ನಿಗಮ ಮಂಡಳಿ ಅಧ್ಯಕ್ಷರ ನೇಮಕದಿಂದ ಜನತೆ ಆಶೋತ್ತರಗಳಿಗೆ ಕೊಳ್ಳಿ: ಕುಮಾರಸ್ವಾಮಿ

Update: 2020-07-27 13:08 GMT

ಬೆಂಗಳೂರು, ಜು. 27: `ಕೊರೋನ ಸಂಕಷ್ಟ ಸಮಯದಲ್ಲಿ ಬದುಕಿಗಾಗಿ ಜನತೆ ಹೋರಾಟ ಮಾಡುತ್ತಿದ್ದರೆ, ವರ್ಷಾಚರಣೆಯ ಸಂಭ್ರಮದಲ್ಲೂ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿನಲ್ಲಿ ತನ್ಮಯವಾಗಿರುವ ಬಿಜೆಪಿ ಸರಕಾರ 24 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಉಡುಗೊರೆ ನೀಡುವ ಮೂಲಕ ಜನತೆಯ ಆಶೋತ್ತರಗಳಿಗೆ ಕೊಳ್ಳಿ ಇಟ್ಟಿದೆ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, `ಸರಕಾರ ಮಾತ್ರವಲ್ಲ, ಜನತೆಯು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವಾಗ ಬೊಕ್ಕಸ ಹಾಗೂ ಜನಸಾಮಾನ್ಯನ ಮೇಲೆ ಹೊರೆ ಹೇರುವ ಮೂಲಕ `ಶಾಸಕರಿಗೆ ಉಡುಗೊರೆ, ಜನತೆಗೆ ಬರೆ' ಎಳೆಯುವ ರಾಜ್ಯ ಬಿಜೆಪಿ ಸರಕಾರದ ನಿರ್ಲಜ್ಜ ನಡವಳಿಕೆಯನ್ನು ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ಬಿಜೆಪಿ ಸರಕಾರಕ್ಕೆ ಸಾಮಾನ್ಯರ ಹಿತ ಮುಖ್ಯವೋ? ಕುರ್ಚಿ ಉಳಿಸಿಕೊಳ್ಳಲು ಶಾಸಕರ ಹಿತ ಮುಖ್ಯವೋ? ರಾಜ್ಯದ ಜನತೆಗೆ ಉಡುಗೊರೆ ಕೊಡಬೇಕಾಗಿದ್ದ ಸರಕಾರ ಶಾಸಕರ ತೃಪ್ತಿಪಡಿಸುವ ಅನಾಚಾರ ಪ್ರದರ್ಶಿಸಿದೆ' ಎಂದು ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

`ರಾಜ್ಯ ಎದುರಿಸುತ್ತಿರುವ ಇಂತಹ ಸಂಕಷ್ಟದ ಸಮಯದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಗಾದಿಯ ಮೇಲೆ ಸವಾರಿ ಮಾಡುವುದು ಹಿತವೇ ಎಂಬುದನ್ನು ಶಾಸಕರು ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಿ' ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ನಿಗಮ ಮಂಡಳಿ ಅಧ್ಯಕ್ಷರಾಗಿ ನೂತನ ಆಯ್ಕೆಯಾಗಿರುವ ಶಾಸಕರನ್ನು ಪ್ರಶ್ನೆ ಮಾಡಿದ್ದಾರೆ.

`ಹಗಲನಿರುಳು ಮಾಡಿ, ಇರುಳ ಹಗಲ ಮಾಡಿ. ಆಚಾರವ ಅನಾಚಾರವ ಮಾಡಿ, ಅನಾಚಾರವ ಆಚಾರವ ಮಾಡಿ ಭಕ್ತನ ಭವಿಯ ಮಾಡಿ, ಭವಿಯ ಭಕ್ತನ ಮಾಡಿ, ನುಡಿವವರ ಮಾತ ಕೇಳಲಾಗದು ಗುಹೇಶ್ವರಾ' ಎಂದು ವಚನವನ್ನು ಉಲ್ಲೇಖಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News