ಮಳೆಹಾನಿ: 2,333 ಸಂತ್ರಸ್ತ ಕುಟುಂಬಗಳಿಗೆ ವಸತಿ ಭಾಗ್ಯ; ಸಚಿವ ವಿ.ಸೋಮಣ್ಣ ಭರವಸೆ

Update: 2020-07-27 11:10 GMT

ಮಡಿಕೇರಿ, ಜು.27: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ಒಂದು ವರ್ಷವನ್ನು ಪೂರೈಸಿದ್ದು, ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆ ಹೊರತರಲಾಗಿರುವ ‘ಆಡಳಿತ 1 ವರ್ಷ ಸವಾಲುಗಳ ವರ್ಷ-ಪರಿಹಾರದ ಸ್ಪರ್ಶ’ ಕಿರುಹೊತ್ತಿಗೆಯನ್ನು ಸೋಮವಾರ ಕೊಡಗು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಳೆದ ವರ್ಷಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಮಡಿಕೇರಿ ತಾ.ಪಂ 531, ಸೋಮವಾರಪೇಟೆ ವ್ಯಾಪ್ತಿಯಲ್ಲಿ 592, ವೀರಾಜಪೇಟೆ ವ್ಯಾಪ್ತಿಯಲ್ಲಿ 1,004, ಕುಶಾಲನಗರ ಪ.ಪಂ ವ್ಯಾಪ್ತಿಯಲ್ಲಿ 57, ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 10, ಸೋಮವಾರಪೇಟೆ ಪ.ಪಂ ವ್ಯಾಪ್ತಿಯಲ್ಲಿ 22, ವೀರಾಜಪೇಟೆ ಪ.ಪಂ ವ್ಯಾಪ್ತಿಯಲ್ಲಿ 117 ಮನೆಗಳಿಗೆ ಹಾನಿಯಾಗಿದ್ದು, ಮನೆ ಕಳೆದುಕೊಂಡ 2,333 ಕುಟುಂಬಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದಡಿ ಪ್ರತಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳಲು ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಚಿವರು ಇದೇ ಸಂದರ್ಭ ತಿಳಿಸಿದರು.

44 ಸಾವಿರ ರೈತರಿಗೆ ನೆರವು: ಕಳೆದ ಒಂದು ವರ್ಷದ ಅವಧಿಯಲ್ಲಿ ನಗರದ ಹೊರ ವಲಯದಲ್ಲಿ 35 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಜಿಲ್ಲಾ ಪಂಚಾಯತ್ ನೂತನ ಭವನ ಉದ್ಘಾಟನೆಯಾಗಿದೆ. ಹಾಗೆಯೇ ಸುಸಜ್ಜಿತ ಜಿಲ್ಲಾ ಕೇಂದ್ರ ಗ್ರಂಥಾಲಯ ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ 3 ಕಂತುಗಳಲ್ಲಿ 6 ಸಾವಿರ ರೂ. ಮತ್ತು ರಾಜ್ಯ ಸರ್ಕಾರದಿಂದ 2 ಕಂತುಗಳಲ್ಲಿ ಹೆಚ್ಚುವರಿಯಾಗಿ 4 ಸಾವಿರ ರೂ.ವನ್ನು ಜಿಲ್ಲೆಯ 44 ಸಾವಿರ ರೈತರಿಗೆ ಹಂತ ಹಂತವಾಗಿ ತಲುಪಿಸಲಾಗುತ್ತಿದೆ ಎಂದು ಹೇಳಿದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆಯಿಂದ ವೀರಾಜಪೇಟೆಯ ಕೆದಮುಳ್ಳೂರು ಗ್ರಾಮದಲ್ಲಿ 7.50 ಎಕರೆ ಜಾಗದಲ್ಲಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ 129 ಮನೆಗಳನ್ನು 6.50 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಹಾಗೆಯೇ ಪ್ರಸಕ್ತ ವರ್ಷದಲ್ಲಿ ಗಿರಿಜನ ಕಾಲೋನಿಗಳಲ್ಲಿ ರಸ್ತೆ, ಚರಂಡಿ, ಅಂಗನವಾಡಿ ಮತ್ತಿತರ ಮೂಲಭೂತ 80 ಕಾಮಗಾರಿಗಳಿಗೆ 15 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ ಮೂಲಭೂತ ಸೌಕರ್ಯಗಳಿಗಾಗಿ 10 ಕೋಟಿ ರೂ. ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ವಿವರಿಸಿದರು.

