ಕಾಶ್ಮೀರದ ಲಾಕ್‌ಡೌನ್ ಸಂಭ್ರಮ ಮುಗಿಯುವುದೆಂದು?

Update: 2020-07-27 04:44 GMT

ಕೊರೋನವನ್ನು ಎದುರಿಸುವ ಭಾಗವಾಗಿ ಕಳೆದೆರಡು ತಿಂಗಳಿಂದ ಇಡೀ ದೇಶ ದಿಗ್ಬಂಧನದಲ್ಲಿದೆ. ಆದರೆ ಕೊರೋನ ಸಮುದಾಯ ಹಂತ ತಲುಪದಂತೆ ತಡೆಯುವಲ್ಲಿ ಈ ದಿಗ್ಬಂಧನಕ್ಕೆ ಸಾಧ್ಯವಾಗಿಲ್ಲ. ಆದರೆ ಎರಡು ತಿಂಗಳ ಲಾಕ್‌ಡೌನ್‌ನಿಂದ ಈ ದೇಶದ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಯಿತು. ದೇಶ ಆರ್ಥಿಕ ಮತ್ತು ಸಾಮಾಜಿಕವಾಗಿ ಅಸ್ತವ್ಯಸ್ತಗೊಂಡಿತು. ಕೊರೋನ ಹೆಸರಿನಲ್ಲಿ ವಿಧಿಸಲಾಗಿರುವ ಕರ್ಫ್ಯೂವನ್ನು ಬಳಸಿಕೊಂಡು ಪೊಲೀಸರು ಜನಸಾಮಾನ್ಯರ ಮೇಲೆ ಎಸಗಿದ ಸಾಲು ಸಾಲು ದೌರ್ಜನ್ಯಗಳು ಮಾಧ್ಯಮಗಳಲ್ಲಿ ವರದಿಯಾದವು. ಈ ಲಾಕ್‌ಡೌನ್‌ನ ದುಷ್ಪರಿಣಾಮಗಳಿಂದ ಚೇತರಿಸಿಕೊಳ್ಳಲು ದೇಶಕ್ಕೆ ಇನ್ನೂ ಒಂದೆರಡು ವರ್ಷಗಳಾದರೂ ಬೇಕಾಗಬಹುದು.

