ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿಸು...

Update: 2020-07-24 19:30 GMT

‘‘ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿಸು’’ ಎಂದು ಏಸು ಹೇಳಿದ ಮಾತು ಇಪ್ಪತ್ತು ಶತಮಾನವಾದರೂ ಜನಮನಕ್ಕೆ ಇಳಿದಿರಲಿಲ್ಲ. ಅದಕ್ಕೆ ಕೊರೋನದಂತಹ ವೈರಾಣು ಬಿರುಗಾಳಿಯೇ ಬೀಸಿ ಬರಬೇಕಾಯಿತು. ಸದ್ಯ ಕೋವಿಡ್-19 ವೈರಸ್‌ಗೆ ಹೆದರಿದ ಜನ ಪ್ರಾಣಭಯದಿಂದ ತಮ್ಮ ನೆರೆಹೊರೆಯವರಿಗೆ ಸೋಂಕು ತಗಲಿದರೆ ನಮಗೂ ಬರಬಹುದೆಂಬ ದಿಗಿಲಿನಿಂದ ‘‘ದೇವರೇ ನಮ್ಮ ನೆರೆಯವರೂ ನಮ್ಮಂತೆಯೇ ಆರೋಗ್ಯದಿಂದಿರಲಿ’’ ಎಂದು ಪ್ರಾರ್ಥಿಸುವ ಸಮಯಬಂದಿದೆ. ಇದು ವಿಶ್ವಾದ್ಯಂತ ಉಂಟಾಗಿರುವ ಎಚ್ಚರ. ‘ನೆರೆಮನೆ ಹಾಳಾದರೆ ಕರುಕಟ್ಟಲು ಜಾಗವಾಯಿತು’ ಎಂಬ ಗಾದೆ ಈಗ ಹಿಂದೆಸರಿಯಿತು. ಕೆಲವು ಮತೀಯ ಮೌಢ್ಯವನ್ನೂ ರಾಜ್ಯಾಧಿಕಾರದ ಸ್ವಾರ್ಥವನ್ನೂ ಸ್ವಪ್ರತಿಷ್ಠೆಯ ಅಹಂಕಾರವನ್ನೂ ಬದಿಗಿರಿಸಿ ನೋಡಿದರೆ ಬಹು ಜನರು ಆರೋಗ್ಯವಂತ ಸಹಬಾಳ್ವೆಯನ್ನೇ ಬಯಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಶತಶತಮಾನಗಳಿಂದ ಮಾನವನಲ್ಲಿ ಕೊಳಗೊಂಡ ಗರ್ವರಸ ಕೊರೋನ ಮಾರಿಯ ಮುಂದೆ ಕರಗಿ ಹರಿಯುತ್ತಿದೆ. ನಾನೇ ಎಲ್ಲ, ನನ್ನಿಂದಲೇ ಎಲ್ಲ ಎಂದು ಹೂಂಕರಿಸುತ್ತಿದ್ದ ಜಾಗತಿಕ ರಾಷ್ಟ್ರಗಳು ಕೋವಿಡ್ ಪಿಡುಗಿಗೆ ಹೆದರಿ ಮುದುರಿಕೊಳ್ಳುತ್ತಿವೆ. ವಿಶ್ವವೇ ಒಂದು ಮೃತ್ಯು ಪಂಜರವಾಗುತ್ತಿದ್ದರೂ ಶಕ್ತರಾಷ್ಟ್ರಗಳಾದ ಅಮೆರಿಕ, ಚೀನಾ ಮುಂತಾದವು ಈ ಮೃತ್ಯು ಪಂಜರದಲ್ಲೇ ತಮ್ಮ ಶಕ್ತಿ ಪ್ರದರ್ಶನಕ್ಕೆ ವ್ಯರ್ಥ ಹೋರಾಡುತ್ತಿರುವ ಅವಿವೇಕ ಕಂಡು ಬರುತ್ತಿದೆ. ಆದರೆ ಪ್ರಕೃತಿಯು ಕೋವಿಡ್ ಸಾಂಕ್ರಾಮಿಕ ರೋಗದ ಮೂಲಕ ಮನುಕುಲಕ್ಕೆ ‘‘ನಾನೇ ಪರಬ್ರಹ್ಮ ಎಂದು ಬೀಗಬೇಡ, ನಿಸರ್ಗದತ್ತ ನಿಯಮದಂತೆ ನಡೆಯಬೇಕಾಗಿರುವ ಕೋಟ್ಯಂತರ ಜೀವರಾಶಿಗಳಲ್ಲಿ ನಿಮ್ಮದೂ ಒಂದು ಪ್ರಭೇದ ಎಂಬ ಎಚ್ಚರ ಇರಲಿ’’ ಎಂದು ಸಾರಿ ಸಾರಿ ಹೇಳುತ್ತಿದೆ. ಹಾಗಾದರೆ ನಾವು ನಿಸರ್ಗಕ್ಕೆ ಮಾಡಿದ ಅಪರಾಧವೇನು ಎಂಬುದನ್ನು ಕೊಂಚ ನೋಡಬಹುದು. ಹಾಗೆ ನೋಡಿದರೆ, ಇಪ್ಪತ್ತನೇ ಶತಮಾನ ವೈಚಾರಿಕತೆ ಹಾಗೂ ವೈಜ್ಞಾನಿಕ ಪ್ರಜ್ಞೆಯನ್ನು ಬಿತ್ತಿಬೆಳೆಯಿತು. ವಿಚಾರ ಕ್ರಾಂತಿಯ ದೀವಟಿಗೆಯನ್ನು ಬೆಳಗಿಸಿತು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಸಾಮಾಜಿಕ ನ್ಯಾಯ ಬದ್ಧತೆಯನ್ನು ಮೆರೆಯಿತು. ಇದೇ ಶತಮಾನದಲ್ಲಿ ಎರಡು ವಿಶ್ವಯುದ್ಧಗಳು ಜರುಗಿ ಲಕ್ಷಾಂತರ ಜೀವ ಹಾನಿಯಾದರೂ ಅದರ ಒಡಲಲ್ಲೇ ವಿಶ್ವಸಂಸ್ಥೆಯಂತಹ ಮಹಾಸಂಘಟನೆ (UNO) ರೂಪುಗೊಂಡಿತು. ಅದು ‘ಮನುಷ್ಯ ಜಾತಿ ತಾನೊಂದೆವಲಂ’ ಎಂಬ ವಿಶ್ವ ಭ್ರಾತೃತ್ವಕ್ಕೆ ಮುನ್ನುಡಿ ಬರೆಯಿತು.