ಬಡ್ಡಿ ಮನ್ನಾ ಯೋಜನೆ: ಸಹಕಾರ ಇಲಾಖೆ ವತಿಯಿಂದ ಹಸು, ಮೀನು ಸಾಕಾಣಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶೂನ್ಯ  ಬಡ್ಡಿ ದರದಲ್ಲಿ 2 ಲಕ್ಷ ರೂ ಬೆಳೆ ಸಾಲ. ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲದ ಅಸಲನ್ನು ಜೂನ್ 30 ರ ಒಳಗೆ ಪಾವತಿ ಮಾಡಿದ ರೈತರಿಗೆ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗಿದೆ. ಬೆಳೆ ಸಾಲ ಮಧ್ಯಮಾವಧಿ ಕೃಷಿ ಸಾಲ ಮತ್ತು ದೀರ್ಘಾವಧಿ ಕೃಷಿ ಸಾಲ ಸ್ವಸಹಾಯ ಗುಂಪುಗಳ ಸಾಲ, ಕಾಯಕ ಯೋಜನೆಯಡಿ ಸಾಲ, ಈ ಯೋಜನೆಯಡಿ ರಿಯಾಯಿತಿ ಬಡ್ಡಿ ದರದಲ್ಲಿ ವಿತರಿಸಿದ ಸಾಲದ ಮರು ಪಾವತಿ ಅವಧಿಯನ್ನು ಕೋವಿಡ್ ಹಿನ್ನೆಲೆಯಲ್ಲಿ ಆಗಸ್ಟ್ 31 ರ ವರೆಗೆ ವಿಸ್ತರಿಸಿ ರೈತರ ಸಾಲ ಮರುಪಾವತಿಗೆ ಅವಕಾಶ ನೀಡಲಾಗಿದೆ ಎಂದರು.

ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕ, ಪಶುಪಾಲನೆ, ಮೀನುಗಾರಿಕೆ ಹೀಗೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಬೇಕಿದೆ ಎಂದ ಅವರು, ಬಡವರಿಗೆ ಎಲ್ಲಾ ರೀತಿಯ ಸೌಲಭ್ಯಗಳು ತಲುಪಬೇಕು. ಆ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು  ಉಸ್ತುವಾರಿ ಸಚಿವ ಸೋಮಣ್ಣ ನುಡಿದರು.

ಸಂಕಷ್ಟದಲ್ಲಿದ್ದವರಿಗೆ ಪರಿಹಾರ: ಕೋವಿಡ್ ಸಂದರ್ಭದಲ್ಲಿ ಎಲ್ಲಾ ಬಡ ಕುಟುಂಬಗಳಿಗೆ ಆಹಾರ ಪೂರೈಕೆ, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಕ್ಷೌರಿಕರು, ಮಡಿವಾಳರು, ಚರ್ಮ ಕುಶಲಕರ್ಮಿಗಳು, ಆಟೋ ಚಾಲಕರು ಹೀಗೆ ಸಂಕಷ್ಟದಲ್ಲಿದ್ದವರಿಗೆ ಪರಿಹಾರ ಧನ ವಿತರಣೆ, ಮೀನುಗಾರರಿಗೆ ಮತ್ತು ನೇಕಾರರಿಗೆ ಸಹಾಯಧನ, ಜಲ ಜೀವನ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು, ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸರ್ಕಾರ ಒಂದು ವರ್ಷದಲ್ಲಿ ಕೈಗೊಂಡಿರುವುದು ವಿಶೇಷವಾಗಿದೆ ಎಂದು ಅವರು ತಿಳಿಸಿದರು.

ಕಾರ್ಮಿಕರಿಗೆ ಸಹಕಾರ: ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿದ್ದ ಹೊರ ಜಿಲ್ಲೆಯ 1,977 ಮತ್ತು ಹೊರ ರಾಜ್ಯದ 4,558 ಸೇರಿದಂತೆ 6,535 ವಲಸೆ ಕಾರ್ಮಿಕರಿಗೆ ಸರ್ಕಾರ ಅಗತ್ಯ ಸಹಕಾರ ನೀಡಿದೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News