ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ರೊಂದಿಗೆ ನೆಟ್ಟಿಗರ ಜಟಾಪಟಿ

Update: 2020-07-22 17:01 GMT

ಬೆಂಗಳೂರು, ಜು.22: ಸಾಮಾಜಿಕ ಜಾಲತಾಣಗಳಲ್ಲಿ ಕೊರೋನ ಹಾಗೂ ಸರಕಾರಿ ಆಸ್ಪತ್ರೆ ಕುರಿತು ತಪ್ಪು ಸಂದೇಶ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದರು ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ನೆಟ್ಟಿಗರ ನಡುವೆ ಜಟಾಪಟಿ ನಡೆದಿದೆ.

ನಗರದ ಪ್ರಮುಖ ಕೋವಿಡ್-19 ಆಸ್ಪತ್ರೆಯಾಗಿರುವ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ನಲ್ಲಿದ್ದ ಶೇ. 97ರಷ್ಟು ಮಂದಿ ಕರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸುದ್ದಿ ಮೂಲಗಳಿಂದ ತಿಳಿದು ಬರುತ್ತಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾಸ್ಕರ್ ರಾವ್, ನೀವು ಟ್ವೀಟ್ ಮಾಡಿದ ಮಾಹಿತಿ ಬಗ್ಗೆ ತನಿಖೆ ಮಾಡುತ್ತೇವೆ. ಹಾಗೆಯೇ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಈ ವಿಚಾರದ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ಸಹ ಕೊಡಲಾಗಿದೆ. ನೀವು ಕಳುಹಿಸಿರುವ ಮಾಹಿತಿ ಸರಿ ಇದ್ದರೆ ಸರಕಾರ ಕ್ರಮ ಕೈಗೊಳ್ಳುತ್ತದೆ. ಒಂದು ವೇಳೆ ನೀವು ಕಳುಹಿಸಿದ ಮಾಹಿತಿ ತಪ್ಪಿದ್ದರೆ ಮುಂದಿನ ತನಿಖೆ ಎದುರಿಸಲು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಮತ್ತೊಮ್ಮೆ ಯುವಕ ಟ್ವೀಟ್ ಮಾಡಿ, ಸುದ್ದಿ ಮಾಧ್ಯಮದ ಆಧಾರದ ಮೇರೆಗೆ ಟ್ವೀಟ್ ಮಾಡಿದ್ದೇನೆ ಎಂದಿದ್ದಾರೆ. ಈ ತರದ ಸುದ್ದಿಗಳನ್ನು ಲೈಕ್ ಮಾಡಿ ಮರು ಟ್ವೀಟ್ ಮಾಡಿದರೆ ಸಿಸಿಬಿ ವಿಭಾಗ ಕ್ರಮಕೈಗೊಳ್ಳುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ, ನಿಮ್ಮ ಗಮನಕ್ಕೆ ತಪ್ಪು ಸುದ್ದಿಗಳನ್ನು ತರಬಾರದೇ? ಎಂದು ಇತರ ನೆಟ್ಟಿಗರು ಆಯುಕ್ತರನ್ನು ಪ್ರಶ್ನಿಸಿದ್ದಾರೆ.

ಸದ್ಯ ವಿಕ್ಟೋರಿಯಾ ಆಸ್ಪತೆಯ ಬಗ್ಗೆ ಹರಿದಾಡುವ ಸುದ್ದಿ ಕುರಿತು ಗಂಭೀರವಾಗಿ ತನಿಖೆ ನಡೆಸುವಂತೆ ಸಿಸಿಬಿಗೆ ಸೂಚಿಸಿದ್ದು, ಸಿಸಿಬಿ ತಾಂತ್ರಿಕ ವಿಭಾಗ ಈ ಕುರಿತು ತನಿಖೆ ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News