ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರ, ರಾಜ್ಯ ಬಿಜೆಪಿ ಸುಭದ್ರ: ಸಚಿವ ಬಿ.ಸಿ.ಪಾಟೀಲ್

Update: 2020-07-27 12:19 GMT

ಕೊಪ್ಪಳ, ಜು. 27: ಬಿ.ಎಸ್.ಯಡಿಯೂರಪ್ಪನವರೇ ಮುಂದಿನ ದಿನಗಳಲ್ಲಿಯೂ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ಅವರ ನಾಯಕತ್ವದಲ್ಲಿ ಸರಕಾರ ಹಾಗೂ ರಾಜ್ಯ ಬಿಜೆಪಿ ಸುಭದ್ರವಾಗಿದೆ ಎಂದು ಕೃಷಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಸುಭದ್ರವಾಗಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಪೂರ್ಣ ಅವಧಿಯನ್ನು ಮುಗಿಸಲಿದೆ. ಬಿಜೆಪಿ ಸರಕಾರ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಒಂದು ವರ್ಷದಲ್ಲಿ ಬಂದಂತಹ ಸಂಕಷ್ಟಗಳು ಇತಿಹಾಸದಲ್ಲಿ ಎಂದಿಗೂ ಬಂದಿರುವುದಿಲ್ಲ. ಅತಿವೃಷ್ಟಿ, ಬರ ಪರಿಸ್ಥಿತಿಯನ್ನು ಆರಂಭದಲ್ಲಿ ಯಡಿಯೂರಪ್ಪ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರು.

ರಾಜ್ಯದಲ್ಲಿ 24 ದಿನಗಳ ಕಾಲ ಅತಿವೃಷ್ಟಿಯನ್ನು ಏಕೈಕ ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸಿದ್ದಾರೆ. ಅತಿವೃಷ್ಟಿಗೆ-1,869 ಕೋಟಿ ರೂ.ಕೇಂದ್ರದಿಂದ ಹಾಗೂ 6,108 ಕೋಟಿ ರೂ.ರಾಜ್ಯ ಸರಕಾರದಿಂದ ಸೇರಿದಂತೆ ಒಟ್ಟು 7,977 ಕೋಟಿ ರೂ.ಹಣವನ್ನು ನೆರೆ ಹಾವಳಿಗೆ ಸರಕಾರ ವಿನಿಯೋಗಿಸುವ ಮೂಲಕ ಜನರಿಗೆ ನೆರವಾಗಿದೆ. 5ಲಕ್ಷ ರೂ. ತತಕ್ಷಣ ಮೊದಲನೆ ಕಂತನ್ನು ಮನೆ ಕಳೆದುಕೊಂಡವರಿಗೆ ನೀಡಿದರು. ಕಿಸಾನ್ ಸಮ್ಮಾನ್ ಯೋಜನೆ 50 ಲಕ್ಷಕ್ಕೂ ಹೆಚ್ಚು ರೈತರು ಕೇಂದ್ರದಿಂದ 6 ಸಾವಿರ ರೂ., ಕರ್ನಾಟಕದಿಂದ 4 ಸಾವಿರ ರೂ.ನಂತೆ ಒಟ್ಟು 10 ಸಾವಿರ ರೂ.ನೀಡಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸುವ ಮೂಲಕ ಯಡಿಯೂರಪ್ಪ ಸರಕಾರಕ್ಕೆ ಜನರು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಸವಾಲುಗಳ ಮಧ್ಯೆ ಸರಕಾರ ಸಮರ್ಥವಾಗಿ ಕೆಲಸ ಮಾಡಿದೆ ಎಂದು ಬಣ್ಣಿಸಿದರು.

ಮಾರಕ ಕೋವಿಡ್-19 ಸೋಂಕಿನಿಂದ ಕರ್ನಾಟಕವನ್ನು ಯಡಿಯೂರಪ್ಪನವರು ಸುರಕ್ಷಿತವಾಗಿರಿಸಿದ್ದಾರೆ. ಕೊರೋನ ಸಂದರ್ಭದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯ ಮೊತ್ತವನ್ನು 80 ಕೋಟಿ ರೂ.ನಿಂದ 2,200 ಕೋಟಿ ರೂ.ಗಳಿಗೆ ಹೆಚ್ಚಿಸಿ `ಅಧ್ಯಾದೇಶ' ಹೊರಡಿಸುವ ಮೂಲಕ ಯಡಿಯೂರಪ್ಪ ಸರಕಾರ ಸಂಕಷ್ಟದಲ್ಲಿರುವ ಎಲ್ಲ ವರ್ಗದ ಜನರಿಗೆ ನೆರವಾಗಿದೆ. ನೆರೆ, ಬರ, ಕೋವಿಡ್‍ನಂತಹ ಮುಳ್ಳಿನ ಹಾಸಿಗೆಯ ಒಂದು ವರ್ಷದ ಹಾದಿಯನ್ನು ಯಡಿಯೂರಪ್ಪ ಬಹಳ ಸೂಕ್ಷ್ಮವಾಗಿ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಪಾಟೀಲ್ ಮೆಚ್ಚುಗೆ ವ್ಯಕ್ತಪಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News