ಭಾರತದಲ್ಲಿ ಫೇಸ್‌ಬುಕ್ ಮೇಲೆಯೂ ನಿರ್ಬಂಧ ?

Update: 2020-07-23 05:25 GMT

ಹೊಸದಿಲ್ಲಿ: ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು ಭಾರತದಲ್ಲಿ ಟಿಕ್ ಟಾಕ್ ಮೇಲೆ ಹೇರಲಾಗಿರುವ ನಿಷೇಧದ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದಾರೆ. 

ಭಾರತ ಸರಕಾರ ಟಿಕ್ ಟಾಕ್ ನಿಷೇಧಿಸುವ ಕ್ರಮ ಕೈಗೊಂಡಿರುವುದು ಆತಂಕಕಾರಿ ಎಂದು ಫೇಸ್ ಬುಕ್ ಸಿಇಒ ತಮ್ಮ ಉದ್ಯೋಗಿಗಳಲ್ಲಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಚೀನಾ ಜತೆಗಿನ ಗಡಿ ಉದ್ವಿಗ್ನತೆಯ ನಂತರ ಭಾರತ ಸರಕಾರ ನಿಷೇಧಿಸಿದ 59 ಚೀನೀ ಆ್ಯಪ್‍ಗಳಲ್ಲಿ ಟಿಕ್ ಟಾಕ್ ಕೂಡ ಸೇರಿತ್ತು. ಮುಖ್ಯವಾಗಿ ಟಿಕ್ ಟಾಕ್‍ಗೆ ಭಾರತದಲ್ಲಿ 20 ಕೋಟಿ ಬಳಕೆದಾರರಿದ್ದುದು ವಿಶೇಷ.

ಟಿಕ್ ಟಾನ್ ನಿಷೇಧದ ಬೆನ್ನಲ್ಲೇ ಟಿಕ್ ಟಾಕ್ ಮಾದರಿಯ `ರೀಲ್ಸ್' ಆ್ಯಪ್ ಅನ್ನು ಫೇಸ್ ಬುಕ್ ಒಡೆತನದ ಇನ್‍ಸ್ಟಾಗ್ರಾಂ ಬಿಡುಗಡೆಗೊಳಿಸಿತ್ತಾದರೂ ಮಹತ್ವದ ಕಾರಣಗಳನ್ನು ನೀಡದೆ ಭಾರತ ಟಿಕ್ ಟಾಕ್ ನಿಷೇಧಿಸಿರುವಾಗ ಮುಂದೆ ಫೇಸ್ ಬುಕ್ ನಿಂದಲೂ ಏನಾದರೂ ಸಮಸ್ಯೆಯಾದಲ್ಲಿ ಭಾರತ ಸರಕಾರ ಫೇಸ್ ಬುಕ್ ಅನ್ನೂ ನಿಷೇಧಿಸಬಹುದೆಂಬ ಆತಂಕ ಝುಕರ್ ಬರ್ಗ್ ಅವರದ್ದು.

ಈಗಾಗಲೇ ಫೇಸ್ ಬುಕ್ ಜಗತ್ತಿನ ವಿವಿಧ ಸರಕಾರಗಳ ಜತೆಗೆ ರಾಷ್ಟ್ರೀಯ ಭದ್ರತೆ, ಚುನಾವಣಾ ಹಸ್ತಕ್ಷೇಪ, ಪ್ರಭಾವ ಬೀರುವ ಅಭಿಯಾನಗಳು, ದ್ವೇಷದ ಭಾಷಣ ಮುಂತದ ವಿಚಾರಗಳ ಕುರಿತಂತೆ ಒಂದಿಷ್ಟು ಗುದ್ದಾಟದಲ್ಲಿದೆ. ಸದ್ಯ ಭಾರತದ ಜತೆಗೆ ಫೇಸ್ ಬುಕ್‍ಗೆ ಅಂತಹ ಸಮಸ್ಯೆ ಏನೂ ಇಲ್ಲವಾದರೂ ಭವಿಷ್ಯದಲ್ಲಿ ಸಮಸ್ಯೆಗಳು ಉದ್ಭವವಾಗದು ಎಂದು ಹೇಳಲಾಗದು ಎಂಬ ಅಭಿಪ್ರಾಯವಿದೆ.

Similar News