ಮಹಾರಾಷ್ಟ್ರ ಚುನಾವಣೆಗೆ ಮುನ್ನ ಚುನಾವಣಾ ಆಯೋಗದಲ್ಲಿ ಬಿಜೆಪಿ ಐಟಿ ಸೆಲ್ ಸದಸ್ಯ!

Update: 2020-07-24 06:47 GMT

ಮುಂಬೈ: ಕಳೆದ ವರ್ಷದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಚುನಾವಣಾ ಆಯೋಗ ಹಾಗೂ ಬಿಜೆಪಿ ಐಟಿ ಸೆಲ್ ನಡುವೆ ನಂಟಿತ್ತು ಎನ್ನುವ ಗಂಭೀರ ಆರೋಪವನ್ನು ಸಾಮಾಜಿಕ ಹೊರಾಟಗಾರ ಸಾಕೇತ್ ಗೋಖಲೆ ಮಾಡಿದ್ದಾರೆ. ಇದೀಗ ಅವರ ಈ ಆರೋಪಗಳು ಭಾರೀ ಸಂಚಲನ ಸೃಷ್ಟಿಸಿದೆ.

ಈ ಬೆಳವಣಿಗೆಯಿಂದ ಭಾರೀ ಟೀಕೆಗೊಳಗಾಗಿರುವ ಚುನಾವಣಾ ಆಯೋಗ ಈ ಕುರಿತಂತೆ ವಿಸ್ತೃತ ವರದಿ ಕೇಳಿದೆ.

ಮಹಾರಾಷ್ಟ್ರದ ಚುನಾವಣಾ ಆಯೋಗವು ಬಿಜೆಪಿ ಐಟಿ ಸೆಲ್‍ ನ ಪ್ರಮುಖ ಸದಸ್ಯರೊಬ್ಬರನ್ನು ಸಾಮಾಜಿಕ ಜಾಲತಾಣ ನಿರ್ವಹಣೆಗೆ ನೇಮಕ ಮಾಡಿತ್ತು ಎಂದು ಗೋಖಲೆ ಅವರು ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.

“ಆಘಾತಕಾರಿ ಮಾಹಿತಿಗಳು: 2019 ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಭಾರತದ ಚುನಾವಣಾ ಆಯೋಗ ಮಹಾರಾಷ್ಟ್ರದ ತನ್ನ ಸಾಮಾಜಿಕ ಜಾಲತಾಣ ಖಾತೆಯನ್ನು ನಿಭಾಯಿಸಲು ಬಿಜೆಪಿ ಐಟಿ ಸೆಲ್ ಅನ್ನು ವಸ್ತುಶಃ ಬಾಡಿಗೆಗೆ ಪಡೆದುಕೊಂಡಿತ್ತು'' ಎಂದು ಗೋಖಲೆ ಟ್ವೀಟ್ ಮಾಡಿದ್ದರು.

ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ವಿಧಾನಸಭಾ ಚುನಾವಣೆ ಸಂದರ್ಭ ಪ್ರಮೋಟ್ ಮಾಡಿದ್ದ ಒಂದೆರಡು ಸಾಮಾಜಿಕ ಜಾಲತಾಣ ಪೋಸ್ಟ್ ಗಳ ಸ್ಕ್ರೀನ್ ಶಾಟ್‍ಗಳನ್ನು ತಮ್ಮ ಮುಂದಿನ ಟ್ವೀಟ್‍ ನಲ್ಲಿ ಗೋಖಲೆ ಪೋಸ್ಟ್ ಮಾಡಿದ್ದರು.

“ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿಯ ಹಳೆಯ ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನು ಪರಿಶೀಲಿಸಿದಾಗ ಏನೋ ವಿಚಿತ್ರ ಕಂಡು ಬಂತು. ಪ್ರತಿ ಜಾಹೀರಾತಿನಲ್ಲಿ ವಿಳಾಸ ಒಂದೇ ಆಗಿತ್ತು- ``202 ಪ್ರೆಸ್ ಮ್ಯಾನ್ ಹೌಸ್, ವಿಲೆ ಪಾರ್ಲೆ, ಮುಂಬೈ,''