ದೇಶಾದ್ಯಂತ ಲಾಕ್‌ಡೌನ್ ವಿಧಿಸುವ ಮೊದಲೇ ಈ ದೇಶದ ಒಂದು ಭಾಗವಾಗಿರುವ ಕಾಶ್ಮೀರದಲ್ಲಿ ಅದಾಗಲೇ ಸರಕಾರ ಲಾಕ್‌ಡೌನ್ ವಿಧಿಸಿ 6 ತಿಂಗಳು ಕಳೆದಿದ್ದವು. ಆ ರಾಜ್ಯವನ್ನು ಹೊರತು ಪಡಿಸಿ, ಇಡೀ ಭಾರತ ಆ ‘ಲಾಕ್‌ಡೌನ್’ ಅಥವಾ ‘ದಿಗ್ಬಂಧನ’ವನ್ನು ಸಂಭ್ರಮಿಸಿತ್ತು. ಕಾಶ್ಮೀರದ ಜನರ ಬದುಕುವ ಹಕ್ಕಿಗೇ ವಿಧಿಸಲಾಗಿರುವ ಆ ಆರು ತಿಂಗಳ ದಿಗ್ಬಂಧನ, ನಮಗೆ ಸಿಕ್ಕಿದ ಸ್ವಾತಂತ್ರ ಎಂಬಂತೆ ಅದನ್ನು ಆಸ್ವಾದಿಸಿದ್ದೆವು. ಲಾಕ್‌ಡೌನ್, ಕರ್ಫ್ಯೂ, ದಿಗ್ಬಂಧನಗಳು ಹೇಗೆ ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡಬಹುದು ಎನ್ನುವುದು ನಮಗೆ ಅರಿವಾಗಬೇಕಾದರೆ ಈ ದೇಶಕ್ಕ್ಕೆ ಕೊರೋನ ಕಾಲಿಡಬೇಕಾಯಿತು. ಇಂದು ನಾವು ಕೊರೋನವನ್ನು ಗೆಲ್ಲುವುದು ಪಕ್ಕಕ್ಕಿರಲಿ, ದೇಶಾದ್ಯಂತ ಕೊರೋನವನ್ನು ಹಲವು ಪಟ್ಟು ಹೆಚ್ಚಿಸಿಕೊಂಡಿದ್ದೇವೆ ಮಾತ್ರವಲ್ಲ, ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು ಖಾಲಿ ಕೈಯಲ್ಲಿ ನಿಂತಿದ್ದೇವೆ. ಇಂತಹ ದಿನಗಳಲ್ಲಿ ಕಾಶ್ಮೀರದಲ್ಲಿ ಲಾಕ್‌ಡೌನ್‌ಗೆ ಶೀಘ್ರವೇ ಒಂದು ವರ್ಷ ತುಂಬಲಿದೆ. ಮಿಲಿಟರಿ ದಿಗ್ಬಂಧನದ ಮೂಲಕ ಕಾಶ್ಮೀರವನ್ನು ನಮ್ಮದಾಗಿಸಿಕೊಳ್ಳಲು ಹೊರಟ ನಿರ್ಧಾರ ಎಷ್ಟರಮಟ್ಟಿಗೆ ಸಫಲವಾಗಿದೆ, 370ನೇ ವಿಧಿ ರದ್ದು ಪಡಿಸಿದ ಬಳಿಕ ಮಿಲಿಟರಿ ದಿಗ್ಬಂಧನದ ನೆರಳಲ್ಲಿ ಕಾಶ್ಮೀರದ ಜನರ ಬದುಕು ಎಷ್ಟರಮಟ್ಟಿಗೆ ಹಸನಾಗಿದೆ ಎನ್ನುವುದನ್ನು ವಿಮರ್ಶೆ ಮಾಡಲು ಇದು ಸೂಕ್ತ ಸಮಯವಾಗಿದೆ. 2019ರ ಆಗಸ್ಟ್ 5ರಂದು ಕಾಶೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಲಾಯಿತು ಹಾಗೂ ರಾಜ್ಯವನ್ನು ಜಮು-್ಮಕಾಶ್ಮೀರ ಹಾಗೂ ಲಡಾಖ್ ಎಂದು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು. ಕಾಶ್ಮೀರವು ಭಾರತ ಒಕ್ಕೂಟದಲ್ಲಿ ಸಂಪೂರ್ಣವಾಗಿ ಏಕೀಕರಣಗೊಂಡಿತು ಎಂಬ ಜನಪ್ರಿಯ ಪರಿಕಲ್ಪನೆಯು ಈ ಮೂಲಕ ದೇಶಾದ್ಯಂತ ಮೂಡಿತು. 370ನೇ ವಿಧಿ ರದ್ದತಿಯಿಂದಾಗಿ ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಇದ್ದ ದೊಡ್ಡ ಅಡೆತಡೆಯೊಂದು ನಿವಾರಣೆಯಾಯಿತೆಂದು ಕೇಂದ್ರ ಸರಕಾರ ಹೇಳಿಕೊಂಡಿತು. ಜೊತೆಗೆ, ಕಾಶ್ಮೀರ ಕೊನೆಗೂ ಭಾವನಾತ್ಮಕವಾಗಿ ಭಾರತದೊಂದಿಗೆ ಅಧಿಕೃತವಾಗಿ ವಿಲೀನವಾಯಿತು ಎಂಬ ಸಂಭ್ರಮವನ್ನೂ ನಮ್ಮದಾಗಿಸಿಕೊಂಡೆವು.

