ಬಳಸಿದ ಮಾಸ್ಕ್ ವಿಲೇವಾರಿಗೂ ಇದೆ ಮಾರ್ಗಸೂಚಿ...

Update: 2020-07-24 04:02 GMT

ಹೊಸದಿಲ್ಲಿ: ಎಲ್ಲ ಬಗೆಯ ಬಳಸಿದ ಮಾಸ್ಕ್ ಅಥವಾ ಕೈಗವಸುಗಳನ್ನು ವಿಲೇವಾರಿಗೆ ಮುನ್ನ ತುಂಡರಿಸಿ ಕನಿಷ್ಠ 72 ಗಂಟೆಗಳ ಕಾಲ ಕಾಗದ ಚೀಲದಲ್ಲಿ ಇಡುವುದು ಕಡ್ಡಾಯ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ.

ಕೋವಿಡ್-19 ತ್ಯಾಜ್ಯಗಳ ವಿಲೇವಾರಿಗೆ ಸಂಬಂಧಿಸಿದ ಇತ್ತೀಚಿನ ಮಾರ್ಗಸೂಚಿಯಲ್ಲಿ ಈ ಅಂಶ ಸ್ಪಷ್ಟಪಡಿಸಲಾಗಿದ್ದು, ಮಾಸ್ಕ್ ಅಥವಾ ಕೈಗವಸು ವೈರಸ್ ಸೋಂಕಿಗೀಡಾಗಿದ್ದರೂ, ಆಗಿರದಿದ್ದರೂ ಹೀಗೆ ಮಾಡುವುದು ಕಡ್ಡಾಯ ಎಂದು ಹೇಳಿದೆ.

ಮಾಲ್‌ಗಳು ಮತ್ತು ಕಚೇರಿಗಳು ಕೂಡಾ ಬಳಸಿದ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ)ಗಳನ್ನು ವಿಲೇವಾರಿ ಮಾಡುವಾಗ ಕೂಡಾ ಇದೇ ವಿಧಾನ ಅನುಸರಿಸಬೇಕು ಎಂದು ಸಲಹೆ ಮಾಡಿದೆ.

ವಾಣಿಜ್ಯ ಮಳಿಗೆಗಳಲ್ಲಿ, ಶಾಪಿಂಗ್ ಮಾಲ್‌ಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಮತ್ತು ಕಚೇರಿಗಳಲ್ಲಿ ಸಾರ್ವಜನಿಕರು ಬಳಸಿ ಎಸೆಯುವ ಪಿಪಿಇಗಳನ್ನು ಪ್ರತ್ಯೇಕವಾಗಿ ಕಸದಬುಡ್ಡಿಯಲ್ಲಿ ಮೂರು ದಿನಗಳ ಕಾಲ ಸಂಗ್ರಹಿಸಿ ಇಡಬೇಕು. ಬಳಿಕ ಅದನ್ನು ಕತ್ತರಿಸಿ ಅಥವಾ ಚೂರು ಮಾಡಿ ಸಾಮಾನ್ಯ ಘನ ತ್ಯಾಜ್ಯದ ಜತೆಗೆ ವಿಲೇವಾರಿ ಮಾಡಬೇಕು ಎಂದು ಹೇಳಿದೆ.

ಸಾಮಾನ್ಯ ಜನರು ಬಳಸಿ ಎಸೆಯುವ ಮಾಸ್ಕ್‌ಗಳನ್ನು ಕೂಡಾ ಕನಿಷ್ಠ 72 ಗಂಟೆಗಳವರೆಗೆ ಕಾಗದದ ಚೀಲದಲ್ಲಿ ಸಂಗ್ರಹಿಸಿ ಇಡಬೇಕು. ಬಳಿಕ ಒಣಕಸದ ಜತೆ ಅದನ್ನು ತುಂಡರಿಸಿ ವಿಲೇವಾರಿ ಮಾಡಬೇಕು. ಇದರಿಂದ ಮರು ಬಳಕೆ ತಡೆಯಬಹುದು ಎಂದು ಸಿಪಿಸಿಬಿ ವಿವರಿಸಿದೆ.

ಕೊರೋನ ವೈರಸ್‌ನಿಂದ ಸೃಷ್ಟಿಯಾಗುವ ಜೈವಿಕ ವೈದ್ಯಕೀಯ ತ್ಯಾಜ್ಯದ ನಿರ್ವಹಣೆ ಸಂಬಂಧ ಸಿಪಿಸಿಬಿ ನೀಡಿದ ನಾಲ್ಕನೇ ಮಾರ್ಗಸೂಚಿ ಇದಾಗಿದೆ. ಆದಾಗ್ಯೂ ಸೋಂಕಿತ ರೋಗಿಗಳು ಬಳಸಿ ಉಳಿದ ಆಹಾರ ಮತ್ತು ಖಾಲಿ ನೀರಿನ ಬಾಟಲಿಗಳನ್ನು ಇತರ ಜೈವಿಕ ವೈದ್ಯಕೀಯ ತ್ಯಾಜ್ಯದ ಜತೆ ಸಂಗ್ರಹಿಸಬಾರದು. ಆದರೆ ಇದನ್ನು ಇತರ ಸಾಮಾನ್ಯ ಘನ ತ್ಯಾಜ್ಯದ ಜತೆ ಸಂಗ್ರಹಿಸಬೇಕು ಎಂದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News