ಶಿವಾಜಿಗೆ ಅವಮಾನ ಆರೋಪ: ವೆಂಕಯ್ಯ ನಾಯ್ಡುಗೆ 20 ಲಕ್ಷ ಪತ್ರ ರವಾನಿಸಲಿರುವ ಎನ್‍ ಸಿಪಿ

Update: 2020-07-24 11:45 GMT

ಹೊಸದಲ್ಲಿ: ಬುಧವಾರ ರಾಜ್ಯಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿರುವ ವೇಳೆ ಬಿಜೆಪಿ ಸಂಸದ ಹಾಗೂ ಶಿವಾಜಿ ವಂಶಸ್ಥರಾದ ಉದಯನರಾಜೇ ಭೋಸಲೆ ಅವರು ಛತ್ರಪತಿ ಶಿವಾಜಿ ಮಹಾರಾಜ್ ಪರ ಘೋಷಣೆ ಕೂಗಿರುವುದಕ್ಕೆ ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅಸಮ್ಮತಿ ಸೂಚಿಸಿರುವುದು ಮಹಾರಾಷ್ಟ್ರದಲ್ಲಿ ವಿವಾದಕ್ಕೆ ಕಾರಣವಾಗಿದೆ.

ಪ್ರಮಾಣವಚನದ ಕೊನೆಯಲ್ಲಿ ಭೋಸಲೆ ಅವರು ‘ಜೈ ಭವಾನಿ ಜೈ ಶಿವಾಜಿ ಘೋಷಣೆ' ಕೂಗಿದಾಗ , “ಇದೇನು ಮನೆಯಲ್ಲ, ಇದು ನನ್ನ ಚೇಂಬರ್, ಯಾವುದೂ ಈ ದಾಖಲೆಯಲ್ಲಿ ಸೇರುವುದಿಲ್ಲ, ಪ್ರಮಾಣವಚನ ಮಾತ್ರ. ಬೇರೆ ಯಾವುದೇ ಘೋಷಣೆಗಳಿಗೆ ಅನುಮತಿಯಿಲ್ಲ, ಮುಂದಕ್ಕೆ ಇದನ್ನು ನೆನಪಿಡಿ'' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು,

ಇದನ್ನು ಪ್ರತಿಭಟಿಸಿ ಎನ್‍ಸಿಪಿ ನಾಯ್ಡುಗೆ ಜೈ ಭವಾನಿ, ಜೈ ಶಿವಾಜಿ ಎಂದು ಬರೆಯಲಾದ 20 ಲಕ್ಷ ಪತ್ರಗಳನ್ನು ರವಾನಿಸಲು ನಿರ್ಧರಿಸಿದೆ. ನಾಯ್ಡು ಅವರ ಪ್ರತಿಕ್ರಿಯೆ `ಅಗೌರವದಿಂದ ಕೂಡಿದೆ' ಎಂದು ಹಲವಾರು ಕಾಂಗ್ರೆಸ್, ಎನ್‍ಸಿಪಿ ಹಾಗೂ ಶಿವಸೇನೆ ನಾಯಕರು ಹೇಳಿದ್ದಾರೆ.

“ಶಿವಾಜಿಯ ವಂಶಸ್ಥರಿಗೆ ಅಗೌರವ ತೋರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಪ್ರಮಾಣಪತ್ರ ಯಾರು ನೀಡುತ್ತಾರೆ, ಬಿಜೆಪಿ ಈ ವಿಷಯದಲ್ಲಿ ಮೌನವಾಗಿದೆ'' ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

“ಶಿವಾಜಿಯ ಹೆಸರು ಹೇಳುತ್ತಾ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಔರಂಗ್‍ ಜೇಬ್ ನಂತೆ ಆಡಳಿತ ನಡೆಸುತ್ತಿದೆ ಹಾಗೂ ಶಿವಾಜಿ ಗೌರವಾರ್ಥ ಘೋಷಣೆಯನ್ನೂ ಸಹಿಸುತ್ತಿಲ್ಲ'' ಎಂದು ಮಹಾರಾಷ್ಟ್ರ ಕಾಂಗ್ರೆಸ್  ವಕ್ತಾರ ಸಚಿನ್ ಸಾವಂತ್ ಹೇಳಿದ್ದಾರೆ.

ತರುವಾಯ ವಿವಾದದ ಕುರಿತು ಪ್ರತಿಕ್ರಿಯಿಸಿದ ಭೋಸಲೆ, ``ನೀವು ಪ್ರಮಾಣವಚನ ಸ್ವೀಕರಿಸಬಹುದು ಆದರೆ ಅದಕ್ಕೆ ಮತ್ತಿನ್ನೇನನ್ನೂ ಸೇರಿಸಬಾರದು, ಅದು (ಘೋಷಣೆ) ಸಂವಿಧಾನದ ಮಾರ್ಗಸೂಚಿಯಂತಿಲ್ಲ ಎಂದು ನಾಯ್ಡು ಹೇಳಿದರು. ಆದರೆ ಕೆಲವರು ಅದನ್ನೇ ವಿವಾದವನ್ನಾಗಿಸಿದ್ದಾರೆ. ಅವರು ಶಿವಾಜಿಗೆ ಅಗೌರವ ತೋರಿಸಿದ್ದರೆ ಮೊದಲು ವಿರೋಧಿಸುವವನು ನಾನಾಗುತ್ತಿದ್ದೆ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News