ಸಚಿವ ಸಿ.ಟಿ.ರವಿ ಕೊರೋನ ಸೋಂಕಿನಿಂದ ಗುಣಮುಖ

Update: 2020-07-24 12:08 GMT

ಚಿಕ್ಕಮಗಳೂರು, ಜು.24: ಕೊರೋನ ರೋಗಿಗಳಿಗೆ ಪ್ರೀತಿಯ ಆವಶ್ಯಕತೆಯಿದೆಯೇ ಹೊರತು ಭೀತಿಯಲ್ಲ. ಸೋಂಕು ಹಾಗೂ ಸೋಂಕಿತರ ಬಗ್ಗೆ ಪ್ರತಿಯೊಬ್ಬರೂ ಪ್ರೀತಿ, ಕಾಳಜಿ ವಹಿಸಬೇಕು. ಸೋಂಕು ಮತ್ತು ಸೋಂಕಿತರ ಬಗ್ಗೆ ಭೀತಿ ಮೂಡಿಸುವ ಕೆಲಸವನ್ನು ಯಾರೂ ಮಾಡಬಾರದು. ಸೋಂಕಿಗೆ ತುತ್ತಾಗಿದ್ದ ತನಗೆ ಮನೆಯಲ್ಲಿ ಪ್ರೀತಿ ಸಿಕ್ಕಿದ್ದರ ಫಲವಾಗಿ ಶೀಘ್ರವಾಗಿ ಸಂಪೂರ್ಣ ಗುಣಮುಖನಾಗಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಶುಕ್ರವಾರ ನಗರದ ತಮ್ಮ ಗೃಹ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.6ರಂದು ಮೊದಲ ಬಾರಿಗೆ ಕೊರೋನ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿತ್ತು. ನಂತರ ಬೆಂಗಳೂರಿಗೆ ಪ್ರವಾಸ ಮಾಡಿದ್ದೆ, ಜುಲೈ.10ರಂದು ಮತ್ತೆ ಪರೀಕ್ಷೆಗೆ ಒಳಗಾದಾಗ ಪಾಸಿಟಿವ್ ಇರುವುದು ತಿಳಿಯಿತು. ಒಮ್ಮೆ ನೆಗೆಟಿವ್ ಒಮ್ಮೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮೂರನೇ ಬಾರಿಗೆ ಪರೀಕ್ಷೆ ಒಳಗಾದಾಗ ಪಾಸಿಟಿವ್ ಇರುವುದು ದೃಢವಾಯಿತು ಎಂದ ಅವರು, ಎರಡನೇ ಬಾರಿಯ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕೂಡಲೇ ಹೋಂ ಕ್ವಾರಂಟೈನ್‍ಗೆ ಒಳಗಾದೆ. ಮನೆಯಲ್ಲೇ ಚಿಕಿತ್ಸೆ ಪಡೆಯುವ ತೀರ್ಮಾನ ಕೈಗೊಂಡೆ. ಮನೆಯಲ್ಲೇ ಕ್ವಾರಂಟೈನ್ ಆಗಿದ್ದ ವೇಳೆ ನನ್ನ ಕುಟುಂಬದವರು ತೋರಿದ ಪ್ರೀತಿ, ಕಾಳಜಿಯ ಆರೈಕೆಯಿಂದಾಗಿ ತಾನು ಅತಿ ಬೇಗನೆ ಗುಣಮುಖನಾಗಿದ್ದು, ಸದ್ಯ ಎರಡು ಬಾರಿ ಸೋಂಕಿನ ಪರೀಕ್ಷೆ ಮಾಡಿಸಿದ್ದು, ನೆಗೆಟಿವ್ ಬಂದಿದೆ. ಕೊರೋನ ಪಾಸಿಟಿವ್ ಇರುವವರು ಭಯ ಪಡುವ ಅಗತ್ಯವಿಲ್ಲ ಎಂದರು.

14 ದಿನಗಳ ಕ್ವಾರಂಟೈನ್ ಮುಗಿಸಿ ಗುರುವಾರ ಮತ್ತೊಮ್ಮೆ ಪರೀಕ್ಷೆಗೆ ಒಳಗಾದಾಗ ನೆಗೆಟಿವ್ ಬಂದಿದ್ದು, ಸೋಂಕಿನಿಂದ ಮುಕ್ತನಾಗಿದ್ದೇನೆ. ಹೋಂ ಕ್ವಾರಂಟೈನ್ ಅವಧಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ವೈದ್ಯ ಗಿರಿಧರ್ ಕಜೆ ಅವರ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದೆ. ವ್ಯಾಯಾಮ, ಪ್ರಾಣಾಯಾಮ, ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಾಕ್ ಮಾಡಿ ಗುಣಮುಖನಾಗಿದ್ದೇನೆ ಎಂದರು. 

ಕೊರೋನಕ್ಕೆ ಹೆದರುವ ಆವಶ್ಯಕತೆಯಿಲ್ಲ, ಬೇರೆ ಕಾಯಿಲೆಯಿಂದ ಬಳಲುವಂತವರು ಎಚ್ಚರಿಕೆ ವಹಿಸುವುದು ಅತ್ಯವಶ್ಯಕವಾಗಿದೆ. ಕೊರೋನ ರೋಗವನ್ನು ಸುಲಭವಾಗಿ ಎದುರಿಸಬಹುದು. 50 ವರ್ಷ ಮೇಲ್ಪಟ್ಟವರು ಹಾಗೂ ಬೇರೆ ಬೇರೆ ಕಾಯಿಲೆ ಇರುವರಿಗೆ ಸೋಂಕು ತಗಲಿದರೆ ಸಮಸ್ಯೆಯಾಗಲಿದ್ದು, ಆದ್ದರಿಂದ ಹಿರಿಯರು, ಕಾಯಿಲೆಗಳಿರುವವರು ಸದ್ಯ ಮನೆಯಲ್ಲೇ ಇರುವುದು ಸೂಕ್ತ ಎಂದು ಸಿ.ಟಿ.ರವಿ ಅಭಿಪ್ರಾಯಿಸಿದರು.

ಪಿಪಿಇ ಕಿಟ್‍ಗಳ ಖರೀದಿ ಅವ್ಯವಹಾರ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿ.ಟಿ.ರವಿ, ಸಚಿವ ಸಂಪುಟ ವಿಸ್ತರಣೆಗೆ ಬಗ್ಗೆ ನನಗೆ ಮಾಹಿತಿಯಿಲ್ಲ, ಈ ವಿಚಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೇ ಕೇಳಿ ಎಂದರು

ಕೊರೋನ ಸೋಂಕು ಕಂಡು ಬರುವ ಪ್ರದೇಶಗಳಲ್ಲಿ 100ಮೀ. ಸೀಲ್‍ಡೌನ್ ಮಾಡುತ್ತಿರುವ ಬಗ್ಗೆ ಮರುಪರಿಶೀಲನೆ ಮಾಡುವ ಆವಶ್ಯಕತೆಯಿದೆ. ವೈರಸ್ ನೂರು ಮೀಟರ್ ಹರಡುವುದಿಲ್ಲ ಮತ್ತು ಜೀವವಿಲ್ಲದ ವಸ್ತುಗಳ ಮೇಲೆ 7ರಿಂದ8 ಗಂಟೆಗಳ ಕಾಲಮಾತ್ರ ಜೀವಂತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮರು ಪರಿಶೀಲನೆ ಆವಶ್ಯಕತೆಯಿದೆ. ಈ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತನಾಡಿದ್ದೇನೆ ಎಂದು ಸಿ.ಟಿ.ರವಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News