‘ಜಲಸಮಾಧಿಯಾಗುತ್ತೇನೆ’ ಎಂದು ಎಸ್ಪಿ ನಾಯಕ ಆಝಂ ಖಾನ್ ಹೇಳಿದ್ದಾರೆ ಎಂಬ ಸಂಬಿತ್ ಪಾತ್ರ ಟ್ವೀಟ್ ಸುಳ್ಳು!

Update: 2020-07-27 10:59 GMT

ಹೊಸದಿಲ್ಲಿ: “ಆಗಸ್ಟ್ 5ರಂದು ನಡೆಯಲಿರುವ ರಾಮ ಮಂದಿರ ಭೂಮಿ ಪೂಜೆಗೆ ತನ್ನನ್ನು ಆಹ್ವಾನಿಸದೇ ಇದ್ದರೆ ಜಲಸಮಾಧಿಯಾಗುವುದಾಗಿ ಸಮಾಜವಾದಿ ಪಕ್ಷದ ಸಂಸದ ಆಝಂ ಖಾನ್ ಅವರು ಹೇಳುತ್ತಿದ್ದಾರೆ” ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಶನಿವಾರ ಟ್ವೀಟ್ ಮಾಡಿ ಮತ್ತೊಮ್ಮೆ ಸಿಕ್ಕಿ ಬಿದ್ದಿದ್ದಾರೆ. ಹಿಂದಿ ಸುದ್ದಿ ತಾಣ ನ್ಯೂಸ್ ಟ್ರ್ಯಾಕ್ ವರದಿಯೊಂದನ್ನು ಆಧರಿಸಿ ಪಾತ್ರ ಈ ಟ್ವೀಟ್ ಮಾಡಿದ್ದರು.

“ಚುಲ್ಲು ಭರ್ ಪಾನಿ ಮೇ ಹೀ ಲೀಜೀಯೇಗ” ( ನಿಮ್ಮನ್ನು ಮುಳುಗಿಸಲು ನಿಮ್ಮ  ಬೊಗಸೆಯಲ್ಲಿಯೇ ನೀರು ತೆಗೆದುಕೊಳ್ಳಿ) ಎಂದೂ ಪಾತ್ರ ಬರೆದಿದ್ದಾರೆ. ‘ನಿಮ್ಮ ಬಗ್ಗೆ ನೀವೇ ನಾಚಿಕೆ ಪಟ್ಟುಕೊಳ್ಳಬೇಕು’ ಎಂಬುದು ಪಾತ್ರ ಟ್ವೀಟ್ ಮಾಡಿದ ಹಿಂದು ನಾಣ್ಣುಡಿಯ ಅರ್ಥ.

ಅವರ ಟ್ವೀಟ್ ಅನ್ನು 5,000ಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರಲ್ಲದೆ 20,000ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ವಾಸ್ತವವೇನು?

ವಾಸ್ತವವಾಗಿ ಜಲಸಮಾಧಿ ಎಚ್ಚರಿಕೆಯನ್ನು ಸಮಾಜವಾದಿ ಪಕ್ಷದ ಸಂಸದ ಆಝಂ ಖಾನ್ ನೀಡಿಲ್ಲ. ಇಂತಹ ಒಂದು ಎಚ್ಚರಿಕೆಯನ್ನು ನೀಡಿದವರು ಶ್ರೀ ರಾಮ್ ಮಂದಿರ್ ನಿರ್ಮಾಣ್ ಮುಸ್ಲಿಂ ಕರ್ ಸೇವಕ್ ಮಂಚ್ ಅಧ್ಯಕ್ಷ ಆಝಂ ಖಾನ್ ಅವರು ಎಂದು theprint.in ವರದಿ ಮಾಡಿದೆ.

ಹಿಂದಿ ಸುದ್ದಿ ತಾಣ `ಹೆಡ್‍ಲೈನ್ಸ್ ಇಂಡಿಯಾ' ಜುಲೈ 25ರಂದು ಪ್ರಕಟಿಸಿದ ವೀಡಿಯೋವೊಂದರಲ್ಲಿ ಮುಸ್ಲಿಂ ಕರ್ ಸೇವಕ್ ಮಂಚ್ ಅಧ್ಯಕ್ಷ ಮಾತನಾಡುತ್ತಾ, “ನನ್ನನ್ನು ಭೂಮಿ ಪೂಜೆಗೆ  ಆಹ್ವಾನಿಸದೇ ಇದ್ದರೆ, ಸರಯೂ ನದಿಯಲ್ಲಿ ಮುಳುಗಿ ಪ್ರಾಣತ್ಯಾಗ ಮಾಡುತ್ತೇನೆ'' ಎಂದು ಹೇಳಿದ್ದರು.

ತಮ್ಮ ಪುತ್ರ ಅಬ್ದುಲ್ಲಾ ಆಝಂ ಜನನ ಪ್ರಮಾಣಪತ್ರವನ್ನು ಫೋರ್ಜರಿಗೊಳಿಸಿದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಸಂಸದ ಆಝಂ ಖಾನ್ ಫೆಬ್ರವರಿ 26ರಿಂದ ರಾಮಪುರ್ ಕಾರಾಗೃಹದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News