ಐಸಿಎಂಆರ್ ನಿಂದ ಸಿಗದ ಅನುಮತಿ: ಚಿಕ್ಕಮಗಳೂರಿನ ಕೋವಿಡ್ ಲ್ಯಾಬ್ ಕಾರ್ಯಾರಂಭ ಇನ್ನೊಂದು ವಾರ ವಿಳಂಬ

Update: 2020-07-25 13:55 GMT

ಚಿಕ್ಕಮಗಳೂರು, ಜು.25: ನಗರದಲ್ಲಿ ಕೊರೋನ ಸೋಂಕು ಪರೀಕ್ಷೆಯ ಪ್ರಯೋಗಾಲಯ ಶನಿವಾರ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು. ಆದರೆ ಲ್ಯಾಬ್ ಕಾರ್ಯಾರಂಭ ಮಾಡಲು ಇನ್ನೂ ಒಂದು ವಾರ ತಡವಾಗಲಿದೆ ಎಂದು ಜಿಲ್ಲಾ ಸರ್ಜನ್ ತಿಳಿಸಿದ್ದಾರೆ.

ನಗರದಲ್ಲಿ ನಿರ್ಮಾಣವಾಗುತ್ತಿರುವ ಕೊರೋನ ಸೋಂಕು ಪರೀಕ್ಷಾ ಪ್ರಯೋಗಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಯಂತ್ರೋಪಕರಣಗಳನ್ನೂ ಇಂಗ್ಲೆಂಡ್ ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ಸದ್ಯ ಲ್ಯಾಬ್‍ನಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ಮಾಡುತ್ತಿದ್ದು, ಜು.25ರಂದು ಶನಿವಾರ ಲ್ಯಾಬ್ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಲ್ಯಾಬ್ ಕಾರ್ಯಾರಂಭದ ಹಿನ್ನೆಲೆಯಲ್ಲಿ ಶನಿವಾರ ಸುದ್ದಿಗಾರರು ಜಿಲ್ಲಾ ಸರ್ಜನ್ ಬಳಿ ಮಾಹಿತಿ ಕೇಳಿದ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾ ಸರ್ಜನ್ ಡಾ.ಎಸ್.ಮೋಹನ್‍ ಕುಮಾರ್, ಕೋವಿಡ್-19 ಲ್ಯಾಬ್ ಕಾರ್ಯಾರಂಭ ಮಾಡಲು ಇನ್ನೂ ಒಂದು ವಾರದ ಕಾಲಾವಕಾಶ ಬೇಕು. ಸದ್ಯ ಸೋಂಕು ಪರೀಕ್ಷೆಗೆ ಲ್ಯಾಬ್ ಸಿದ್ಧಗೊಂಡಿದೆಯಾದರೂ ಕೇವಲ ಪರೀಕ್ಷೆಗಳನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಕೋವಿಡ್-19 ಲ್ಯಾಬ್‍ನಲ್ಲಿ ಅಧಿಕೃತವಾಗಿ ಸೋಂಕು ಪರೀಕ್ಷೆಗೆ ಭಾರತೀಯ ವೈದ್ಯಕೀಯ ಸಂಶೋಧನ ಸಂಸ್ಥೆಯಿಂದ ಅನುಮತಿ ಬೇಕು. ಅನುಮತಿ ಇಲ್ಲದೇ ಅಧಿಕೃತವಾಗಿ ಪರೀಕ್ಷೆ ನಡೆಸುವಂತಿಲ್ಲ. ಐಸಿಎಂಆರ್ ಸಂಸ್ಥೆಯಿಂದ ಇನ್ನೂ ಅನಮತಿ ಸಿಗದ ಹಿನ್ನೆಲೆಯಲ್ಲಿ ಲ್ಯಾಬ್ ಕಾರ್ಯಾರಂಭಕ್ಕೆ ಇನ್ನೂ ಒಂದು ವಾರ ತಡವಾಗಲಿದೆ ಎಂದು ಜಿಲ್ಲಾ ತಿಳಿಸಿದರು.

ಸದ್ಯ ನಗರದ ಹೆರಿಗೆ ಕೋವಿಡ್ ಆಸ್ಪತ್ರೆ ಆವರಣದ ಕಟ್ಟದಲ್ಲಿ ತೆರೆಯಲಾಗಿರುವ ಕೊರೋನ ಪರೀಕ್ಷೆಯ ಪ್ರಯೋಗಾಲಯದಲ್ಲಿ ವಿದೇಶಗಳಿಂದ ಆಮದು ಮಾಡಿಕೊಂಡಿರುವ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಲ್ಯಾಬ್ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು, ಪ್ರತಿ ದಿನ ನಾಲ್ಕು ಶಿಫ್ಟ್ ನಲ್ಲಿ ಕೋವಿಡ್-19 ಪರೀಕ್ಷಾ ಕಾರ್ಯ ನಡೆಯಲಿದೆ. ಈ ಲ್ಯಾಬ್‍ನಲ್ಲಿ ಒಂದು ದಿನಕ್ಕೆ ಸುಮಾರು 800 ರಿಂದ 900 ಸೋಂಕಿತರ ಗಂಟಲ ದ್ರವ ಹಾಗೂ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬಹುದಾಗಿದೆ. ಅಲ್ಲದೇ ಈ ಲ್ಯಾಬ್‍ನಲ್ಲಿ ಸೋಂಕಿತ ವ್ಯಕ್ತಿಗೆ ಆರ್‍ಟಿಪಿಸಿಆರ್ ಪರೀಕ್ಷೆ ನಡೆಸುವುದರಿಂದ ಕೊರೋನ ವೈರಸ್ ಸೇರಿದಂತೆ ಆತ ಬೇರೆ ಯಾವ ಯಾವ ಕಾಯಿಲೆಗಳಿಂದ ಬಳಲುತ್ತಿದ್ದಾನೆ ಎಂಬುದನ್ನೂ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದರು.