ಇದೀಗ ಒಂದು ವರ್ಷದ ಬಳಿಕವೂ ಕಾಶ್ಮೀರವನ್ನು ಅನಧಿಕೃತವಾಗಿ ಸೇನೆಯೇ ಆಳುತ್ತಿದೆ. ಸುಮಾರು ಒಂದು ವರ್ಷದ ದಿಗ್ಬಂಧನದಲ್ಲಿ, ಕಾಶ್ಮೀರದ ಜನರು ತಮ್ಮದಾದ ಬದುಕಿನ ಎಲ್ಲ ಹಕ್ಕುಗಳನ್ನು ಕಳೆದುಕೊಂಡು ಹತಾಶವಾಗಿದ್ದಾರೆ. ಇದರ ಬೆನ್ನಿಗೇ ಅಪ್ಪಳಿಸಿದ ಕೊರೋನ ಅವರ ಬದುಕನ್ನು ಇನ್ನಷ್ಟು ಜರ್ಜರಿತಗೊಳಿಸಿದೆ. ಈ ಒಂದು ವರ್ಷದಲ್ಲಿ, ಬಂಧನಕ್ಕೊಳಗಾಗಿರುವ ಮುಖ್ಯ ವಾಹಿನಿಯ ರಾಜಕೀಯ ಪಕ್ಷಗಳ ನಾಯಕರನ್ನು ಇನ್ನೂ ಬಿಡುಗಡೆಗೊಳಿಸಿಲ್ಲ. ಅಷ್ಟೇ ಅಲ್ಲ, ದಿಲ್ಲಿಯಲ್ಲಿರುವ ವಿರೋಧ ಪಕ್ಷದ ನಾಯಕರಿಗೇ ಕಾಶ್ಮೀರಕ್ಕೆ ಪ್ರವೇಶಿಸುವ ಅವಕಾಶ ನಿರಾಕರಿಸಲಾಗಿದೆ. 370ನೇ ವಿಧಿ ರದ್ದುಗೊಳ್ಳುವ ಮೊದಲು ಭಾರತದೊಂದಿಗೆ ಇದ್ದ ಕಾಶ್ಮೀರದ ಅಂತರ ಆ ಬಳಿಕ ಇನ್ನಷ್ಟು ಹೆಚ್ಚಿರುವುದನ್ನು ಇವುಗಳು ಹೇಳುತ್ತಿವೆ. ಈ ಒಂದು ವರ್ಷದಲ್ಲಿ ನಮ್ಮ ಸರಕಾರ ಕಾಶ್ಮೀರದ ಜನರಲ್ಲಿ ವಿಶ್ವಾಸವನ್ನು ಬಿತ್ತುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂದು ನೋಡಿದರೆ ಅದರಲ್ಲೂ ನಿರಾಶೆಯಾಗುತ್ತದೆ.

2020ರ ಹೊತ್ತಿಗೆ ಕಾಶ್ಮೀರದಲ್ಲಿ ರೈತರು,ಅಂಗಡಿ ಮಾಲಕರು, ವರ್ತಕರು, ಕೃಷಿ ಕಾರ್ಮಿಕರಿಗೆ ತಾವು ಅಪಮಾನಿತರಾದ, ವಂಚಿಸಲ್ಪಟ್ಟ ಹಾಗೂ ಅಸಹಾಯಕರಾದ ಭಾವನೆಗೊಳಗಾಗಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ವಿರೋಧಿ ಹೋರಾಟದ ಬೆಂಬಲಿಗರ ಸಂಖ್ಯೆಯು ಹೆಚ್ಚುತ್ತಿದೆ. ಕಾಶ್ಮೀರದ ಹಳೆಯ ತಲೆಮಾರಿನವರಿಗೆ 370ನೇ ವಿಧಿಯು ಸಂವಿಧಾನದ ಕೇವಲ ಒಂದು ಕಲಮಷ್ಟೇ ಆಗಿರಲಿಲ್ಲ, ಅದು ಅವರಿಗೆ ಆಡಳಿತ ವ್ಯವಸ್ಥೆಯ ಕುರಿತ ವಿಶ್ವಾಸದ ವಿಷಯವೂ ಆಗಿತ್ತು.ಸಂವಿಧಾನದ 370ನೇ ವಿಧಿಯ ರದ್ದತಿಯಿಂದ ಕಾಶ್ಮೀರದಲ್ಲಿನ ಪ್ರತ್ಯೇಕತವಾದಿ ರಾಜಕೀಯ ಸಿದ್ಧಾಂತಗಳಿಗೇನೂ ಧಕ್ಕೆಯಾಗಲಿಲ್ಲ. ಬದಲಾಗಿ ಅದು ಜನಸಾಮಾನ್ಯರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರತ್ಯೇಕತಾವಾದಿಗಳಿಗೆ ಪ್ರಬಲ ಅಸ್ತ್ರವನ್ನು ಒದಗಿಸಿಕೊಟ್ಟಿತು. ಆಳದಲ್ಲಿ ಒಂದು ಗಾಯವಾಗಿ ವಿಧಿ ರದ್ದತಿ ಬೆಳೆಯುತ್ತಿದೆ. ಎಲ್ಲಕ್ಕಿಂತ ಅಪಾಯಕಾರಿ ಬೆಳವಣಿಗೆಯೆಂದರೆ, ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಮಂಕಾಗಿದ್ದು, ಆ ಸ್ಥಾನವನ್ನು ತುಂಬಲು ತೀವ್ರವಾದಿ, ಉಗ್ರವಾದಿ ಸಂಘಟನೆಗಳು ಪ್ರಯತ್ನಿಸುತ್ತಿರುವುದು.