ಇದೇ ಧಾತು ಧೋರಣೆಯೊಂದಿಗೆ ಇಪ್ಪತ್ತೊಂದನೇ ಶತಮಾನ ಪಾದಾರ್ಪಣೆ ಮಾಡಿತಾದರೂ ಇದರ ಕಾಳಜಿ ಹಾಗೂ ಕಾರ್ಯತತ್ಪರತೆ ಏನಿದ್ದರೂ ಆರ್ಥಿಕಾಭಿವೃದ್ಧಿಯೇ ನಿಜವಾದ ಪ್ರಗತಿ ಎಂದು ತಪ್ಪು ಕಲ್ಪಿಸಿಕೊಂಡು ಹೊರಟಿತು. ಮಹಾತ್ಮಾ ಗಾಂಧಿ ಯಾವುದನ್ನು ನಿರಾಕರಿಸಿದ್ದರೋ ಪಶ್ಚಿಮದ ಆ ಯಂತ್ರ ನಾಗರಿಕತೆಯನ್ನೇ ವೈಭವೀಕರಿಸುತ್ತಾ ಗ್ರಹ, ತಾರಾಮಂಡಲಕ್ಕೂ, ಸಾಗರಾಂತರ ಗರ್ಭಕ್ಕೂ ದಟ್ಟಾರಣ್ಯದ ನಟ್ಟ ನಡುವೆಗೂ ಈ ಆರ್ಥಿಕಾಭಿವೃದ್ಧಿಯ ಯಂತ್ರ ನಾಗರಿಕತೆ ದಾಳಿಯಿಟ್ಟು ಪ್ರಾಕೃತಿಕ ಸಂಪನ್ಮೂಲಗಳನ್ನು ಸೂರೆಗೊಂಡಿತು. ನಿಸರ್ಗದತ್ತ ಸಂಪತ್ತು ದೇವರು ಕೊಟ್ಟ ವರ. ಅವುಗಳನ್ನು ಹಾಳುಮಾಡದೆ ಹಂಚಿಕೊಂಡು ಒಟ್ಟಾಗಿ ಊಟಮಾಡೋಣ, ಒಟ್ಟಾಗಿ ಶಕ್ತಿವಂತರಾಗೋಣ, ಒಟ್ಟಾಗಿ ನೂರುವರ್ಷ ಬಾಳೋಣ ಎಂದ ಋಷಿವಾಣಿಗೆ ತದ್ವಿರುದ್ಧವಾಗಿ ಹೊರಟ ಮನುಷ್ಯಕುಲ ಪ್ರಕೃತಿಯ ಮೇಲೆ ಅಭಿವೃದ್ಧಿಯ ಬುಲ್ಡೋಜರ್ ಹಾಯಿಸುವ ಮೂಲಕ ಭೂಮಿಗೆ ಮಾಯಲಾಗದ ಭೀಕರ ಗಾಯಗಳನ್ನು ಮಾಡುತ್ತ ಬಂದಿದ್ದಾನೆ. ಪರಿಣಾಮವಾಗಿ ಇರುವುದೊಂದೇ ನೆಲ ಉಸಿರುಗಟ್ಟುತ್ತಿದೆ.

