ಮನೆಬಾಗಿಲಿಗೆ ಮೂತ್ರ ಮಾಡಿ, ಕಿರುಕುಳ ನೀಡಿದ ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ: ಮಹಿಳೆಯ ಆರೋಪ

Update: 2020-07-25 11:30 GMT
ಡಾ. ಸುಬ್ಬಯ್ಯ ಷಣ್ಮುಗಂ

ಚೆನ್ನೈ: ಪಾರ್ಕಿಂಗ್ ವಿಚಾರದಲ್ಲಿ ಜಗಳವಾಡಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ನಗರದ 62 ವರ್ಷದ ಮಹಿಳೆಯೊಬ್ಬರು ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಡಾ. ಸುಬ್ಬಯ್ಯ ಷಣ್ಮುಗಂ ಅವರ ವಿರುದ್ಧ ದೂರು ನೀಡಿದ್ದಾರೆ. 

ಷಣ್ಮುಗಂ ಅವರು ತಮ್ಮ ಮನೆಬಾಗಿಲಿನಲ್ಲಿ ಮೂತ್ರ ಮಾಡಿದ್ದೇ ಅಲ್ಲದೆ ಬಳಸಿದ ಮಾಸ್ಕ್‍ ಗಳನ್ನೂ ಎಸೆದಿದ್ದಾರೆಂದು ಆಕೆ ಆರೋಪಿಸಿದ್ದಾರೆ. ಜತೆಗೆ ಷಣ್ಮುಗಂ ಆಕೆಯ ಮನೆಯೆದುರು ಮೂತ್ರ ಮಾಡುತ್ತಿರುವ ದೃಶ್ಯವಿದೆಯೆನ್ನಲಾದ ಸೀಸಿಟಿವಿ ಫೂಟೇಜ್ ಹಾಗೂ ಕೆಲ ಫೋಟೋಗಳನ್ನೂ ಆಕೆ ನೀಡಿದ್ದಾರೆ. ದೂರನ್ನು ಆಡಂಬಕ್ಕಂ ಠಾಣೆಯಲ್ಲಿ ಜುಲೈ 11ರಂದು ದಾಖಲಿಸಲಾಗಿದೆ.

ದೂರುದಾರ ಮಹಿಳೆಯ ಸೋದರಳಿಯ, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಬಾಲಾಜಿ ವಿಜಯರಾಘವನ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮಹಿಳೆಯ ಪಾರ್ಕಿಂಗ್ ಸ್ಥಳ ಬಳಕೆಗೆ ಷಣ್ಮುಗಂ ಆಕೆಯ ಅನುಮತಿ ಕೇಳಿದಾಗ ಅದಕ್ಕೆ ರೂ 1500 ಪಾವತಿಸುವಂತೆ ಆಕೆ ಹೇಳಿದ್ದರೆನ್ನಲಾಗಿದ್ದು, ಇದರಿಂದ ಕುಪಿತಗೊಂಡ ಷಣ್ಮುಗಂ ಆಕೆಯ ಮನೆ ಬಾಗಿಲಿಗೆ ಬಳಸಿದ ಕಹಿಬೇವಿನ ಎಲೆಗಳು ಹಾಗೂ ಮಾಸ್ಕ್‍ ಗಳನ್ನು ಎಸೆದರೆಂದು ಆರೋಪಿಸಲಾಗಿದೆ.

ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಹೊರತಾಗಿ ಷಣ್ಮುಗಂ ಅವರು ಕಿಲ್ಪಾಕ್ ಮೆಡಿಕಲ್ ಕಾಲೇಜಿನಲ್ಲಿ  ಪ್ರೊಫೆಸರ್ ಹಾಗೂ ರೋಯಪೆಟ್ಟಾ ಸರಕಾರಿ ಆಸ್ಪತ್ರೆಯಲ್ಲಿ ಸರ್ಜಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಧಿ ತ್ರಿಪಾಠಿ, ಎನ್‍ಎಸ್‍ಯುಐ ನಕಲಿ ವೀಡಿಯೋ ಮೂಲಕ ಡಾ. ಷಣ್ಮುಗಂ ಅವರ ವಿರುದ್ಧ ದುರುದ್ದೇಶಪೂರಿತ ಅಭಿಯಾನ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಮಹಿಳೆ ಮಾಡಿರುವ ಆರೋಪಗಳ ತನಿಖೆ ನಡೆಸುವಂತೆಯೂ ಅವರು ಆಗ್ರಹಿಸಿದ್ದಾರೆ.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News