ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟ: ಕಾಂಗ್ರೆಸ್ ಜೊತೆ ಕೈಜೋಡಿಸುವುದಿಲ್ಲ ಎಂದ ರೈತ ಸಂಘ

Update: 2020-07-25 07:00 GMT

ಮೈಸೂರು, ಜು.25: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟ ಮಾಡಿದರೆ ಸ್ವಾಗತ. ಆದರೆ ಕರ್ನಾಟಕ ರಾಜ್ಯ ರೈತ ಸಂಘವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸುವುದಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ರೈತ ಸಂಘವು ದಲಿತ ಸಂಘರ್ಷ ಸಮಿತಿ ಸೇರಿದಂತೆ ಇತರ ಸಂಘಟನೆಗಳ ಜೊತೆ ಸೇರಿ ಹೋರಾಟ ಮಾಡಲಿದೆ. ಆದರೆ ಈ ಸಂಬಂಧ ಯಾವುದೇ ರಾಜಕೀಯ ಪಕ್ಷಗಳ ಜೊತೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ರಾಜ್ಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದಸಂಸ, ರೈತ ಸಂಘಗಳ ಜೊತೆಗೂಡಿ ಆ.15 ರಿಂದ ಹೋರಾಟ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರೇ ಇದರ ಬಗ್ಗೆ ಒಂದು ಹೇಳಿಕೆಯನ್ನು ನೀಡಿಲ್ಲ. ಅಂದರೆ ಇವರ ಪಕ್ಷದಲ್ಲೇ ಹೊಂದಾಣಿಕೆ ಇಲ್ಲ ಎಂಬುದು ಎದ್ದು ಕಾಣುತ್ತಿದೆ ಎಂದು ಬಡಗಲಪುರ ತಿಳಿಸಿದ್ದಾರೆ. ಒಂದು ವಿರೋಧ ಪಕ್ಷವಾಗಿ ಕಾಂಗ್ರೆಸ್ ಹೋರಾಟ ಮಾಡಲಿ. ಆದರೆ ರೈತ ಸಂಘ ಕೈಜೋಡಿಸುವುದಿಲ್ಲ. ನಮ್ಮ ಹೋರಾಟವನ್ನು ನಾವು ಮುಂದುವರಿಸಲಿದ್ದೇವೆ. ಇಂತಹ ಹೋರಾಟಗಳನ್ನು ಬಿಜೆಪಿಯವರು ಮಾಡಿದರು ಸ್ವಾಗತಿಸುವುದಾಗಿ ಹೇಳಿದರು.

ಭೂ ಸುಧಾರಣೆ ಕಾಯ್ದೆ ವಿರುದ್ಧ ಹೋರಾಟ ಮಾಡಲು ಜು.28 ರಂದು ರೈತ ಮುಖಂಡರ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚಿಸಿ ಮುಂದಿನ ಹೋರಾಟಗಳ ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ಬಡಗಲಪುರ ನಾಗೇಂದ್ರ ಹೇಳಿದರು.
ಇದೇ ವೇಳೆ ರಾಜ್ಯ ಸರಕಾರ ಆನ್‌ಲೈನ್ ಶಿಕ್ಷಣ ಪದ್ಧತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News