ಈ ಬುಲ್ಡೋಜರ್ ಅಡಿಗೆ ಸಿಕ್ಕಿದ ಜೀವ ಜಾಲ ನಜ್ಜುಗುಜ್ಜಾಗುತ್ತಿದೆ. ಇಪ್ಪತ್ತನೇ ಶತಮಾನದ ಮಧ್ಯಭಾಗದ ಸುಮಾರಿಗೆ ಯೂರೋಪಿನ ಬಂಡವಾಳಶಾಹಿ ರಾಷ್ಟ್ರಗಳು ತಾವು ಆಳಿದ ವಸಾಹತು ದೇಶಗಳ ಸಕಲ ಸಂಪನ್ಮೂಲಗಳನ್ನು ಲೂಟಿ ಮಾಡಿ ಕಡೆಗೆ ಸ್ವಾತಂತ್ರ್ಯವನ್ನು ನೀಡಿ ಕಾಲ್ತೆಗೆದವು. ಆದರೆ ಕತ್ತಿ ಯಾವುದಾದರೇನು? ಈಗ ಸ್ವದೇಶಿ ಆಡಳಿತಗಾರರೇ ಶೋಷಕರಾಗಿ ಮಾರ್ಪಟ್ಟರು. ಅಭಿವೃದ್ಧಿ ಹೆಸರಲ್ಲಿ ಇವರು ಕೈಗೊಳ್ಳುತ್ತಿರುವ ಯೋಜನೆಗಳು ಸಹ ಪರಿಸರ ವಿರೋಧಿಯಾಗಿ ಜನಹಿತಕ್ಕಿಂತ ಸಮಾಜಕ್ಕೆ ಮಾರಕವೇ ಆಗುತ್ತಿವೆ. ಯುದ್ಧ ಯಂತ್ರೋಪಕರಣ ಬೃಹತ್ ಕೈಗಾರಿಕೆಗಳು, ದಟ್ಟವಾಹನ ಸಾರಿಗೆ ಸಂಪರ್ಕಗಳು, ಹವಾನಿಯಂತ್ರಿತ ಯಂತ್ರಗಳು ಉಗುಳುವ ಇಂಗಾಲ ಡೈಯಾಕ್ಸೈಡ್ ತ್ಯಾಜ್ಯಗಳಿಂದ ಭೂಮಿಯ ತಾಪಮಾನ ಅಧಿಕವಾಗುತ್ತಿದೆ. ಇದರಿಂದ ಸೂರ್ಯನ ತಾಪಮಾನವನ್ನು ನಿಯಂತ್ರಿಸುವ ಒರೆನ್ ಪದರದಲ್ಲಿ ಕಿಂಡಿಗಳಾಗುತ್ತಿವೆ. ತತ್ಪರಿಣಾಮವಾಗಿ ಉತ್ತರ, ದಕ್ಷಿಣ ಧ್ರುವ ಮಂಡಲದ ನೀರ್ಗಲ್ಲುಗಳು ಕರಗಿ ಜಲ ಪ್ರವಾಹಗಳು ಹೆಚ್ಚಾಗುತ್ತಿವೆ. ಸಮುದ್ರದಲ್ಲಿ ಸುನಾಮಿ ಅಬ್ಬರಗಳು ಏರಿಬರುತ್ತಿವೆ. ಇದೆಲ್ಲವೂ ಕೂಡಿ ಸಾಗರ ಜಲಚರಗಳು ಹಾಗೂ ಭೂವಲಯದ ಜೀವ ಜಗತ್ತು ತಲ್ಲಣಗೊಳ್ಳುತ್ತಿದೆ.