"ಈ ನಿರ್ದಿಷ್ಟ ವಿಳಾಸದ ಕುರಿತು ಇನ್ನೂ ಜಾಲಾಡಿದಾಗ ಅದು ಸೈನ್‍ ಪೋಸ್ಟ್ ಇಂಡಿಯಾ ಎಂಬ ಜಾಹೀರಾತು ಕಂಪೆನಿಯದ್ದಾಗಿತ್ತು ಹಾಗೂ ಹಿಂದಿನ ಫಡ್ನವೀಸ್ ಆಡಳಿತಾವಧಿಯಲ್ಲಿ ಅದು ಸರಕಾರದ ಜಾಹಿರಾತುಗಳಿಗಾಗಿ ಕೆಲಸ ಮಾಡುವ ಏಜನ್ಸಿಯಾಗಿತ್ತು. ಈ ನಿರ್ದಿಷ್ಟ ವಿಳಾಸವನ್ನು ಇನ್ನೊಂದು ಡಿಜಿಟಲ್ ಏಜನ್ಸಿ- ಸೋಶಿಯಲ್ ಸೆಂಟ್ರಲ್ ಕೂಡ ಬಳಸುತ್ತಿತ್ತು ಇದರ ಮಾಲಕ ದೇವಾಂಗ್ ದವೆ ಆಗಿದ್ದಾರೆ ಹಾಗೂ ಅವರು ಬಿಜೆಪಿ ಯುವ ಘಟಕದ ಐಟಿ ಮತ್ತು ಸೋಶಿಯಲ್ ಮೀಡಿಯಾ ಸೆಲ್‍ ರಾಷ್ಟ್ರೀಯ ಸಂಚಾಲಕರಾಗಿದ್ದಾರೆ ಹಾಗೂ ಅವರ ಕ್ಲಯಂಟ್‍ ಗಳ ಪೈಕಿ ಸರಕಾರಿ ಏಜನ್ಸಿಗಳು, ಅವರದ್ದೇ ಪಕ್ಷವಾಗಿರುವ ಬಿಜೆಪಿ ಹಾಗೂ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಯಿದ್ದಾರೆ'' ಎಂದು ಗೋಖಲೆ ಟ್ವೀಟ್ ಮಾಡಿದ್ದಾರೆ. ದೇವಾಂಗ್ ದವೆ ಅವರು 'ದಿ ಫಿಯರ್ಲೆಸ್ ಇಂಡಿಯನ್', 'ಐ ಸಪೋರ್ಟ್ ನರೇಂದ್ರ ಮೋದಿ' ವೆಬ್ ಸೈಟ್ ಹಾಗೂ ಪುಟಗಳ ಸ್ಥಾಪಕನಾಗಿದ್ದಾರೆ.

“ಚುನಾವಣಾ ಆಯೋಗವು ಬಿಜೆಪಿ ಐಟಿ ಸೆಲ್‍ ನ ವ್ಯಕ್ತಿ ಮತ್ತು ಆತನ ಏಜನ್ಸಿಯನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ಮಹಾರಾಷ್ಟ್ರ ಚುನಾವಣೆ ಸಂದರ್ಭ  ನಿಭಾಯಿಸಲು ಬಳಸಿರುವುದು ಆಘಾತಕಾರಿ. ಚುನಾವಣಾ ಆಯೋಗ ವಿವಿಧ ಪಕ್ಷಗಳ ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣೆ ವೇಳೆ ನಿಗಾ ಇಡಬೇಕಿತ್ತು, ಆದರೆ ಇಲ್ಲಿ ಅವರು ವಸ್ತುಶಃ ಆಗಿನ ಆಡಳಿತ ಪಕ್ಷದ ಜತೆ ಕೆಲಸ ಮಾಡಿದ್ದಾರೆ'' ಎಂದು ಗೋಖಲೆ  ಬರೆದಿದ್ದಾರೆ ಹಾಗೂ ಈ ಕುರಿತು ಚುನಾವಣಾ ಆಯೋಗವನ್ನೂ ಪ್ರಶ್ನಿಸಿದ್ದಾರೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಚುನಾವಣಾ ಆಯೋಗ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಯಿಂದ ತಕ್ಷಣ ವಿಸ್ತೃತ ವರದಿ ಕೋರಿದೆ ಎಂದು ಕೇಂದ್ರ ಚುನಾವಣಾ ಆಯೋಗದ ವಕ್ತಾರ ಶೆಫಾಲಿ ಸರನ್ ಟ್ವೀಟ್ ಮಾಡಿದ್ದಾರೆ.

ಈ ಕುರಿತಂತೆ ದವೆ ಪ್ರತಿಕ್ರಿಯಿಸದೇ ಇದ್ದರೂ ಅವರ ಪರವಾಗಿ ಟ್ವೀಟ್ ಮಾಡಿದ ಕೆಲವರ ಟ್ವೀಟ್‍ ಗಳನ್ನು ಅವರು ರಿಟ್ವೀಟ್ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News