ಪ್ರತಿ ರಾತ್ರಿ ಬಡ ಬಾಲಕನಿಗೆ ರಸ್ತೆ ಬದಿಯಲ್ಲಿ ಟ್ಯೂಷನ್ ನೀಡುವ ಪೊಲೀಸ್ ಅಧಿಕಾರಿ

Update: 2020-07-27 07:42 GMT

ಇಂದೋರ್ : ನಗರದ ಪಲಸಿಯಾ ಪೊಲೀಸ್ ಠಾಣೆಯ ಠಾಣಾಧಿಕಾರಿ ವಿನೋದ್ ದೀಕ್ಷಿತ್, ಪ್ರತಿ ದಿನ ತಮ್ಮ ಕರ್ತವ್ಯ ಮುಗಿದ ಬಳಿಕ 12 ವರ್ಷದ ಬಡ ಕುಟುಂಬದ ಬಾಲಕನೊಬ್ಬನಿಗೆ ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಟ್ಯೂಷನ್ ನೀಡುತ್ತಾರೆ. ಕಾರಣ, ಈ ಬಡ ಬಾಲಕ ರಾಜ್  ಮುಂದೊಂದು ದಿನ ಪೊಲೀಸ್ ಅಧಿಕಾರಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾನೆ.

ಆದರೆ  ಕಲಿಕೆಯಲ್ಲಿ ಇನ್ನೂ ಉತ್ತಮ ಅಂಕಗಳನ್ನು ಗಳಿಸಲು ಟ್ಯೂಷನ್ನಿಗೆ ಹೋಗಲು ಕಾರ್ಮಿಕರಾಗಿರುವ ಆತನ ತಂದೆ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ.

“ಲಾಕ್ ಡೌನ್ ಸಂದರ್ಭ ಒಂದು ದಿನ ಗಸ್ತು ವೇಳೆ ಈ ಬಾಲಕನನ್ನು  ಭೇಟಿಯಾದೆ. ನನಗೆ ಪೊಲೀಸ್ ಆಗಬೇಕೆಂದು ಹೇಳಿದ. ಆತನ ಗುರಿ ಈಡೇರಿಸಲು ಸಹಾಯ ಮಾಡಲು ಆತನಿಗೆ  ಕಲಿಕೆಯಲ್ಲಿ ಸಹಾಯ ಮಾಡಲು ಆರಂಭಿಸಿದೆ'' ಎಂದು ದೀಕ್ಷಿತ್ ವಿವರಿಸುತ್ತಾರೆ.

“ಲಾಕ್‍ಡೌನ್ ವೇಳೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವ ರೀತಿಯನ್ನು ನೋಡಿ ಸ್ಫೂರ್ತಿ ಪಡೆದೆ. ನಾನು ಕೂಡ ಪೊಲೀಸ್ ಆಗಬೇಕೆಂದು  ಅಂಕಲ್ ಬಳಿ ಸಹಾಯ ಯಾಚಿಸಿದೆ'' ಎಂದು ರಾಜ್ ಹೇಳುತ್ತಾನೆ.

ಆದರೆ ರಾಜ್‍ ಗೆ ಕಲಿಸುವುದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ.  ಯಾವುದಾದರೂ ಎಟಿಎಂ ಪಕ್ಕ ಅಥವಾ ಉತ್ತಮ ಬೆಳಕು ಇರುವ ಸ್ಥಳಗಳಲ್ಲಿ ಕೆಲವೊಮ್ಮೆ ಜೀಪಿನ ಬೋನೆಟ್ ಮೇಲೆ ಪುಸ್ತಕಗಳನ್ನಿರಿಸಿ ವಿನೋದ್ ಬಾಲಕನಿಗೆ ಕಲಿಸುತ್ತಾರೆ.

 ಅಷ್ಟಕ್ಕೂ ವಿನೋದ್ ದೀಕ್ಷಿತ್ ಅವರ ಮೊದಲ ವಿದ್ಯಾರ್ಥಿ ಈತನಲ್ಲ.  ಈ ಹಿಂದೆ ಕೂಡ ಅವರು ಪೊಲೀಸ್ ಇಲಾಖೆ ಸೇರಬೇಕೆಂಬ ಉದ್ದೇಶ ಹೊಂದಿದ್ದ ಕೆಲವು ಬಾಲಕರಿಗೆ ಕಲಿಸಿದ್ದಾರೆ.  “ರಾಜ್‍ ಗೆ ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ'' ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News