ಕೊರೋನ: ದೋಣಿಯ ಒಂದು ತೂತನ್ನಷ್ಟೇ ಮುಚ್ಚಿದರೆ ಸಾಕೇ?

Update: 2020-07-28 05:09 GMT

ಕೊರೋನ ಸೋಂಕಿಗೆ ಔಷಧ ಕ್ಷೇತ್ರದಲ್ಲಿ ಸಂಶೋಧನೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಹಾಗೆಂದು ಕೆಲವು ರೋಗಗಳಿಗೆ ಈಗಾಗಲೇ ಲಭ್ಯವಿರುವ ಔಷಧಿಗಳು ಎಲ್ಲ ರೋಗಿಗಳಿಗೆ ದೊರಕುತ್ತಿವೆ ಎಂದರ್ಥವಲ್ಲ. ಕ್ಯಾನ್ಸರ್, ಕ್ಷಯ ಸೇರಿದಂತೆ ಹತ್ತು ಹಲವು ಮಾರಕರೋಗಗಳಿಗೆ ಔಷಧಿಗಳಿವೆೆಯಾದರೂ, ಅವುಗಳು ಕೆಲವರಿಗಷ್ಟೇ ಎಟಕುತ್ತಿವೆ. ಶ್ರೀಮಂತರಿಗೆ ಸುಲಭದಲ್ಲಿ ದೊರಕುವ ಔಷಧಿಗಳು ಬಡರೋಗಿಗಳಿಗೆ ಕೆಲವೊಮ್ಮೆ ದೊರಕುವುದೇ ಇಲ್ಲ. ಔಷಧಿಯೂ ಒಂದು ಬೃಹತ್ ದಂಧೆಯಾಗಿರುವುದರಿಂದ ಈ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಯಾರ ಬಳಿ ಹಣವಿದೆಯೋ ಅವರಷ್ಟೇ ಬದುಕುವ ಹಕ್ಕನ್ನು ಹೊಂದಿದ್ದಾರೆ ಎನ್ನುವ ಒಂದು ಅಲಿಖಿತ ನಿಯಮವನ್ನು ವಿಶ್ವ ಈಗಾಗಲೇ ಒಪ್ಪಿಕೊಂಡಿದೆ.

ಬಡ ರಾಷ್ಟ್ರಗಳು ಮಾರಕರೋಗಗಳಿಂದ ತತ್ತರಿಸುತ್ತಿರುವಾಗ, ಅದರ ಕುರಿತಂತೆ ಶ್ರೀಮಂತ ರಾಷ್ಟ್ರಗಳು ತಲೆಕೆಡಿಸಿಕೊಂಡಿರುವುದು ಕಡಿಮೆ. ಬಂದಿರುವ ರೋಗಗಳು ತೀವ್ರತರವಾದ ಸಾಂಕ್ರಾಮಿಕ ರೋಗವಾಗಿದ್ದರೆ ಮಾತ್ರ ಅವುಗಳು ಬಡ ರಾಷ್ಟ್ರಗಳ ಕುರಿತಂತೆಯೂ ಏಕಾಏಕಿ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತವೆ. ಕೊರೋನದಂತಹ ಸಾಂಕ್ರಾಮಿಕ ರೋಗಗಳು ಆವರಿಸಿದಾಗ, ಶ್ರೀಮಂತರಿಗಷ್ಟೇ ಔಷಧೋಪಚಾರ ನೀಡಿ, ಬಡವರನ್ನು ನಿರ್ಲಕ್ಷಿಸುವಂತಿಲ್ಲ. ಬಡವನ ಮನೆಗೆ ಬಂದ ಕೊರೋನ, ಕರೆಯದೆಯೇ ಪಕ್ಕದ ಶ್ರೀಮಂತನ ಮನೆಯ ಬಾಗಿಲನ್ನೂ ತಟ್ಟಬಹುದು. ಯಾವುದೇ ತೀವ್ರವಾದ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಬೇಕಾದರೆ ವರ್ಗ ಭೇದ ಮರೆತು, ವೈದ್ಯಕೀಯ ಉಪಚಾರಗಳು ನಡೆಯಬೇಕು. ಬರೇ ಶ್ರೀಮಂತರನ್ನೇ ಅತ್ಯಾಸಕ್ತಿಯಿಂದ ಉಪಚಾರ ಮಾಡಿದರೆ, ದೋಣಿಯ ಒಂದು ಭಾಗದ ತೂತನ್ನು ಮುಚ್ಚಿ ಇನ್ನೊಂದು ತೂತನ್ನು ನಿರ್ಲಕ್ಷಿಸಿದಂತೆ. ಒಂದು ತೂತಿನಿಂದ ಒಳ ನುಗ್ಗುವ ನೀರೇ ಇಡೀ ದೋಣಿಯನ್ನು ಮುಳುಗಿಸುವುದಕ್ಕೆ ಸಾಕು. ಆದುದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಯಬೇಕಾದರೆ ವೈದ್ಯಕೀಯ ಸೇವೆಗಳು ಶ್ರೀಮಂತ-ಬಡವರ ನಡುವೆ ಯಾವ ಭೇದಗಳೂ ಇಲ್ಲದೆ ನಡೆಯಬೇಕು. ಹಾಗಾದಾಗ ಮಾತ್ರ ಕೊರೋನವೆಂದಲ್ಲ ಯಾವುದೇ ಸಾಂಕ್ರಾಮಿಕ ರೋಗಗಳನ್ನೂ ನಾವು ಗೆಲ್ಲಬಹುದು.

