ಅತ್ಯಾಚಾರದ ವೇಳೆ ಮಹಿಳೆ ಇದೇ ರೀತಿ ಪ್ರತಿಕ್ರಿಯಿಸಬೇಕು ಎಂಬ ಯಾವುದೇ ಸಿದ್ಧ ಸೂತ್ರವಿಲ್ಲ: ಬಾಂಬೆ ಹೈಕೋರ್ಟ್

Update: 2020-07-24 17:33 GMT

ಮುಂಬೈ, ಜು.24: ವ್ಯಕ್ತಿಯೊಬ್ಬ ಬಲಾತ್ಕಾರ ಮಾಡುವಾಗ ಮಹಿಳೆ ಇದೇ ರೀತಿ ಪ್ರತಿಕ್ರಿಯಿಸಬೇಕು ಎಂಬ ಯಾವುದೇ ಸಿದ್ಧಸೂತ್ರವಿಲ್ಲ . ಆದರೆ ಯುವಕನನ್ನು ಅನಿರ್ದಿಷ್ಟವಾಗಿ ಬಂಧನದಲ್ಲಿಡುವುದು ಸ್ವಾತಂತ್ರ್ಯದ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಅತ್ಯಾಚಾರ ಮತ್ತು ಲೈಂಗಿಕ ಪೀಡನೆ ಪ್ರಕರಣದ 24 ವರ್ಷದ ಆರೋಪಿಯೊಬ್ಬ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಜಾಮೀನು ಮಂಜೂರುಗೊಳಿಸಿದೆ.

ತನಗೆ ಆರೋಪಿ 8 ವರ್ಷದಿಂದ ಪರಿಚಿತನಾಗಿದ್ದ. 2019ರ ಅಕ್ಟೋಬರ್ 28ರಂದು ಆರೋಪಿ ಹಾಗೂ ಇತರ ಸ್ನೇಹಿತೆಯರ ಜತೆಗೆ ದೀಪಾವಳಿ ಆಚರಣೆಗೆ ಲೊನೋವಾಲದ ಆಂಬಿ ಕಣಿವೆಗೆ ಹೋಗಿದ್ದೆವು. ಅಲ್ಲಿದ್ದ ರೆಸಾರ್ಟ್‌ನಲ್ಲಿ ಆರೋಪಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 25 ವರ್ಷದ ಮಹಿಳೆ ನವೆಂಬರ್‌ನಲ್ಲಿ ದೂರು ನೀಡಿದ್ದಳು. ದೂರಿನ ಹಿನ್ನೆಲೆಯಲ್ಲಿ 2019ರ ಡಿಸೆಂಬರ್‌ನಲ್ಲಿ ಯುವಕನನ್ನು ಬಂಧಿಸಿದ್ದು ಅಂದಿನಿಂದ ಜೈಲಿನಲ್ಲಿದ್ದಾನೆ.

‘ಆರೋಪಿ ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸುವುದನ್ನು ತಡೆಯಲು ತಾನು ಸಹಾಯಕ್ಕಾಗಿ ಕೂಗಿದ್ದೆ ಎಂಬ ಮಹಿಳೆಯ ಹೇಳಿಕೆಯಲ್ಲಿ ಗೊಂದಲವಿದೆ. ಆ ಸಂದರ್ಭ ಆಕೆಯ ಸ್ನೇಹಿತರೂ ಅದೇ ಬಂಗಲೆಯಲ್ಲಿದ್ದರೂ ಯಾರೊಬ್ಬರಿಗೂ ಆಕೆಯ ಕೂಗಾಟ ಕೇಳಿಸಿಲ್ಲ ಎಂಬುದು ಅಚ್ಚರಿಯ ವಿಷಯವಾಗಿದೆ’ ಎಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶೆ ಭಾರತಿ ಡಾಂಗ್ರೆ ಹೇಳಿದರು.

‘ಒಬ್ಬ ಮಹಿಳೆ ಆಗದು ಎಂದು ಹೇಳಿದರೆ ಆಗಬಹುದು ಎಂದರ್ಥ’ ಎಂಬ ವಾರನ್ ಬಫೆಟ್ ಉಲ್ಲೇಖವನ್ನೇ ದೀರ್ಘಾವಧಿಯಿಂದ ಪರಿಗಣಿಸಲಾಗುತ್ತಿದೆ. ಆದರೆ ಆಧುನಿಕ ಜೀವನಪದ್ಧತಿ ಹಾಗೂ ಈಗಿನ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ದೈಹಿಕ ಸಂಬಂಧಕ್ಕೆ ಮಹಿಳೆ ಮುಕ್ತವಾಗಿ ಒಪ್ಪಿಗೆ ನೀಡಿದ್ದಳೇ ಎಂಬುದನ್ನು ಪರಿಗಣಿಸಬೇಕಿದೆ . ಆರೋಪಿ ಓರ್ವ ಇಂಜಿನಿಯರಿಂಗ್ ಪದವೀಧರನಾಗಿದ್ದು ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿಲ್ಲ. ಯುವಕನೊಬ್ಬನನ್ನು ಅನಿರ್ದಿಷ್ಟಾವಧಿಗೆ ಬಂಧನದಲ್ಲಿಡುವುದು ಸ್ವಾತಂತ್ರ್ಯದ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಹೇಳಿದ ನ್ಯಾಯಪೀಠ, 50,000 ರೂ. ಮೊತ್ತದ ವೈಯಕ್ತಿಕ ಬಾಂಡ್‌ನ ಮೇಲೆ ಆರೋಪಿಗೆ ಜಾಮೀನು ಮಂಜೂರುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News