'ಆಶಾ'ಗಳ ಬೇಡಿಕೆ ಈಡೇರಿಕೆಗೆ ಒತ್ತಾಯ: ಎಐಡಿಎಸ್‍ಒ, ಎಐಡಿವೈಒ, ಎಐಎಂಎಸ್‍ಎಸ್‍ನಿಂದ ಎಲ್ಲಾ ಡಿಸಿಗಳಿಗೆ ಮನವಿ

Update: 2020-07-27 12:13 GMT

ಬೆಂಗಳೂರು, ಜು.27: ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ರಾಜ್ಯ ಸರಕಾರ ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿ ಎಐಡಿಎಸ್‍ಒ, ಎಐಡಿವೈಒ ಹಾಗೂ ಎಐಎಂಎಸ್‍ಎಸ್ ವತಿಯಿಂದ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಆಶಾ ಕಾರ್ಯಕರ್ತೆಯರು ತಮಗೆ ಮಾಸಿಕ 12ಸಾವಿರ ರೂ. ಗೌರವಧನ ಹಾಗೂ ಕೋವಿಡ್-19 ಹಿನ್ನೆಲೆಯಲ್ಲಿ ಆರೋಗ್ಯ ದೃಷ್ಟಿಯಿಂದ ಪಿಪಿಇ ಸೇರಿದಂತೆ ಸುರಕ್ಷತಾ ಸಾಮಗ್ರಿಗಳನ್ನು ನೀಡುವಂತೆ ಕಳೆದ 16ದಿನದಿಂದ ಮುಷ್ಕರ ನಡೆಸುತ್ತಿದ್ದಾರೆ. ಆದರೆ, ಸರಕಾರ ಮಾತ್ರ ಈ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ. ಬಾಣಂತಿಯರು, ಗರ್ಭಿಣಿಯರು ಸೇರಿದಂತೆ ಅನಾರೋಗ್ಯ ಪೀಡಿತರ ಆರೋಗ್ಯಕ್ಕೆ ಹಗಲಿರುಳು ಶ್ರಮಿಸುವ ಆಶಾ ಕಾರ್ಯಕರ್ತೆಯರ ಕನಿಷ್ಟ ಬೇಡಿಕೆಗಳನ್ನು ಈಡೇರಿಸುವುದು ರಾಜ್ಯ ಸರಕಾರದ ಕರ್ತವ್ಯವಾಗಿದೆ. ಹೀಗಾಗಿ ಕೂಡಲೇ ಆಶಾ ಕಾರ್ಯಕರ್ತೆಯರ ಸಂಘಟನೆ ಮುಖಂಡರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ.

ಆರೋಗ್ಯ ಇಲಾಖೆಯ ಪ್ರತಿಯೊಂದು ಕಾರ್ಯಕ್ರಮವನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರ ಕಾರ್ಯ ಗಮನಾರ್ಹವಾದುದ್ದಾಗಿದೆ. ಇವರ ಬೇಡಿಕೆಗಳಿಗಾಗಿ ಒತ್ತಾಯಿಸುವುದು ಸಮಾಜದ ಎಲ್ಲರ ಕರ್ತವ್ಯವಾಗಿದೆ. ಸರಕಾರ ಇವರ ಬೇಡಿಕೆಗಳನ್ನು ಈಡೇರಿಸುವಲ್ಲಿ ನಿರ್ಲಕ್ಷ್ಯ ತೋರಿಸಿದರೆ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದು ಎಐಎಂಎಸ್‍ಎಸ್, ಎಐಡಿಎಸ್‍ಒ ಪರವಾಗಿ ಶಾಂತಾ ಪ್ರಕಟನೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News