 ತಿದ್ದುಪಡಿಯಿಂದಾಗಿ ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸುತ್ತಿದ್ದ ಹಸ್ತಕ್ಷೇಪಕ್ಕೆ ತಡೆ ಬಿದ್ದಿದೆ ಎಂಬ ಸರಕಾರದ ನಂಬಿಕೆಯೂ ಹುಸಿಯಾಗಿದೆ. ಉಗ್ರರು ಮತ್ತು ಸೇನೆಯ ನಡುವಿನ ತಿಕ್ಕಾಟ ಇನ್ನಷ್ಟು ತೀವ್ರವಾಗಿದೆ. ಕಳೆದ ವರ್ಷ ಕಾಶ್ಮೀರದಲ್ಲಿದ್ದ ಸೇನೆಗೆ ಹೋಲಿಸಿದರೆ, ಈಗ ಸೈನಿಕರ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ. ಪಾಕಿಸ್ತಾನದ ತರಲೆಯ ನಡುವೆಯೇ, ಇದೀಗ ನೆರೆಯ ಚೀನಾ ಮತ್ತು ನೇಪಾಳದೊಂದಿಗಿನ ಸಂಬಂಧ ಬಿಗಡಾಯಿಸಿರುವುದು ಗಮನಾರ್ಹ. ಪರೋಕ್ಷವಾಗಿ ಇದು ಪಾಕಿಸ್ತಾನದ ಕುಟಿಲತೆಗಳಿಗೆ ಇನ್ನಷ್ಟು ಬಲ ತುಂಬಿದೆ. ನೇಪಾಳದಂತಹ ಪುಟ್ಟ ದೇಶ, ಗಡಿಭಾಗದಲ್ಲಿ ತಂಟೆ ಮಾಡುತ್ತಿದೆ ಮಾತ್ರವಲ್ಲ, ಲಡಾಖ್‌ನ ಮೇಲೆ ಹಕ್ಕು ಸಾಧಿಸಲು ಚೀನಾ ಪದೇ ಪದೇ ಗಡಿ ಉಲ್ಲಂಘನೆ ನಡೆಸಿದೆ.

ಭಾರತದ ಸೈನಿಕರು ಈಗಾಗಲೇ ಲಡಾಖ್‌ನಲ್ಲಿ ಚೀನಾದ ಅಕ್ರಮಗಳಿಗೆ ಬಲಿಯಾಗಿದ್ದಾರೆ. ಕಾಶ್ಮೀರದ ವಿಷಯದಲ್ಲಿ ಇದು ಭಾರತದ ಪಾಲಿನ ಬಹು ದೊಡ್ಡ ಸೋಲು. ಕಾಶ್ಮೀರದ ಕುರಿತಂತೆ ಭಾರತ ತೆಗೆದುಕೊಂಡ ನಿರ್ಧಾರ, ನೇಪಾಳ, ಚೀನಾ ಗಡಿ ಭಾಗದಲ್ಲೂ ಆತಂಕಗಳನ್ನು ಹೆಚ್ಚಿಸಿವೆ. ಯುದ್ಧದ ಕಾರ್ಮೋಡ ಕವಿದಿದೆ. ಕಾಶ್ಮೀರದೊಳಗೆ ಪ್ರತ್ಯೇಕವಾದವನ್ನು ಬೆಳೆಸುವುದಕ್ಕೆ ಚೀನಾ ಇನ್ನಷ್ಟು ಕುಮ್ಮಕ್ಕು ನೀಡುವ ಸಾಧ್ಯತೆಗಳಿವೆ. ಬಹುಶಃ ಇನ್ನೂ ಹಲವು ವರ್ಷಗಳವರೆಗೆ ಕಾಶ್ಮೀರ ಸೇನೆಯ ದಿಗ್ಬಂಧನದಿಂದ ಹೊರ ಬರುವ ಲಕ್ಷಣಗಳು ಕಾಣುತ್ತಿಲ್ಲ. ಇದರ ಅರ್ಥ, ಕಾಶ್ಮೀರವನ್ನು ಕಾಯ್ದೆಗಳ ತಿದ್ದುಪಡಿಯ ಮೂಲಕವಷ್ಟೇ ನಮ್ಮದನ್ನಾಗಿಸಲು ಸಾಧ್ಯವಾಗಿದೆ. ಆದರೆ ಎಲ್ಲಿಯವರೆಗೆ ಅಲ್ಲಿಯ ಜನರನ್ನು ನಮ್ಮವರನ್ನಾಗಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಕಾಶ್ಮೀರ ನಮ್ಮದಾಗಲು ಸಾಧ್ಯವಿಲ್ಲ ಎನ್ನುವ ಸಂದೇಶಕ್ಕೆ ಇನ್ನಷ್ಟು ಧ್ವನಿ ಬಂದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News