ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ರಾಜಸ್ಥಾನದ ಸ್ಪೀಕರ್

Update: 2020-07-27 06:39 GMT
ರಾಜಸ್ಥಾನ ವಿಧಾನಸಭೆಯ ಸ್ಪೀಕರ್ ಸಿ.ಪಿ.ಜೋಶಿ

ಹೊಸದಿಲ್ಲಿ, ಜು.27: ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಹಾಗೂ ಇತರ 18 ಬಂಡಾಯ ಶಾಸಕರ ವಿರುದ್ಧ ಅನರ್ಹತೆ ಪ್ರಕ್ರಿಯೆ ಮುಂದೂಡುವಂತೆ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ರಾಜಸ್ಥಾನ ವಿಧಾನಸಭೆಯ ಸ್ಪೀಕರ್ ಸಿ.ಪಿ.ಜೋಶಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಾಪಸ್ ಪಡೆದಿದ್ದಾರೆ.ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆ ಮುಂದುವರಿಸುವ ಕೆಲವೇ ನಿಮಿಷದ ಮೊದಲು ಸ್ಪೀಕರ್ ಈ ನಿರ್ಧಾರ ತಳೆದಿದ್ದಾರೆ.

ಸ್ಪೀಕರ್ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಬೇಕೆಂದು ಸ್ಪೀಕರ್ ಪರ ವಕೀಲ ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ಮನವಿ ಮಾಡಿದರು. ಜಸ್ಟಿಸ್ ಬಿಆರ್ ಗವಾಯಿ ಹಾಗೂ ಜಸ್ಟಿಸ್ ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠ ಸಿಬಲ್ ಅವರ ಮನವಿಯನ್ನು ಪುರಸ್ಕರಿಸಿತು.

  "ಸುಪ್ರೀಂಕೋರ್ಟ್‌ನ ಆದೇಶಗಳನ್ನು ಹೈಕೋರ್ಟ್ ಪಾಲಿಸದಿರುವುದು ದುರದೃಷ್ಟಕರ. ಇದು ನಮಗೆ ನೋವುಂಟು ಮಾಡಿದೆ. ಅರ್ಜಿಯನ್ನು ಹಿಂತೆಗೆದುಕೊಳ್ಳುವಿಕೆ ಎಂದರೆ ಸಮಸ್ಯೆಯನ್ನು ಎತ್ತಲು ನಮಗೆ ಅವಕಾಶ ನೀಡಬಾರದು ಎಂದಲ್ಲ'' ಎಂದು ಸುಪ್ರೀಂಕೋರ್ಟ್‌ನಲ್ಲಿ ಸ್ಪೀಕರ್ ಪ್ರತಿನಿಧಿಸಿರುವ ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದರು.

ರಾಜಸ್ಥಾನ ರಾಜ್ಯಪಾಲರಾದ ಮಿಶ್ರಾ ಅವರು ಅಧಿವೇಶನ ನಡೆಸಬೇಕೆಂದು ಕೋರಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಲ್ಲಿಸಿರುವ ಮನವಿಯನ್ನು ಎರಡನೇ ಬಾರಿ ತಿರಸ್ಕರಿಸಿದ ಬೆನ್ನಿಗೇ ಸುಪ್ರೀಂಕೋರ್ಟ್‌ನಲ್ಲಿ ಕಾಂಗ್ರೆಸ್ ತನ್ನ ಪ್ರಕರಣವನ್ನು ಕೈಬಿಟ್ಟಿದೆ.

ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಜೋಶಿ ಅವರು, ಹೈಕೋರ್ಟ್‌ನ ಆದೇಶ ಕಾನೂನು ಬಾಹಿರ ಹಾಗೂ ಸಂವಿಧಾನದ ಅಡಿಯಲ್ಲಿ ಸ್ಪೀಕರ್ ಅಧಿಕಾರವನ್ನು ಅವಹೇಳನ ಮಾಡಲಾಗಿದೆ ಎಂದು ದೂರಿದ್ದರು.

ಸ್ಪೀಕರ್ ಅನರ್ಹತೆಯ ನೋಟಿಸ್‌ಗಳನ್ನು ಪ್ರಶ್ನಿಸಿ ಬಂಡಾಯ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಕಳೆದ ವಾರ ಜುಲೈ 24ರ ತನಕ ಮುಂದೂಡಿತ್ತು. ನೋಟಿಸ್‌ಗೆ ಉತ್ತರ ನೀಡಲು ಶಾಸಕರಿಗೆ ನೀಡಲಾಗಿರುವ ಕಾಲಾವಕಾಶವನ್ನು ವಿಸ್ತರಿಸಬೇಕೆಂದು ಸ್ಪೀಕರ್‌ಗೆ ತಿಳಿಸಿತ್ತು. ಜುಲೈ 24ರ ತನಕ ಯಾವುದೇ ಕ್ರಮ ಕೈಗೊಳ್ಳದಿರಲು ಸ್ಪೀಕರ್ ಸಮ್ಮತಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News