ಜಮ್ಮು-ಕಾಶ್ಮೀರದಲ್ಲಿ ಲಾಕ್‌ಡೌನ್ ಜಾರಿಯಿಂದ ವ್ಯಾಪಕ ಮಾನವ ಹಕ್ಕು ಉಲ್ಲಂಘನೆ: ಮಾನವ ಹಕ್ಕು ವೇದಿಕೆಯ ವರದಿ

Update: 2020-07-24 18:13 GMT

ಶ್ರೀನಗರ, ಜು.24: ಜಮ್ಮು ಕಾಶ್ಮೀರದಲ್ಲಿ ಸುಮಾರು 11 ತಿಂಗಳಿಗಿಂತಲೂ ಹೆಚ್ಚಿನ ಅವಧಿಯಿಂದ ಜಾರಿಯಲ್ಲಿರುವ ಲಾಕ್‌ ಡೌನ್‌ನಿಂದ ಜಾಮೀನು, ನ್ಯಾಯೋಚಿತ ಮತ್ತು ತ್ವರಿತ ವಿಚಾರಣೆ ಸಹಿತ ಹಲವಾರು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಜಮ್ಮು ಕಾಶ್ಮೀರದ ಮಾನವ ಹಕ್ಕು ವೇದಿಕೆಯ ವರದಿ ತಿಳಿಸಿದೆ.

ಸಾರ್ವಜನಿಕ, ನಾಗರಿಕರ ಮತ್ತು ಮಾನವರ ಭದ್ರತೆಯ ವಿಷಯಕ್ಕಿಂತ ಪ್ರತಿಬಂಡಾಯದ ಆತಂಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದು ರಕ್ಷಣೆಯನ್ನು ದುರ್ಬಲಗೊಳಿಸಿ ಎಲ್ಲಾ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತಿದೆ ಎಂದು ‘ ಜಮ್ಮು ಮತ್ತು ಕಾಶ್ಮೀರ: ಮಾನವ ಹಕ್ಕುಗಳ ಮೇಲೆ ಲಾಕ್‌ಡೌನ್‌ನ ಪರಿಣಾಮ’ ಎಂಬ ಶೀರ್ಷಿಕೆಯ ವರದಿ ತಿಳಿಸಿದೆ.

ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶ ಮದನ್ ಬಿ. ಲೋಕೂರ್ ನೇತೃತ್ವದ ವೇದಿಕೆಯಲ್ಲಿ ಈ ಹಿಂದಿನ ಜಮ್ಮು ಕಾಶ್ಮೀರ ರಾಜ್ಯದ ಸಂವಾದಕರ ತಂಡದ ಸದಸ್ಯನಾಗಿದ್ದ ರಾಧಾ ಕುಮಾರ್ ಸಹಿತ ಹಲವರು ಸದಸ್ಯರಿದ್ದಾರೆ.

ಜಾಮೀನು ಪಡೆಯುವ ಹಕ್ಕು ನಿರಾಕರಣೆ, ನ್ಯಾಯೋಚಿತ ಮತ್ತು ತ್ವರಿತ ವಿಚಾರಣೆಯ ಹಕ್ಕು ನಿರಾಕರಣೆಯ ಜೊತೆಗೆ, ಭಿನ್ನಾಭಿಪ್ರಾಯಗಳನ್ನು ಚಿವುಟಿ ಹಾಕಲು ಸಾರ್ವಜನಿಕ ಸುರಕ್ಷತಾ ಕಾಯಿದೆ(ಪಿಎಸ್‌ಎ) , ಅಕ್ರಮ ಚಟುವಟಿಕೆ ತಡೆ ಕಾಯಿದೆ(ಯುಎಪಿಎ)ಯಂತಹ ಕಠಿಣ ಶಾಸನಗಳ ದುರ್ಬಳಕೆ ಲಾಕ್‌ಡೌನ್ ಅವಧಿಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

