ಕಾರಿನೊಳಗೆ 2 ಗಂಟೆಗಳ ಕಾಲ ಸಿಲುಕಿ ಉಸಿರುಗಟ್ಟಿ ಇಬ್ಬರು ಬಾಲಕಿಯರು ಮೃತ್ಯು

Update: 2020-07-25 11:33 GMT

ವಿಲ್ಲುಪುರಂ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಗ್ರಾಮವೊಂದರಲ್ಲಿ ಕಾರೊಂದರ ಒಳಗಡೆ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಸಮಯ ಸಿಲುಕಿ ಹಾಕಿಕೊಂಡಿದ್ದ ನಾಲ್ಕು ಹಾಗೂ ಏಳು ವರ್ಷದ ಇಬ್ಬರು ಬಾಲಕಿಯರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ತಮ್ಮ ಮನೆಯ ಸಮೀಪ ನಿಲ್ಲಿಸಲಾಗಿದ್ದ ಕಾರಿನಲ್ಲಿ ಮಕ್ಕಳಿಬ್ಬರು ಪ್ರಜ್ಞಾಹೀನರಾಗಿ ಬಿದ್ದಿರುವುದನ್ನು ಕೆಲವರು ಗಮನಿಸಿದ ನಂತರ ಇಬ್ಬರು ಬಾಲಕಿಯರನ್ನೂ ತಿರುಕೊವಿಲೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.

ವಿಚಾರಣೆಗಾಗಿ ಕಾರಿನ ಮಾಲಕರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತ ಬಾಲಕಿಯರು  ಕುಲದೀಪಮಂಗಲಂನ ಇಬ್ಬರು ಕೃಷಿ ಕಾರ್ಮಿಕರ ಪುತ್ರಿಯರಾಗಿದ್ದು ಅವರು ತಮ್ಮ ಮನೆ ಪಕ್ಕದ ರಸ್ತೆಯಲ್ಲಿ ಆಡುತ್ತಿರುವಾಗ ಘಟನೆ ಸಂಭವಿಸಿದೆ. ಅವರ ನೆರೆಮನೆಯ ರಾಜಾ ಎಂಬ ಹೆಸರಿನ ವ್ಯಕ್ತಿಯ ಕಾರನ್ನು ಈ ಸಂದರ್ಭ ಅವರು ಏರಿದ್ದರು. ಎರಡು ವರ್ಷಗಳ ಹಿಂದೆ ಅಪಘಾತಕ್ಕೀಡಾದ ನಂತರ ಕಾರನ್ನು ಮನೆಯೆದುರು ನಿಲ್ಲಿಸಲಾಗಿತ್ತು. ಅದರ ಬಾಗಿಲುಗಳನ್ನು  ತೆಗೆದು ಒಳಕ್ಕೆ ಹೋದ ಬಾಲಕಿಯರಿಗೆ ಹೊರಗೆ ಬರಲು ಸಾಧ್ಯವಾಗದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News