ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 102ಕ್ಕೆ ಏರಿಕೆ

Update: 2020-07-27 03:45 GMT
ಸಾಂದರ್ಭಿಕ ಚಿತ್ರ

ಗುವಾಹತಿ: ಭೀಕರ ಪ್ರವಾಹದಿಂದ ಕಂಗೆಟ್ಟಿರುವ ಗುವಾಹತಿಯಲ್ಲಿ ನೆರೆ ಹಾವಳಿಯಿಂದ ರವಿವಾರ ಮತ್ತೆ ಐದು ಮಂದಿ ಮೃತಪಟ್ಟಿದ್ದು, ಪ್ರವಾಹಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 102ಕ್ಕೇರಿದೆ.

ಮೊರಿಗಾಂವ್‍ನಲ್ಲಿ ಒಬ್ಬರು, ಬರ್‍ಪೇಟಾದಲ್ಲಿ ಇಬ್ಬರು ಹಾಗೂ ಕೊಕ್ರಜಾರ್ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಜಿಲ್ಲೆಗಳಲ್ಲಿ ಈ ಮುನ್ನ ಭಾರಿ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಿಂದಾಗಿ 26 ಮಂದಿ ಮೃತಪಟ್ಟಿದ್ದರು.

ರಾಜ್ಯದ ಪ್ರಮುಖ ನದಿಗಳಾದ ಬ್ರಹ್ಮಪುತ್ರಾ, ಧಾನ್ಸಿರಿ, ಭರಾಲಿ, ಬೇಕಿ, ಕೊಪ್ಪಿಲ್ಲಿ ಮತ್ತು ಕೌಶಿಯಾರಾ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಅಸ್ಸಾಂ ರಾಜ್ಯ ವಿಕೋಪ ನಿರ್ವಹಣೆ ಪ್ರಾಧಿಕಾರದ ಪ್ರಕಾರ, ರಾಜ್ಯದ 33 ಜಿಲ್ಲೆಗಳ ಪೈಕಿ 23 ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, 2,265 ಗ್ರಾಮಗಳ 24.76 ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆ. ಈ ಪೈಕಿ 18 ಜಿಲ್ಲೆಗಳ 457 ಪರಿಹಾರ ಶಿಬಿರಗಳಲ್ಲಿ 46 ಸಾವಿರಕ್ಕೂ ಅಧಿಕ ಮಂದಿಗೆ ಆಸರೆ ನೀಡಲಾಗಿದೆ.

ಹಲವೆಡೆ ಸೇತುವೆಗಳು ಮತ್ತು ಎಂಬಾಕ್‍ಮೆಂಟ್‍ಗಳು ಒಡೆದಿದ್ದು, ರಸ್ತೆ ಮತ್ತು ಮನೆಗಳಿಗೆ ಹಾನಿಯಾಗಿದೆ. ಸುಮಾರು 1.12 ಲಕ್ಷ ಹೆಕ್ಟೇರ್ ನಲ್ಲಿ ಬೆಳೆದ ಬೆಳೆ ನೀರುಪಾಲಾಗಿದೆ. ರಾಜ್ಯ ವಿಪತ್ತು ಸ್ಪಂದನೆ ಪಡೆಯ ಯೋಧರು, ಪೊಲೀಸರು ಹಾಗೂ ಸ್ಥಳೀಯರು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಶ್ವವಿಖ್ಯಾತ ಖಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 14 ಖಡ್ಗ ಮೃಗಗಳು ಸೇರಿದಂತೆ 129 ಪ್ರಾಣಿಗಳು ನೀರು ಪಾಲಾಗಿವೆ. ಈ ಪೈಕಿ ಕೆಲವು ಪ್ರವಾಹ ನೀರಿನಲ್ಲಿ ಮುಳುಗಿ ಸತ್ತಿದ್ದರೆ, ಮತ್ತೆ ಕೆಲವು ಉದ್ಯಾನವನದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಢಿಕ್ಕಿಯಾಗಿ ಜೀವ ಕಳೆದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News