ಭಾರತ ಕೊರೋನವಿರುದ್ಧ ನಡೆಸುತ್ತಿರುವ ಸಮರದ ವೈಫಲ್ಯವೇ ಈ ಭೇದದಲ್ಲಿದೆ. ಮುಕ್ತ ಮಾರುಕಟ್ಟೆಗಳು ಎಲ್ಲರಿಗೂ ಆರೋಗ್ಯಸೌಲಭ್ಯಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆಯೆಂಬ ಸುಳ್ಳನ್ನು ಕೋವಿಡ್-19 ಸಾಂಕ್ರಾಮಿಕ ರೋಗವು ಬಯಲಿಗೆಳೆದಿದೆ. ದಿಲ್ಲಿ, ಪಂಜಾಬ್, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯ ಸರಕಾರಗಳು ಸೋಂಕು ಲಕ್ಷಣ ರಹಿತ ಅಥವಾ ಸೋಂಕಿನ ಸೌಮ್ಯ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಹೊಟೇಲ್ ಐಸೋಲೇಶನ್ ಸೌಲಭ್ಯವನ್ನು ಒದಗಿಸಲು ಅನುಮತಿ ನೀಡಿದೆ. ಇದಕ್ಕೂ ಮುನ್ನ, ಅತ್ಯಧಿಕ ಸೋಂಕು ಪೀಡಿತ ಪ್ರದೇಶಗಳಿಗೆ ಪ್ರಯಾಣಿಸಿರುವ ಹಿನ್ನೆಲೆಯಿರುವವರಿಗೆ ಹಣ ಪಾವತಿಸಿ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿ ಉಳಿದುಕೊಳ್ಳುವ ಕೊಡುಗೆಯನ್ನು ನೀಡಿದೆ.

ಸಾಕಷ್ಟು ಹಣ ಪಾವತಿಸಲು ಸಾಧ್ಯವಿದ್ದವರ ಆರೋಗ್ಯದ ಮೇಲೆ ನಿಗಾ ಇರಿಸಲು ಸರಕಾರಿ ಆರೋಗ್ಯ ತಂಡಗಳನ್ನು ಕೂಡಾ ನಿಯೋಜಿಸಲಾಗಿದೆ. ಆದರೆ ಹಣ ಪಾವತಿಸಲು ಸಾಧ್ಯವಿಲ್ಲದವರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ದೊರೆಯುತ್ತಿರುವ ಚಿಕಿತ್ಸೆ ತೀರಾ ಕಳಪೆಯಾಗಿದೆ. ಅವರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ,ಶೌಚಾಲಯದ ನೈರ್ಮಲ್ಯ, ಶುಚಿತ್ವ, ಆರೋಗ್ಯಪಾಲನೆ ಮಾನದಂಡಗಳ ಕುರಿತಾಗಿ ಗಂಭೀರವಾದ ಪ್ರಶ್ನೆಗಳು ಉದ್ಭವಿಸಿವೆ. ಕೇರಳದಂತಹ ಒಂದೆರಡು ರಾಜ್ಯಗಳಲ್ಲಿ ಮಾತ್ರ ಪ್ರತಿಯೊಬ್ಬರನ್ನೂ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗುತ್ತಿದೆ. ಕೊರೋನ ವಿರುದ್ಧ ಕೇರಳ ಭಾಗಶಃ ಗೆದ್ದಿರುವುದು ಈ ಕಾರಣಕ್ಕಾಗಿ.