ಪರಿಸರ ವಿಜ್ಞಾನಿ ನಾಗೇಶ ಹೆಗಡೆಯವರು, ‘‘ನಾವು ನಿಸರ್ಗಕ್ಕೆ ಏನನ್ನೇ ಎರಚಿದರೂ ಕಸವಿರಲಿ, ರಸವಿರಲಿ ಅದು ತಿರುಗಿ ನಮಗೇ ಬರುತ್ತದೆ. ರಸಗೊಬ್ಬರ ಎರಚಿದರೆ ಅದರ ಕೆಡುಕು ಗುಣಗಳು ದುಪ್ಪಟ್ಟು ರೂಪದಲ್ಲಿ ಬರುತ್ತವೆ. ಪರಿಣಾಮವಾಗಿ ಕೆರೆ ಕಟ್ಟೆಗಳು, ನದಿ ತೀರಗಳು, ನದಿ ಮುಖಜ ಭೂಮಿಯ ಸಮುದ್ರಗಳು ಮುಂತಾಗಿ ನಿಸರ್ಗ ರಮ್ಯತಾಣಗಳೆಲ್ಲ ಈಗ ಕೊಳಕು ತಾಣಗಳಾಗುತ್ತಿವೆ. ನಾವು ಹೊಲಕ್ಕೆ, ತೋಟಕ್ಕೆ, ವಾಷಿಂಗ್ ಮೆಷಿನ್‌ಗಳಿಗೆ ಸುರಿಯುವ ರಸದ್ರವಗಳೇ ಜಲ ದೇವತೆಯ ಕತ್ತುಹಿಸುಕುತ್ತಿವೆ. ರಸಗೊಬ್ಬರಗಳ ಅಬ್ಬರದ ಬಳಕೆಯಿಂದಾಗಿ ಜಗತ್ತಿನಲ್ಲಿ 405 ಮೃತ ಪ್ರಾಂತಗಳು ಸೃಷ್ಟಿಯಾಗಿವೆ’’ ಎಂದು ಹೇಳುತ್ತಾರೆ. ಸಪ್ತಸಾಗರಗಳಲ್ಲಿ ಇಂತಹ ನಿರ್ಜೀವ ಡೆಡ್‌ರೆನ್‌ಗಳು ಸೃಷ್ಟಿಯಾಗಿವೆಯಂತೆ. ಈ ಭಾಗದಲ್ಲಿ ಮೀನು, ಆಮೆ, ಹವಳ, ಏಡಿ, ಸಿಗಡಿ ಮುಂತಾದ ಸಾಗರ ಜೀವಿಗಳಿಲ್ಲದೆ ಕೇವಲ ಜಲ ಮರುಭೂಮಿಗಳಾಗುತ್ತಿವೆ.

ಈ ಮೃತಪ್ರಾಂತಗಳಿಂದ ಅನೇಕ ಬಗೆಯ ವೈರಸ್‌ಗಳು ಸೃಷ್ಟಿಯಾಗುತ್ತವೆ ಮತ್ತು ಒಂದನ್ನು ಕೊಂದರೆ ಮತ್ತೊಂದು ಸೃಷ್ಟಿಯಾಗಿ ಹರಡುತ್ತವೆ. ಈ ಹಿಂದೆಯೂ ಜಗತ್ತು ಕೊರೋನದಂತಹ ಮಹಾ ಸೋಂಕು ವ್ಯಾಧಿಗಳನ್ನು ಅನುಭವಿಸಿದೆ. ಅವುಗಳಲ್ಲಿ ಮುಖ್ಯವಾಗಿ ಮಧ್ಯಯುಗದಲ್ಲಿ ಯೂರೋಪನ್ನು ಛಿದ್ರ ಮಾಡಿದ ಕಪ್ಪು ಪ್ಲೇಗು, 1665ರಲ್ಲಿ ಲಂಡನ್‌ನ ಜನ ಜೀವನವನ್ನು ತಲೆಕೆಳಗುಮಾಡಿತು. ನಂತರ ಅದೇ ಸಾಂಕ್ರಾಮಿಕ ಸೋಂಕು ‘ಸ್ಪಾನಿಷ್ ಪ್ಲೂ’ ಎಂಬ ಹೊಸರೂಪದಲ್ಲಿ 1917ರಲ್ಲಿ ಕಾಣಿಸಿಕೊಂಡು ಯೂರೋಪಿನ ಸುಮಾರು 5 ಲಕ್ಷ ಜನರನ್ನು ಬಲಿ ತೆಗೆದುಕೊಂಡಿತು. ಪ್ರಸ್ತುತ ಸುಖದ ಸ್ವರ್ಗ ನಿರ್ಮಿಸುತ್ತೇವೆ ಎಂದು ನಾವೆಷ್ಟೇ ಬೀಗಿದರೂ ಕೊರೋನ ಎಂಬ ಯಕಃಶ್ಚಿತ್ ವೈರಾಣು ಇಡೀ ಭೂಮಂಡಲವನ್ನೇ ಮುಕ್ಕಲು ನೋಡುತ್ತಿದೆ. ಅದರ ಮುಂದೆ ವಿಶ್ವದ 750 ಕೋಟಿ ಜನತೆ ಮಂಡಿಯೂರಿ ಕುಳಿತಿದ್ದಾರೆ.

