ಕೋವಿಡ್ ಸಂಕಷ್ಟ: ಖಾಸಗಿ ಶಾಲೆಗಳಿಗೆ ಆರ್‍ಟಿಇ ಬಾಕಿ ಮೊತ್ತ ಕೂಡಲೇ ಪಾವತಿಸಲು ಬಸವರಾಜ ಹೊರಟ್ಟಿ ಒತ್ತಾಯಿ

Update: 2020-07-25 12:22 GMT

ಬೆಂಗಳೂರು, ಜು.25: ಕೋವಿಡ್ ಸಂಕಷ್ಟದ ಸಮಯದಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಬಾಕಿಯಿರುವ ಆರ್‍ಟಿಇ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್-19 ಹಿನ್ನೆಲೆ ಶಾಲೆಗಳು ಪ್ರಾರಂಭಗೊಂಡಿಲ್ಲ. ಹಾಗೂ ಪೋಷಕರಿಂದ ಬಾಕಿ ಶುಲ್ಕವನ್ನು ಪಡೆಯಲು ಒತ್ತಾಯ ಮಾಡುವ ಆಗಿಲ್ಲವೆಂದು ರಾಜ್ಯ ಸರಕಾರ ಸೂಚನೆ ನೀಡಿದೆ. ಹೀಗಾಗಿ ರಾಜ್ಯ ಸರಕಾರವೇ ಖಾಸಗಿ ಶಾಲೆಗಳ ನೆರವಿಗೆ ಬರಬೇಕೆಂದು ತಿಳಿಸಿದ್ದಾರೆ.

ಸರಕಾರ ಸ್ವಲ್ಪ ಆಸಕ್ತಿ ವಹಿಸಿದರೆ ಖಾಸಗಿ ಶಾಲೆಗಳಿಗೆ ನೆರವಿನ ಹಸ್ತ ಚಾಚಬಹುದು. ಕನಿಷ್ಠ ಬ್ಯಾಂಕ್‍ಗಳಿಂದ ಬಡ್ಡಿರಹಿತ ಸಾಲವನ್ನು ಕೊಡಲು ನಿರ್ದೇಶನ ನೀಡಬಹುದು. ಇದರಿಂದಾಗಿ ಶಾಲೆಗಳ ಮಾಲಕರು ತಮ್ಮ ಸಿಬ್ಬಂದಿಗಳಿಗೆ ವೇತನ ಸೇರಿದಂತೆ ಶಾಲೆಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೋವಿಡ್ ಭಯದಿಂದ ಎಲ್ಲಿಯವರೆಗೂ ಶಾಲೆಗಳನ್ನು ಮುಚ್ಚಲು ಸಾಧ್ಯವಾಗುತ್ತದೆ. ಹೀಗಾಗಿ ಕೋವಿಡ್ ನಡುವೆಯೂ ಹಂತ ಹಂತವಾಗಿ ಎಲ್ಲವನ್ನು ಪ್ರಾರಂಭಿಸಿದಂತೆ ಶಾಲಾ-ಕಾಲೇಜುಗಳನ್ನು ತೆರೆಯಲು ತಯಾರಿ ಮಾಡಿಕೊಳ್ಳಬೇಕು. ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರಕಾರ ಸೂಕ್ತವಾದ ನಿಯಮಗಳನ್ನು ರೂಪಿಸಿ, ನಂತರ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವುದರತ್ತ ಚಿಂತನೆ ಮಾಡಬೇಕೆಂದು ಅವರು ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News