ಜು.26ರಂದು ರಾಜ್ಯಾದ್ಯಂತ 'ಸಂಡೇ ಲಾಕ್‍ಡೌನ್': ಅನಗತ್ಯ ಸಂಚಾರಕ್ಕೆ ನಿರ್ಬಂಧ, ವ್ಯಾಪಾರ ವಹಿವಾಟು ಸ್ಥಗಿತ

Update: 2020-07-25 13:56 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು. 25: ಮಾರಕ ಕೊರೋನ ವೈರಸ್ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕಿತರ ಸಾವಿನ ಸಂಖ್ಯೆಯೂ ಏರುತ್ತಿದೆ. ಸೋಂಕು ನಿಯಂತ್ರಣದ ದೃಷ್ಟಿಯಿಂದ ರಾಜ್ಯಾದ್ಯಂತ 'ರವಿವಾರದ ಲಾಕ್‍ಡೌನ್' ಇರಲಿದೆ. ಹಾಲು, ಆಸ್ಪತ್ರೆ, ಔಷಧ ಅಂಗಡಿ, ಮಾಂಸ-ಮೊಟ್ಟೆ, ಹಣ್ಣು-ತರಕಾರಿ, ದಿನಸಿ ಸಹಿತ ಅಗತ್ಯ ಸೇವೆಗಳನ್ನು ಹೊರತುಪಡಿಸಿದೆ ಉಳಿದ ಎಲ್ಲ ಸೇವೆಗಳು-ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಲಿದೆ.

ರಾತ್ರಿ 9 ಗಂಟೆಯಿಂದ ಜು.27ರ ಸೋಮವಾರ ಬೆಳಗ್ಗೆ 5ಗಂಟೆಯ ವರೆಗೆ ಲಾಕ್‍ಡೌನ್ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ಕರ್ಫ್ಯೂ ಹೇರಲಾಗುತ್ತದೆ ಎಂದು ರಾಜ್ಯ ಸರಕಾರ ತಿಳಿಸಿದೆ. ಅನಗತ್ಯ ಸಂಚಾರಕ್ಕೆ ನಿರ್ಬಂಧ ಹೇರಿದ್ದು, ಮನಸೋ ಇಚ್ಛೆ ಸಂಚರಿಸುವ ಬೈಕ್ ಸವಾರರು, ವಾಹನ ಚಾಲಕರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೊಟೇಲ್, ರೆಸ್ಟೋರೆಂಟ್‍ಗಳು ಬಂದ್ ಆಗಲಿದ್ದು, ಆಟೋರಿಕ್ಷಾ, ಟ್ಯಾಕ್ಸಿ, ಕೆಎಸ್ಸಾರ್ಟಿಸಿ ಸಹಿತ ಸಾರಿಗೆ ವ್ಯವಸ್ಥೆಯೂ ಇರುವುದಿಲ್ಲ. 

ದಿನಕ್ಕೆ ಮೂರ್ನಾಲ್ಕು ಸಾವಿರದಲ್ಲಿದ್ದ ಸೋಂಕಿನ ಪ್ರಕರಣಗಳ ಸಂಖ್ಯೆ ಎರಡು-ಮೂರು ದಿನಗಳಲ್ಲಿ ಅದು ಐದು ಸಾವಿರದ ಗಡಿಯನ್ನು ದಾಟಿದೆ. ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮುಂದುವರಿಕೆಯನ್ನು ಕೈಬಿಟ್ಟಿರುವ ರಾಜ್ಯ ಸರಕಾರ ಇದೀಗ 'ರವಿವಾರದ ಲಾಕ್‍ಡೌನ್' ಅನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕು ಪ್ರಕರಣಗಳ ಏರಿಕೆಗೆ ಕಡಿವಾಣ ಹಾಕಲು ತೀರ್ಮಾನಿಸಿದೆ.

ಶನಿವಾರ(ಜು.25) ರಾತ್ರಿ 9ಗಂಟೆಯಿಂದ ಜು.27ರ ಸೋಮವಾರ ಬೆಳಗ್ಗೆ 5ರ ವರೆಗೆ ಒಟ್ಟು 36 ಗಂಟೆಗಳ 'ರವಿವಾರದ ಲಾಕ್‍ಡೌನ್' ಜಾರಿ ಹಿನ್ನೆಲೆಯಲ್ಲಿ ಅನಗತ್ಯ ಓಡಾಡುವವರ ವಿರುದ್ಧ ಪೊಲೀಸರು ವಿಪತ್ತು ನಿರ್ವಹಣಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಹೀಗಾಗಿ ಸಾರ್ವಜನಿಕರು ತಮ್ಮ ಮನೆಗಳಲ್ಲೇ ಸುರಕ್ಷಿತವಾಗಿರಬೇಕು ಎಂದು ಸರಕಾರ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News