ಲಾಕ್‌ಡೌನ್ ಆಗಾಗ ಶಟ್‌ಡೌನ್‌ಗೆ ಎಡೆ ಮಾಡಿಕೊಟ್ಟಿದೆ. ಬ್ಯಾರಿಕೇಡ್ ಮತ್ತು ಚೆಕ್‌ಪಾಯಿಂಟ್‌ಗಳಲ್ಲಿ ಕಿರುಕುಳ ನೀಡುವುದು, ಸಂವಹನದ ಮೇಲೆ ನಿರ್ಬಂಧ ಮುಂತಾದವುಗಳಿಂದ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಜಮ್ಮು-ಕಾಶ್ಮೀರದ ಜನತೆಯಲ್ಲಿ ಆತಂಕ, ಒತ್ತಡ ಮೂಡಲು ಕಾರಣವಾಗಿದೆ. ಭಾರತ ಮತ್ತು ಜಮ್ಮು-ಕಾಶ್ಮೀರದ ಸಂವಿಧಾನದಲ್ಲಿ ನೀಡಲಾಗಿದ್ದ ಆರೋಗ್ಯ ಮತ್ತು ವೈದ್ಯಕೀಯ ಉಪಚಾರದ ಹಕ್ಕನ್ನು ಉಲ್ಲಂಘಿಸಲಾಗಿದೆ. ಲಾಕ್‌ಡೌನ್ ಮತ್ತು ನಿರ್ಬಂಧದಿಂದಾಗಿ 2019-20ರ ಶೈಕ್ಷಣಿಕ ವರ್ಷದಲ್ಲಿ ಜಮ್ಮು-ಕಾಶ್ಮೀರದ ಶಿಕ್ಷಣ ಸಂಸ್ಥೆಗಳು ಹೆಚ್ಚೆಂದರೆ 100 ದಿನ ಮಾತ್ರ ಕಾರ್ಯನಿರ್ವಹಿಸಿದ್ದು ಪ್ರದೇಶದ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ.

ನೆಟ್‌ವರ್ಕ್ ಅನ್ನು 2 ಜಿಗೆ ಸೀಮಿತಗೊಳಿಸಿರುವುದು ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾರಿಗೆ ಬಂದಿರುವ ಆನ್‌ಲೈನ್ ತರಗತಿಗೆ ತೊಂದರೆಯಾಗಿದೆ ಎಂದು ವರದಿ ಹೇಳಿದೆ.

370ನೇ ವಿಧಿ ರದ್ದತಿಯ ಬಳಿಕ ಕಾಶ್ಮೀರದಲ್ಲಿ ಬಂಧನಲ್ಲಿರುವ ಎಲ್ಲಾ ರಾಜಕೀಯ ಮುಖಂಡರ ಬಿಡುಗಡೆಗೆ ವೇದಿಕೆ ಕರೆ ನೀಡಿದೆ. ಪಿಎಸ್‌ಎ ಮತ್ತಿತರ ಕಠಿಣ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಅದನ್ನು ರಾಜಕೀಯ ವಿರೋಧಿಗಳ ಮೇಲೆ ಬಳಸುವುದಕ್ಕೆ ಅಂತ್ಯ ಹೇಳಬೇಕು. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಮೇಲಿರುವ ಎಲ್ಲಾ ನಿರ್ಬಂಧಗಳನ್ನೂ ತೆಗೆದು ಹಾಕಬೇಕು. ಎಳೆಯ ಮಕ್ಕಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ವೇದಿಕೆಯ ವರದಿಯಲ್ಲಿ ಹೇಳಲಾಗಿದೆ.

ಬಾಕ್ಸ್:

ಜಮ್ಮು-ಕಾಶ್ಮೀರ ಬಿಕ್ಕಟ್ಟಿನ ತ್ರಿ-ಪಾರ್ಶ್ವೀಕರಣ

ಈ ಹಿಂದೆ ಭಾರತ-ಪಾಕ್ ಮಧ್ಯೆ ದ್ವಿಪಕ್ಷೀಯ ಬಿಕ್ಕಟ್ಟಾಗಿದ್ದ ಜಮ್ಮು-ಕಾಶ್ಮೀರ ವಿವಾದಕ್ಕೆ ಈಗ ಚೀನಾದ ಸೇರ್ಪಡೆಯಾಗಿದೆ. ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಿದ 2019ರ ಕೇಂದ್ರ ಸರಕಾರದ ನಿರ್ಧಾರವನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಪ್ರಸ್ತಾವಿಸಲು ಮತ್ತು ಭಾರತದ ಈ ನಿರ್ಧಾರದ ವಿರುದ್ಧ ವಿಶ್ವನಾಯಕರ ಅಭಿಪ್ರಾಯವನ್ನು ಕ್ರೋಢೀಕರಿಸಲು ಚೀನಾ ಪ್ರಯತ್ನಿಸಿದೆ. ಅಲ್ಲದೆ 2020ರ ಮೇ ತಿಂಗಳಿನಲ್ಲಿ ಈಶಾನ್ಯ ಲಡಾಖ್‌ನಲ್ಲಿ ಚೀನಾದ ಪಡೆ ಭಾರತದ ಪ್ರದೇಶವನ್ನು ಅತಿಕ್ರಮಿಸಿರುವುದು ಭಾರತ ಸರಕಾರದ ರಾಜತಾಂತ್ರಿಕ ಮತ್ತು ಭದ್ರತಾ ಆತಂಕವನ್ನು ಹೆಚ್ಚಿಸಿದೆ ಎಂದು ಸಮಿತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News