಾಡಳಿತದೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದರು. ನಗರಾಡಳಿತ ಆಯುಕ್ತ ಬಿ.ಎನ್. ಪಾನಿ ಹಾಗೂ ನಗರಾಡಳಿತದ ಉಪ ಆರೋಗ್ಯ ಆಯುಕ್ತ ಡಾ. ಆಶಿಶ್ ನಾಕ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಪ್ರಾಸ್ತಾಪಕ್ಕೆ ಅನುಮತಿ ನೀಡಿದ್ದಾರೆ. ಈ ಆಸ್ಪತ್ರೆಗೆ ಶೇಖ್ ಅವರ ಪುತ್ರಿ ಹಿಬಾ ಅವರ ಹೆಸರು ಇರಿಸಲಾಗಿದೆ.

 ಮೂಲಭೂತ ಸೌಕರ್ಯಗಳು ಸಿದ್ಧವಾದ ಬಳಿಕ ಸೂರತ್ ನಗರಾಡಳಿತದ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಿಬಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಹಾಗೂ ವ್ಯವಸ್ಥೆಯ ಪರಿಶೀಲನೆ ನಡೆಸಿದ್ದಾರೆ. ‘‘ನಾವು ಆಸ್ಪತ್ರೆಯ ಪರಿಶೀಲನೆ ನಡೆಸಿದ್ದೇವೆ. ಮುಂದಿನ ಕೆಲವು ದಿನಗಳಲ್ಲಿ ಆಸ್ಪತ್ರೆ ಕಾರ್ಯಾರಂಭವಾಗಲಿದೆ. ನ್ಯೂ ಸಿವಿಲ್ ಆಸ್ಪತ್ರೆ ಹಾಗೂ ಎಸ್‌ಎಂಐಎಂಇಆರ್ ಆಸ್ಪತ್ರೆಯ ರೋಗಿಗಳನ್ನು ಇಲ್ಲಿಗೆ ಶಿಫಾರಸು ಮಾಡಲಾಗುವುದು’’ ಎಂದು ಡಾ. ಆಶಿಶ್ ನಾಕ್ ತಿಳಿಸಿದ್ದಾರೆ.

‘‘ನಾನು ಚಿನ್ನದ ಚಮಚವನ್ನು ಬಾಯಿಯಲ್ಲಿ ಇರಿಸಿಕೊಂಡು ಜನಿಸಿದವನಲ್ಲ. ನಾನು ಕೂಡ ಹಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ಶ್ರಮಪಟ್ಟು ಕೆಲಸ ಮಾಡಿ ಈಗ ಆರ್ಥಿಕವಾಗಿ ಸಬಲನಾಗಿದ್ದೇನೆ. ಆದುದರಿಂದ ಕೊರೋನ ಸೋಂಕಿತ ಬಡ ರೋಗಿಗಳಿಗೆ ನೆರವಿನ ಹಸ್ತ ಚಾಚಲು ನಿರ್ಧರಿಸಿದೆ’’ ಎಂದು ಶೇಖ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News