'ಕಾಫಿ ಡೇ' ಸಂಸ್ಥೆಗೆ 2,700 ಕೋಟಿ ರೂ. ಸಾಲ ಬಾಕಿಯಿರಿಸಿದ್ದ ವಿ.ಜಿ. ಸಿದ್ಧಾರ್ಥ ಒಡೆತನದ ಎಂಎಸಿಇಎಲ್: ವರದಿ

Update: 2020-07-25 11:10 GMT

ಬೆಂಗಳೂರು: ಉದ್ಯಮಿ ವಿ ಜಿ ಸಿದ್ಧಾರ್ಥ ಅವರ ಖಾಸಗಿ ಒಡೆತನದ ಮೈಸೂರು ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್(ಎಂಎಸಿಇಎಲ್) ಸಂಸ್ಥೆಯು ಸಿದ್ಧಾರ್ಥ ಅವರೇ ಸ್ಥಾಪಿಸಿದ ‘ಕಾಫಿ ಡೇ’ ಎಂಟರ್‍ಪ್ರೈಸಸ್ ಲಿಮಿಟೆಡ್(ಸಿಡಿಇಎಲ್) ಸಂಸ್ಥೆಗೆ ಲೆಕ್ಕಪತ್ರದಲ್ಲಿ ಕಾಣಿಸಿಕೊಳ್ಳದೇ ಇರುವ ರೂ. 2,693 ಕೋಟಿ ಸಾಲ ಬಾಕಿಯಿರಿಸಿದೆ ಎಂದು timesofindia ವರದಿ ಮಾಡಿದೆ ಎಂದು deccanherald.com ವರದಿ ಮಾಡಿದೆ.

ಜುಲೈ 31, 2019ರಲ್ಲಿದ್ದಂತೆ ಎಂಎಸಿಇಎಲ್ ಸಂಸ್ಥೆ ಕಾಫಿ ಡೇಗೆ ಒಟ್ಟು ರೂ 3,563 ಕೋಟಿ  ಬಾಕಿಯಿರಿಸಿದ್ದರೂ ಇದರ ಪೈಕಿ ಕೇವಲ ರೂ 842 ಕೋಟಿ ಸಾಲದ ಕುರಿತಾದ ಮಾಹಿತಿ ಕಾಫಿ ಡೇ ಎಂಟರ್‍ಪ್ರೈಸಸ್  ಸಂಸ್ಥೆಯ ಮಾರ್ಚ್ 31, 2019ರ ಲೆಕ್ಕಪತ್ರದಲ್ಲಿದೆ ಎಂದು ತನಿಖೆಯೊಂದರಿಂದ ತಿಳಿದು ಬಂದಿದೆ.

ಈ ತನಿಖೆಯನ್ನು  ಸಿಬಿಐನ ನಿವೃತ್ತ ಡಿಐಜಿ ಅಶೋಕ್ ಕುಮಾರ್ ಮಲ್ಹೋತ್ರಾ ಅವರ ನೇತೃತ್ವದ ತಂಡ ಕಾನೂನು ಸಂಸ್ಥೆ ಅಗಸ್ತ್ಯ ಲೀಗಲ್ ಸಹಾಯದೊಂದಿಗೆ ನಡೆಸಿತ್ತು.

ಸಾಲವನ್ನು ಎಂಎಸಿಇಎಲ್‍ನಿಂದ ವಾಪಸ್ ಪಡೆಯುವ ನಿಟ್ಟಿನಲ್ಲಿ ಸಿಡಿಇಎಲ್ ಅಂಗಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿವೆ ಎಂದು ಸಂಸ್ಥೆ ತಿಳಿಸಿದೆ. “ಈ ಸಾಲ ವಸೂಲಾತಿ ಪ್ರಕ್ರಿಯೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟಿನ ಮಾಜಿ ನ್ಯಾಯಾಧೀಶರನ್ನು ನೇಮಿಸಲು ಮಂಡಳಿಯು ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ'' ಎಂದು ಕಂಪೆನಿ ತಿಳಿಸಿದೆ.

ಕಾಫಿ ಡೇ ಎಂಟರ್‍ ಪ್ರೈಸಸ್‍ ನ ನಿದೇರ್ಶಕರಲ್ಲೊಬ್ಬರಾಗಿರುವ ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರು  ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಾವು ಮಂಡಳಿ ಮತ್ತು  ಸಂಬಂಧಿತ ಪ್ರಾಧಿಕಾರಗಳಿಗೆ ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

 ಆದರೆ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಿದ್ಧಾರ್ಥ ಅವರು ಬರೆದಿದ್ದ ಕೊನೆಯ ಪತ್ರದಲ್ಲಿ ಆದಾಯ ತೆರಿಗೆ ಇಲಾಖೆ ಹಾಗೂ  ಖಾಸಗಿ ಈಕ್ವಿಟಿ ಸಂಸ್ಥೆಗಳ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರೂ ತನಿಖೆ ಮಾತ್ರ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳಿಗೆ ಕ್ಲೀನ್ ಚಿಟ್ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News