(ಡಾ.ಎಸ್.ಮೋಹನ್‍ ಕುಮಾರ್)

ಜಿಲ್ಲೆಯಲ್ಲಿ ಪ್ರಯೋಗಾಲಯ ಕಾರ್ಯಾಂಭ ಮಾಡುವುದರಿಂದ 24 ಗಂಟೆಗಳಲ್ಲಿ ಸೋಂಕಿತರ ಪರೀಕ್ಷಾ ವರದಿ ನೀಡಲು ಸಾಧ್ಯವಾಗಲಿದೆ. ಇದರಿಂದ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದ ಅವರು, ಲ್ಯಾಬ್ ನಿರ್ಮಾಣ ತಡವಾದ ಹಿನ್ನೆಲೆಯಲ್ಲಿ ಜಿಲ್ಲೆಗೆ 2500 ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್‍ಗಳನ್ನು ಸರಕಾರ ಪೂರೈಕೆ ಮಾಡಿತ್ತು. ಈ ಕಿಟ್‍ಗಳು ಸದ್ಯ ಖಾಲಿಯಾಗಿರುವುದರಿಂದ ಸರಕಾರ ಮತ್ತೆ 3 ಸಾವಿರ ರ‍್ಯಾಪಿಡ್ ಟೆಸ್ಟ್ ಕಿಟ್‍ಗಳನ್ನು ಹೆಚ್ಚುವರಿಯಾಗಿ ಪೂರೈಕೆ ಮಾಡಿದೆ. ಈ ಕಿಟ್‍ಗಳನ್ನು ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಆವಶ್ಯಕತೆಗನುಗುಣವಾಗಿ ವಿತರಣೆ ಮಾಡಲಾಗಿದೆ. ಕಿಟ್‍ಗಳ ಮೂಲಕ ಸದ್ಯ ಸೋಂಕು ಪರೀಕ್ಷೆ ನಡೆಯುತ್ತಿದ್ದು, ಲ್ಯಾಬ್ ಕಾರ್ಯಾರಂಭಕ್ಕೆ ಐಸಿಎಂಆರ್ ಅನುಮತಿ ನೀಡಿದ ಬಳಿಕ ಜಿಲ್ಲೆಯಲ್ಲಿ ಸೋಂಕು ಪರೀಕ್ಷೆಯ ಸಾಮರ್ಥ್ಯವೂ ಹೆಚ್ಚಲಿದೆ ಎಂದರು.

ಸದ್ಯ ಕೋವಿಡ್ ಆಸ್ಪತ್ರೆಗಳಲ್ಲಿ 18 ವೆಂಟಿಲೇಟರ್ ಗಳು ಲಭ್ಯವಿದೆ. ಅವುಗಳ ಪೈಕಿ 8 ವೆಂಟಿಲೇಟರ್ ಗಳು ಬಳಕೆಯಾಗುತ್ತಿದ್ದು, 3 ಮಂದಿಗೆ ಮಾತ್ರ ಕೋವಿಡ್-19 ಸೋಂಕಿತರಿಗೆ ವೆಂಟಿಲೇಟರ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಕೋವಿಡ್ ಆಸ್ಪತ್ರೆಯಲ್ಲಿ 15 ಹಾಸಿಗೆಯ ಐಸಿಯು ವಾರ್ಡ್ ತೆರೆಯಲಾಗಿದೆ ಎಂದರು. 

ಕೋವಿಡ್-19 ಸೋಂಕಿನ ನಂತರ ದಿನಗಳಲ್ಲಿ ಜಿಲ್ಲಾಸ್ಪತ್ರೆಗೆ ಬರುವ ಇತರ ರೋಗಿಗಳ ಸಂಖ್ಯೆ ಶೇ.50ರಷ್ಟು ಕಡಿಮೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಅಗತ್ಯ ಇರುವವರಿಗೆ 12 ಡಯಾಲಿಸಿಸ್ ಯಂತ್ರಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ 9 ಡಯಾಲಿಸಿಸ್ ಯಂತ್ರಗಳ ಮೂಲಕ ಯಾವುದೇ ಕಾಯಿಲೆ ಇಲ್ಲದಿರುವವರಿಗೆ ಬಳಕೆ ಮಾಡಲಾಗುತ್ತಿದೆ. ಮೂರು ಯಂತ್ರಗಳ ಮೂಲಕ ಇತರ ಕಾಯಿಲೆಗಳಿಂದ ಬಳಲುತ್ತಿರುವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಕೋವಿಡ್-19 ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಿಬ್ಬಂದಿಗೆ ವೇತನ ವಿಳಂಬವಾಗಿದ್ದು ನಿಜ. ಸರಕಾರ ಖಾಯಂ ನರ್ಸ್ ಗಳಿಗೆ ಬಾಕಿ ವೇತನ ನೀಡಿದೆ. ಲ್ಯಾಬ್ ತಂತ್ರಜ್ಞರಿಗೆ ಸದ್ಯದಲ್ಲೇ ವೇತನ ಆಗಲಿದೆ. ಜಿಲ್ಲಾಸ್ಪತ್ರೆಯಲ್ಲಿ ಕೆಲವು ನ್ಯೂನತೆಗಳಿದ್ದು, ಅವುಗಳನ್ನು ಹಂತ ಹಂತವಾಗಿ ಸರಿಪಡಿಸುವುದಾಗಿ ಇದೇ ವೇಳೆ ಜಿಲ್ಲಾ ಸರ್ಜನ್ ಡಾ.ಮೋಹನ್‍ ಕುಮಾರ್ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News