ನಿಮ್ಮ ಐಟಿ ದಾಖಲೆಗಳ ಮೆಲೆ ಗುಪ್ತಚರ ಬ್ಯೂರೋ, ಎನ್‍ಐಎ ಸಹಿತ ನಾಲ್ಕು ಏಜನ್ಸಿಗಳ ಕಣ್ಣು

Update: 2020-07-24 05:52 GMT

ಹೊಸದಿಲ್ಲಿ: ವ್ಯಕ್ತಿಗಳು ಹಾಗೂ ಸಂಸ್ಥೆಗಳು ಐಟಿ ಇಲಾಖೆಗೆ ಸಲ್ಲಿಸುವ ಐಟಿ ರಿಟನ್ರ್ಸ್ ಹಾಗೂ ಇತರ ತೆರಿಗೆ ಸಂಬಂಧಿತ ಮಾಹಿತಿಯನ್ನು ಪಡೆಯುವ ಅಧಿಕಾರವನ್ನು ಸರಕಾರ ಕ್ಯಾಬಿನೆಟ್ ಸೆಕ್ರಟೇರಿಯಟ್, ಗುಪ್ತಚರ ಬ್ಯೂರೋ, ನಾರ್ಕಾಟಿಕ್ಸ್ ಕಂಟ್ರೋಲ್ ಬ್ಯೂರೋ ಹಾಗೂ ರಾಷ್ಟ್ರೀಯ ತನಿಖಾ ಏಜನ್ಸಿ (ಎನ್‍ಐಎ)ಗೆ ಅಧಿಕೃತವಾಗಿ ನೀಡಿದೆ. ಈ ಕ್ರಮದ ಮೂಲಕ ಈ ಏಜನ್ಸಿಗಳಿಗೆ ಉಗ್ರವಾದ ಹತ್ತಿಕ್ಕಲು ಹಾಗೂ ಮಾದಕ ವಸ್ತುಗಳ ಕಳ್ಳಸಾಗಾಟ ಹಾಗೂ ಇತರ ಅಕ್ರಮಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸದ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆಂದು hindustantimes.com ವರದಿ ಮಾಡಿದೆ.

ಕೇಂದ್ರ ನೇರ ತೆರಿಗೆಗಳ ಮಂಡಳಿ ಈ ಕುರಿತು ಅಧಿಸೂಚನೆಯನ್ನು ಮಂಗಳವಾರ ಹೊರಡಿಸಿದೆ. ಆದಾಯ ತೆರಿಗೆ ಕಾಯಿದೆ 1961 ಇದರ ಸೆಕ್ಷನ್ 138 ಅನ್ವಯ ಆದಾಯ ತೆರಿಗೆ ಪ್ರಾಧಿಕಾರಗಳಿಗೆ ಲಭ್ಯ ಮಾಹಿತಿಯನ್ನು ಬೇರೆ ಯಾವುದೇ ಪ್ರಾಧಿಕಾರಕ್ಕೆ ನೀಡುವ ಅಧಿಕಾರವನ್ನು ಮಂಡಳಿ ಹೊಂದಿದೆ.

ಈ ರೀತಿ ಆದಾಯ ತೆರಿಗೆ ರಿಟನ್ರ್ಸ್ ಹಾಗೂ ತೆರಿಗೆ ಸಂಬಂಧಿತ ಇತರ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವ ಕುರಿತಂತೆ ಮಂಗಳವಾರ ಕೇಂದ್ರ ನೇರ ತೆರಿಗೆಗಳ ಮಂಡಳಿ ಹಾಗೂ ಕೇಂದ್ರ ಪರೋಕ್ಷ ತೆರಿಗೆಗಳು ಹಾಗೂ ಕಸ್ಟಮ್ಸ್ ಮಂಡಳಿ ಸಹಿ ಹಾಕಿವೆ.

ಪ್ರಾಮಾಣಿಕವಾಗಿ ಆದಾಯ ತೆರಿಗೆ ಪಾವತಿಸುವವರಿಗೆ ಈ ಕ್ರಮದಿಂದ ಸಮಸ್ಯೆಯಾಗದು ಎಂದು ತಜ್ಞರು ಹೇಳುತ್ತಾರೆ.ಆದರೆ ತೆರಿಗೆದಾರರು ಜಾಗೃತರಾಗಬೇಕಿದ್ದು  ಅವರು ನೀಡುವ ಮಾಹಿತಿ ಹಾಗೂ ಸಲ್ಲಿಸುವ ದಾಖಲೆಗಳಲ್ಲಿ ವ್ಯತ್ಯಾಸಗಳು ಕಂಡು ಬಂದಲ್ಲಿ ಅದು ತನಿಖಾ ಏಜನ್ಸಿಗಳ ಗಮನಕ್ಕೆ ಬಂದು ಕೂಲಂಕಷ ತನಿಖೆಗೊಳಗಾಗಬಹುದು ಎಂದು ತಜ್ಞರು ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News