ಸರ್ವರಿಗೂ ಆರೋಗ್ಯ ಸೌಕರ್ಯಗಳ ಪೂರೈಕೆಯು, ಸಾಮಾಜಿಕ ಭದ್ರತೆ ಹಾಗೂ ಆರ್ಥಿಕತೆಯ ಜೊತೆ ಅತ್ಯಂತ ಸ್ವಾಭಾವಿಕವಾಗಿ ಬೆಸೆದುಕೊಂಡಿದೆ ಎಂಬುದನ್ನು ಕೋವಿಡ್-19 ಸೋಂಕು ರೋಗವು ಇಡೀ ವಿಶ್ವಕ್ಕೆ ಮನದಟ್ಟು ಮಾಡಿಸಿದೆ. ಆದರೆ ಕೇಂದ್ರ ಸರಕಾರವು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಕೋವಿಡ್-19 ನಿಯಂತ್ರಣಕ್ಕಾಗಿ ಆಸ್ಪತ್ರೆಯ ಹಾಸಿಗೆಗಳು ಹಾಗೂ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವುದು ಸರಕಾರದ ಉದ್ದೇಶವಾಗಿದ್ದರೆ, ಹೊಟೇಲ್‌ಗಳನ್ನು ಪಾವತಿಯ ಆಧಾರದಲ್ಲಿ ಐಸೋಲೇಶನ್ ಅಥವಾ ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸುವುದು ಸಮರ್ಪಕವಾದ ಹೆಜ್ಜೆಯಲ್ಲ. ಸರಕಾರಿ ವಸತಿ ಗೃಹಗಳು ಹಾಗೂ ಸದ್ಯಕ್ಕೆ ಆನ್‌ಲೈನ್ ಶಿಕ್ಷಣವನ್ನು ಅವಲಂಬಿಸಿರುವ ಶೈಕ್ಷಣಿಕ ಸಂಸ್ಥೆಗಳ ಹಾಸ್ಟೆಲ್‌ಗಳು ಖಾಲಿಯಿರುವುದರಿಂದ ಅವುಗಳನ್ನು ಕೋವಿಡ್-19 ಚಿಕಿತ್ಸಾ ಕೇಂದ್ರಗಳಾಗಿ ಬಳಸಿಕೊಳ್ಳಬಹುದು. ರೈಲ್ವೆ ಕೋಚ್‌ಗಳನ್ನು ಕೊರೋನಚಿಕಿತ್ಸೆಯ ಆಸ್ಪತ್ರೆಗಳಾಗಿ ಪರಿವರ್ತಿಸಿದಷ್ಟೇ ಇದೂ ಸುಲಭವಾಗಿದೆ. ಆದರೆ ನಮ್ಮ ಅಧಿಕಾರಶಾಹಿ ವ್ಯವಸ್ಥೆಯು ಖಾಸಗಿ ಉದ್ಯಮಗಳ ಹಿತಾಸಕ್ತಿಗೆ ಹೆಚ್ಚು ಒತ್ತು ನೀಡುತ್ತಿದೆಯೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಹಣಪಾವತಿಸುವ ಸಾಮರ್ಥ್ಯವಿದ್ದವರಿಗೆ ಹೊಟೇಲ್‌ಗಳಲ್ಲಿ ಉತ್ತಮವಾದ ಶೌಚಗೃಹ ಹಾಗೂ ನೈರ್ಮಲ್ಯ ವ್ಯವಸ್ಥೆಯೊಂದಿಗೆ ಆರೋಗ್ಯಪಾಲನಾ ಸೌಲಭ್ಯಗಳನ್ನು ಒದಗಿಸುವ ಸರಕಾರವು, ಸರಕಾರಿ ಸಂಸ್ಥೆಗಳಲ್ಲಿ ಚಿಕಿತ್ಸೆಗೆ ತೆರಳುವ ದೇಶದ ಬಹುತೇಕ ಜನರಿಗೆ ಅತ್ಯಂತ ಸೀಮಿತವಾದ ಮಟ್ಟದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಅಲ್ಲಿ ಅವರಿಗೆ ಉತ್ತಮವಾದ ಶೌಚಗೃಹ, ನೈರ್ಮಲ್ಯ ವ್ಯವಸ್ಥೆಗಳು ದೊರೆಯುವ ಖಾತರಿಯನ್ನು ಯಾರೂ ನೀಡುವುದಿಲ್ಲ. ಇದು ಭಾರತದ ಸಂವಿಧಾನ ನೀಡಿರುವ ಹಕ್ಕುಗಳ ಅತಿ ದೊಡ್ಡ ವ್ಯಂಗ್ಯ ಮಾತ್ರವಲ್ಲ, ಕೊರೋನವಿರುದ್ಧ ನಡೆಯುತ್ತಿರುವ ಹೋರಾಟದ ಒಂದು ವಿಡಂಬನೆಯೂ ಆಗಿದೆ. ಎಲ್ಲರಿಗೂ ಆರೋಗ್ಯ ಎಂಬ ಸದಾ ಜಪಿಸುತ್ತಾ ಬರುತ್ತಿರುವ ನಮ್ಮ ಸರಕಾರ, ಈಗ ನುಡಿದಂತೆ ನಡೆದುಕೊಳ್ಳಬೇಕಿದೆ.

