ಮಹಾರಾಷ್ಟ್ರ ಸರ್ಕಾರದ ಬಕ್ರೀದ್ ಮಾರ್ಗಸೂಚಿಗೆ ವ್ಯಾಪಕ ಆಕ್ರೋಶ

Update: 2020-07-27 04:16 GMT
ಉದ್ಧವ್ ಠಾಕ್ರೆ

ಮುಂಬೈ: ಬಕ್ರೀದ್ ಆಚರಣೆ ಸಂಬಂಧ ಮಹಾರಾಷ್ಟ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ. ಮುಸ್ಲಿಮರ ಪವಿತ್ರ ಹಬ್ಬಕ್ಕೆ ಒಂದು ವಾರಕ್ಕಿಂತ ಕಡಿಮೆ ಅವಧಿ ಉಳಿದಿದ್ದು, ಈ ನಿಯಮಾವಳಿಗಳನ್ನು ಪುನರ್ ಪರಿಶೀಲಿಸುವಂತೆ ಆಡಳಿತಾರೂಢ ಮೈತ್ರಿಕೂಟದ ಅಂಗಪಕ್ಷವಾದ ಕಾಂಗ್ರೆಸ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಪತ್ರ ಬರೆದು ಒತ್ತಾಯಿಸಿದೆ.

ಈ ಮಾರ್ಗಸೂಚಿಗಳ ಪರಾಮರ್ಶೆಗಾಗಿ ಸಚಿವರ ತುರ್ತು ಸಭೆ ಕರೆಯುವಂತೆ ಕಾಂಗ್ರೆಸ್ ಮುಖಂಡ ನಸೀಮ್ ಖಾನ್ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಕಳೆದ ಶುಕ್ರವಾರ ಬಿಡುಗಡೆ ಮಾಡಿರುವ ನಿಗದಿತ ಕಾರ್ಯಾಚರಣೆ ವಿಧಿವಿಧಾನದ (ಎಸ್‍ಓಪಿ) ಪ್ರಕಾರ, ಬಲಿ ನೀಡುವ ಮೇಕೆಗಳ ಆನ್‍ಲೈನ್ ಖರೀದಿ ಮತ್ತು ಮಾರಾಟವನ್ನು ಉತ್ತೇಜಿಸಲಾಗಿದೆ ಹಾಗೂ ಬಕ್ರೀದ್ ಹಬ್ಬವನ್ನು ಸಾಂಕೇತಕವಾಗಿ ಆಚರಿಸುವಂತೆ ಸೂಚಿಸಲಾಗಿದೆ. ಆದರೆ ಶುಕ್ರವಾರ ವಿಶ್ವಾದ್ಯಂತ ಆಚರಿಸುವ ಈ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಲು ಸಾಧ್ಯವಿಲ್ಲ. ಹಾಗೂ ಆನ್‍ಲೈನ್‍ನಲ್ಲಿ ಮೇಕೆಗಳ ಖರೀದಿ ಅಸಾಧ್ಯ ಎಂದು ಖಾನ್ ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಸರ್ಕಾರ ಪುನರ್ ಪರಿಶೀಲನೆ ನಡೆಸಿ ತುರ್ತು ಸಭೆ ನಡೆಸಬೇಕು. ಇದು ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ವಿವರಿಸಿದ್ದಾರೆ.

ಸಾಮಾನ್ಯವಾಗಿ ಮುಂಬೈನ ಅತಿದೊಡ್ಡ ದೇವನಾರ್ ಮಾರುಕಟ್ಟೆಯಲ್ಲಿ ಮೇಕೆಗಳ ಮಾರಾಟ ಹಾಗೂ ಖರೀದಿ ನಡೆಯುತ್ತದೆ. ಆದರೆ ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಇದನ್ನು ಮುಚ್ಚಲಾಗಿದೆ. ಸರ್ಕಾರ ಈ ಬಾರಿ ಆನ್‍ಲೈನ್ ವಹಿವಾಟಿಗೆ ಸೂಚಿಸಿದ್ದರೂ, ಯಾವ ಪೋರ್ಟೆಲ್ ಇದಕ್ಕೆ ಬಳಸಬೇಕು ಎಂದು ಸೂಚಿಸಿಲ್ಲ. ಹಲವು ಮಂದಿಗೆ ಇಂಥ ವಹಿವಾಟಿಗೆ ತಂತ್ರಜ್ಞಾನದ ಬಳಕೆಯೂ ಗೊತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News