ಈ ಹಿಂದಿನ ಕಪ್ಪುಪ್ಲೇಗ್, ಸ್ಪಾನಿಷ್ ಫ್ಲೂ ಮುಂತಾದ ವ್ಯಾಧಿಗಳಿಗೆ ಮೂಲ ಕಾರಣ ನಮ್ಮ ಸ್ವಯಂಕೃತಾಪರಾಧವಾದ ಎರಡು ಮಹಾಯುದ್ಧಗಳು ಹಾಗೂ ಪರಿಸರ ನಾಶ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ, ಜಪಾನಿನ ನಾಗಸಾಕಿ ಹಾಗೂ ಹಿರೋಶಿಮಾಗಳಲ್ಲಿ ಈಗಲೂ ಹುಲ್ಲುಗರಿಕೆ ಮೊಳೆಯುತ್ತಿಲ್ಲ; ಅಂಗವಿಕಲ ಶಿಶು ಜನನ ನಿಲ್ಲುತ್ತಿಲ್ಲ. ಇಷ್ಟೆಲ್ಲ ನಮಗೆ ಗೊತ್ತಿದ್ದರೂ ಪ್ರಕೃತಿ ಪರಿಸಕ್ಕೆ ನಾವು ಕೈಗೊಳ್ಳುವ ಅತ್ಯಾಚಾರ, ದೌರ್ಜನ್ಯಕ್ಕೆ ಅಡೆತಡೆಯಿಲ್ಲ. ಸ್ವೀಡನ್‌ನ ಬಾಲೆ ಗ್ರೆಟಾ ಥನ್‌ಬರ್ಗ್ ಕೇಳುವಂತೆ ಇಷ್ಟೆಲ್ಲಾ ಪರಿಸರ ನಾಶ ಮಾಡಲು ಲೋಕನಾಯಕರಿಗೆ ಅಧಿಕಾರ ಕೊಟ್ಟವರಾರು? ಜಗತ್ತಿನ ಎಲ್ಲ ನಾಗರಿಕ ಪ್ರಜೆಗಳೂ ಈ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಲು ಇದು ಸಕಾಲ. ನಮ್ಮ ಬದುಕು ನೀರ ಮೇಲಿನ ಗುಳ್ಳೆಯಂತೆ ಕ್ಷಣಿಕ. ಇದು ಗೊತ್ತಿದ್ದೂ ಗೊತ್ತಿದ್ದೂ ನಾವು ಭೂಮಿಗೆ ಬಗೆವ ಅಪಚಾರಕ್ಕೆ ಕೊನೆ ಮೊದಲಿಲ್ಲ. ನಿಸರ್ಗ ತನ್ನ ಸಮತೋಲನವನ್ನು ತಾನೇ ನಿರ್ವಹಿಸಿಕೊಳ್ಳಬಲ್ಲದು- ಮನುಷ್ಯ ಅಲ್ಲಿ ಕಾಲು ಹಾಕದಿದ್ದಾರೆ ಸಾಕು. ಇಲ್ಲವಾದರೆ ‘‘ಕೊಂಡು ಕೂಗದೆ ನರರಂ’’ ಎಂಬ ಎಚ್ಚರ ಇರಬೇಕು. ಇದು ಪ್ರಾಕೃತಿಕ ನ್ಯಾಯ. ಆದ್ದರಿಂದ ನಾವು ಇನ್ನಾದರೂ ವಿವೇಕಿಗಳಾಗಬೇಕು.

ತಾತ್ಪರ್ಯವೆಂದರೆ ‘‘ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿಸು’’ ಈ ಮಾತು ವ್ಯಕ್ತಿಯಿಂದ ವ್ಯಕ್ತಿಗೆ ಗ್ರಾಮದಿಂದ ಗ್ರಾಮಕ್ಕೆ, ರಾಜ್ಯದಿಂದ ರಾಜ್ಯಕ್ಕೆ, ರಾಷ್ಟ್ರದಿಂದ ರಾಷ್ಟ್ರಕ್ಕೆ ಖಂಡಾಂತರ ವ್ಯಾಪ್ತಿಯನ್ನು ಪಡೆಯಬೇಕು.

Writer - ಪ್ರೊ. ಶಿವರಾಮಯ್ಯ

contributor

Editor - ಪ್ರೊ. ಶಿವರಾಮಯ್ಯ

contributor

Similar News