ಸರ್ವರಿಗೂ ಆರೋಗ್ಯವೆಂದರೆ ಕೇವಲ ಕ್ಲಿನಿಕ್ ಹಾಗೂ ಆಸ್ಪತ್ರೆಗಳ ಸೇವೆಗಳನ್ನು ಒದಗಿಸುವುದು ಮಾತ್ರವೇ ಅಲ್ಲ, ರೋಗ ನಿರೋಧಕ ಆರೋಗ್ಯವಂತ ಸಮಾಜವನ್ನ್ನು ಕೂಡಾ ಅದು ಒಳಗೊಂಡಿದೆ. ಕೊರೋನ ಸೋಂಕು ಹರಡದಂತೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಸರಕಾರದ ಮೂಲಭೂತ ಕರ್ತವ್ಯವಾಗಿದೆ. ಒಂದು ವೇಳೆ ನಮ್ಮ ಜನಸಂಖ್ಯೆಯ ಬಹುತೇಕ ಮಂದಿಗೆ ಸುರಕ್ಷಿತ ಅಂತರ ಕಾಪಾಡಲು ಅಸಾಧ್ಯವಾದಲ್ಲಿ ಅಥವಾ ಸಮರ್ಪಕವಾದ ಶೌಚಗೃಹ ಅಥವಾ ಮನೆಗಳು ಲಭಿಸದೆ ಇದ್ದಲ್ಲಿ ಅಥವಾ ಪೌಷ್ಟಿಕ ಆಹಾರ ಅಥವಾ ಶಿಕ್ಷಣದಿಂದ ವಂಚಿತರಾದಲ್ಲಿ ಅದಕ್ಕೆ ಕಾರಣ, ನಮ್ಮ ಸರಕಾರವು ಅನುಸರಿಸುತ್ತಿರುವ ಅಭಿವೃದ್ಧಿಯ ಮಾದರಿಯಾಗಿದೆ.

ಸರಕಾರದ ಅಭಿವೃದ್ಧಿಯ ಮಾದರಿಯು ದೇಶದ ಜನತೆಯ ನಡುವೆ ಅಸಮಾನತೆ, ಅನ್ಯಾಯವನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಹಾಗೂ ಕೊರೋನ ವೈರಸ್‌ನಂತಹ ಅಪಾಯಕಾರಿ ಸೋಂಕು ರೋಗಗಳಿಗೆ ಸುಲಭವಾಗಿ ತುತ್ತಾಗುವಂತೆ ಮಾಡುತ್ತಿವೆ. ಆದುದರಿಂದ ಕೊರೋನ, ಈ ದೇಶದ ಅಭಿವೃದ್ಧಿಯ ಪರಿಕಲ್ಪನೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ನಾವು ನ್ಯಾಯಯುತ ಹಾಗೂ ಸಮಾನತೆಯ ಜಗತ್ತಿನ ಸೃಷ್ಟಿಯತ್ತ ಈಗಿಂದೀಗಲೇ ಹೆಜ್ಜೆಯಿಡಬೇಕಾದ ಅಗತ್ಯವನ್ನು ಕೊರೋನ ಭಾರತಕ್ಕೆ ಕೂಗಿ ಹೇಳುತ್ತಿದೆ. ಆ ಮೂಲಕ ಮಾತ್ರ ನಾವು ಕೋರೋನಾದಂತಹ ಸಾಂಕ್ರಾಮಿಕ ರೋಗಗಳನ್ನು ಮಾತ್ರವಲ್ಲದೆ, ಕ್ಷಯದಂತಹ ಮಾರಣಾಂತಿಕ ಕಾಯಿಲೆಗಳನ್ನು ಗೆಲ್ಲಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News