ಸಿಬಿಎಸ್‍ಇ ಪರೀಕ್ಷೆಯಲ್ಲಿ ಟಾಪರ್ ಆದ ಕೇರಳದ ಕಾರ್ಮಿಕನ ಪುತ್ರನಿಗೆ ಪ್ರಧಾನಿ ಮೋದಿ ಕರೆ

Update: 2020-07-27 10:48 GMT

ಎರ್ಣಾಕುಳಂ: ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆಯಲ್ಲಿ ಕಾಮರ್ಸ್ ವಿಭಾಗದಲ್ಲಿ ಟಾಪರ್ ಆಗಿರುವ ಕೇರಳದ ವಿನಾಯಕ್ ಎಂ ಮಳ್ಳಿಲ್‍ ಗೆ ರವಿವಾರ ಪ್ರಧಾನಿ ನರೇಂದ್ರ ಮೋದಿ ಕರೆ  ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಬಡ ಕುಟುಂಬಕ್ಕೆ ಸೇರಿರುವ ವಿನಾಯಕ್ ತಂದೆ ದಿನಗೂಲಿ ಕಾರ್ಮಿಕರಾಗಿದ್ದು ನಗರದಿಂದ ಸುಮಾರು 70 ಕಿಮೀ ದೂರದ ನೆರಿಯಮಂಗಲಂ ಎಂಬಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ವಿನಾಯಕ್ ಶಿಕ್ಷಣ ಪಡೆದಿದ್ದಾನೆ.

ವಿನಾಯಕ್ ಜತೆಗೆ ಪ್ರಧಾನಿ ನಡೆಸಿದ ಸಂಭಾಷಣೆ ರವಿವಾರದ ಪ್ರಧಾನಿಯ ಬಾನುಲಿ ಕಾರ್ಯಕ್ರಮ `ಮನ್ ಕಿ ಬಾತ್' ವೇಳೆ ಪ್ರಸಾರಗೊಂಡಿದೆ.

“ಪ್ರಧಾನಿಯೇ ಕರೆ ಮಾಡಿದ್ದು ಎಂದು ತಿಳಿದ ಕ್ಷಣ ನನ್ನ ಜೀವನದ ಆನಂದದ ಕ್ಷಣ” ಎಂದು ಎರ್ಣಾಕುಳಂ ಹಾಗೂ ಇಡುಕ್ಕಿ ಜಿಲ್ಲೆಯ ಗಡಿಯಲ್ಲಿರುವ ಗ್ರಾಮದ ನಿವಾಸಿಯಾಗಿರುವ ವಿನಾಯಕ್ ಹೇಳುತ್ತಾನೆ.

ಎಷ್ಟು ರಾಜ್ಯಗಳಿಗೆ ಭೇಟಿ ನೀಡಿರುವೆ ಎಂದು ಪ್ರಧಾನಿ ಕೇಳಿದಾಗ, “ಕೇವಲ ಕೇರಳ ಮತ್ತು ತಮಿಳುನಾಡು,'' ಎಂದು ವಿನಾಯಕ್ ಹೇಳುತ್ತಾನೆ. ದಿಲ್ಲಿಗೆ ಬರುವಂತೆ ಪ್ರಧಾನಿ ಆಹ್ವಾನಿಸಿದಾಗ ಉನ್ನತ ಶಿಕ್ಷಣಕ್ಕಾಗಿ ದಿಲ್ಲಿ ವಿವಿಗೆ ಅರ್ಜಿ ಸಲ್ಲಿಸುತ್ತಿರುವುದಾಗಿ ಆತ ತಿಳಿಸುತ್ತಾನೆ. ಭವಿಷ್ಯದಲ್ಲಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ಇತರ ವಿದ್ಯಾರ್ಥಿಗಳಿಗೆ ಸಂದೇಶವೇನಾದರೂ ಇದೆಯೇ ಎಂದು ಪ್ರಧಾನಿ ಕೇಳಿದಾಗ “ಶ್ರಮವಹಿಸಿ ಕಲಿಯುವುದು ಹಾಗೂ ಸಮಯದ ಸದುಪಯೋಗಮಾಡುವುದು'' ಎಂದು ವಿನಾಯಕ್ ಹೇಳುತ್ತಾನೆ.

ತನ್ನ ಶಾಲೆಯಲ್ಲಿ ಇಲೆಕ್ಟ್ರಾನಿಕ್ ಸಾಧನಗಳನ್ನು ತರಲು ಅವಕಾಶವಿಲ್ಲ ಎಂದು ವಿನಾಯಕ್ ಹೇಳಿದಾಗ ‘ನೀವು ಅದೃಷ್ಟವಂತ’ ಎಂದು ಪ್ರಧಾನಿ ಹೇಳುತ್ತಾರೆ.

ವಿನಾಯಕ್‍ ಗೆ ಕಾಮರ್ಸ್ ವಿಭಾಗದಲ್ಲಿ 500ರಲ್ಲಿ 493 ಅಂಕಗಳು ದೊರಕಿದ್ದವಲ್ಲದೆ ಅಕೌಂಟೆನ್ಸಿ, ಬಿಸಿನೆಸ್ ಸ್ಟಡೀಸ್ ಹಾಗೂ ಇನ್ಫಾರ್ಮೇಶನ್ ಪ್ರಾಕ್ಟೀಸಸ್ ವಿಷಯಗಳಲ್ಲಿ ಆತ ಶೇ 100 ಅಂಕ ಗಳಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News