ಮೈಸೂರು: ರೈಲ್ವೆ ಖಾಸಗೀಕರಣ ವಿರೋಧಿಸಿ ಕಾಂಗ್ರೆಸ್ ಪೋಸ್ಟ್ ಕಾರ್ಡ್ ಚಳುವಳಿ

Update: 2020-07-25 18:32 GMT

ಮೈಸೂರು,ಜು.25: ಕೇಂದ್ರ ಬಿಜೆಪಿ ಸರ್ಕಾರದ ರೈಲ್ವೆ ಖಾಸಗೀಕರಣ ವಿರೋಧಿಸಿ ಮೈಸೂರು ನಗರ ಪಾಲಿಕೆ ಮುಂಭಾಗದಲ್ಲಿ ಮೈಸೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಅಂಚೆ ಚಳುವಳಿ ನಡೆಸಲಾಯಿತು.

ರೈಲ್ವೆ ಖಾಸಗೀಕರಣ ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಗೆ ಪೋಸ್ಟ್ ಮಾಡುವ ಮೂಲಕ ಮೈಸೂರು ಮಹಾನಗರ ಪಾಲಿಕೆ ಮುಂಭಾಗದ ಅಂಚೆ ಪೆಟ್ಟಿಗೆಗೆ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟ್ ಕಾರ್ಡ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ವಿವಿಧ ಘೋಷಣೆ ಕೂಗಿ ಆಕ್ರೋಶ  ಹೊರ ಹಾಕಿದರು. 

ಪೋಸ್ಟ್ ಕಾರ್ಡ್ ಚಳುವಳಿಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಈ ದೇಶದ ಭರವಸೆಯ ಬೆಳಕಾಗಿದ್ದ ಯುವಕರು ನರೇಂದ್ರ ಮೋದಿಯವರಿಂದ ಈ ದೇಶ ಬದಲಾಗಲಿದೆ. ದೇಶಕ್ಕೆ ಹೊಸ ಶಕ್ತಿ ಚೈತನ್ಯ ಬರಲಿದೆ ಎಂದು ನಂಬಿ ಯಾವುದೇ ಯೋಚನೆ ಮಾಡದೆ ದೇಶದ ಚುಕ್ಕಾಣಿ ನೀಡಿದರು. ಆದರೆ ಇಂದು ಆಶಾ ಗೋಪುರ ಕಟ್ಟಿಕೊಂಡಿದ್ದ ಭಾರತೀಯರಿಗೆ ವಿಶೇಷವಾಗಿ ಯುವಕರಿಗೆ ಭ್ರಮನಿರಶನ ಉಂಟಾಗಿದೆ. ದೇಶದ ಯುವಕರಿಗಾಗಿ 2 ಕೋಟಿ ಉದ್ಯೋಗ ಸೃಷ್ಠಿಸಿ ನಿರುದ್ಯೋಗಕ್ಕೆ ಮುಕ್ತಿ ಕೊಡುತ್ತೇನೆಂದು ಭರವಸೆ ನೀಡಿದ್ದ ಮೋದಿಯವರು ಉದ್ಯೋಗ ಕೊಡುವುದಿರಲಿ ಇರುವ ಉದ್ಯೋಗವನ್ನು ಕಸಿದು ಬೀದಿಪಾಲು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈಗಾಗಲೇ ಬಿಎಸ್ ಎನ್ ಎಲ್, ಬಿಇಎಂಎಲ್, ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡಲು ಸಿದ್ಧತೆ ಮಾಡಿಕೊಂಡಿದ್ದು ಈಗ ರೈಲ್ವೆ ಇಲಾಖೆಯ 159 ಲೈನ್ ಗಳನ್ನು ಖಾಸಗೀಕರಣ ಮಾಡಲೊರಟಿರುವುದು ಅತ್ಯಂತ ಘೋರ ಅನ್ಯಾಯ. ಲಕ್ಷಾಂತರ ಉದ್ಯೋಗಿಗಳಿಗೆ ಜೀವನ ಭದ್ರತೆ ಇದ್ದ ಹುದ್ದೆಗಳನ್ನು ಕಡಿತಗೊಳಿಸಿ ಇಡೀ ಕುಟುಂಬಗಳನ್ನೇ ಬೀದಿಪಾಲು ಮಾಡುತ್ತಿರುವುದು ದುರದೃಷ್ಟಕರ. ಈಗಾಗಲೇ ಸಂವಿಧಾನದ ಆಶಯಗಳೆಲ್ಲವೂ ಬುಡಮೇಲಾಗುತ್ತಿದ್ದು ಉದ್ಯೋಗದಲ್ಲಿ ರಾಜಕೀಯದಲ್ಲಿ ಇದ್ದ ಮೀಸಲಾತಿ ಮರೀಚಿಕೆಯಾಗುತ್ತಿದೆ ಎಂದು ಎಂ.ಕೆ ಸೋಮಶೇಖರ್ ಕೇಂದ್ರದ ವಿರುದ್ದ ಹರಿಹಾಯ್ದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ.ಕೆ ಸೋಮಶೇಖರ್, ನಗರಾಧ್ಯಕ್ಷರಾದ ಆರ್.ಮೂರ್ತಿ, ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ.ಎಂ ಕೆ ಅಶೋಕ್, ಬ್ಲಾಕ್ ಅಧ್ಯಕ್ಷ ಜಿ ಸೋಮಶೇಖರ್, ಮಾಜಿ ಮಹಾಪೌರರಾದ ಅಯೂಬ್ ಖಾನ್, ಮಾಜಿ ಅಧ್ಯಕ್ಷ ಟಿ ಎಸ್ ರವಿಶಂಕರ್, ಡಾ.ಸುಜಾತರಾವ್, ಆರ್ ಕೆ ರವಿ, ಲೋಕೇಶ್ ಮಾದಪುರ, ದೀಪಕ್ ಪುಟ್ಟಸ್ವಾಮಿ, ಡೈರಿ ವೆಂಕಟೇಶ್, ಅಲ್ಪ ಸಂಖ್ಯಾತರ ವಿಭಾಗದ ಮುಖಂಡ ಅಕ್ರಂ, ಗುಣಶೇಖರ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News