ಏಕದಿನ ವಿಶ್ವಕಪ್ ಕ್ರಿಕೆಟ್ ಪರ್ ಲೀಗ್‌ಗೆ ಇಂಗ್ಲೆಂಡ್ ನಲ್ಲಿ ಚಾಲನೆ

Update: 2020-07-28 05:17 GMT

ದುಬೈ: ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ(ಐಸಿಸಿ) ಕನಸಿನ ಕೂಸಾಗಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಸೂಪರ್ ಲೀಗ್‌ಗೆ ಜು.30ರಂದು ಇಂಗ್ಲೆಂಡ್‌ನಲ್ಲಿ ಅಧಿಕೃತವಾಗಿ ಚಾಲನೆ ದೊರೆಯಲಿದೆ. ಸೌತಾಂಪ್ಟನ್‌ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಮತ್ತು ಐರ್ಲೆಂಡ್ ತಂಡಗಳು ಹಣಾಹಣಿ ನಡೆಸುವುದರೊಂದಿಗೆ ಸೂಪರ್ ಲೀಗ್ ಪ್ರಾರಂಭವಾಗಲಿದೆ.

 ಟ್ವೆಂಟಿ-20 ಕ್ರಿಕೆಟ್ ಉದಯದ ಬಳಿಕ ಏಕದಿನ ಪಂದ್ಯಗಳ ಜನಪ್ರಿಯತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಏಕದಿನ ಕ್ರಿಕೆಟ್ ಪಂದ್ಯಗಳಿಗೆ ಜನರನ್ನು ಆಕರ್ಷಿಸಲು ಸೂಪರ್ ಲೀಗ್‌ನ್ನು ಪರಿಚಯಿಸಲಾಗುತ್ತದೆ. ಸೂಪರ್ ಲೀಗ್‌ನಲ್ಲಿ 13 ತಂಡಗಳಿವೆ. ಐಸಿಸಿ 12 ತಂಡಗಳು ಮತ್ತು ನೆದರ್‌ಲ್ಯಾಂಡ್ ತಂಡ ಸೂಪರ್ ಲೀಗ್‌ನಲ್ಲಿಹಣಾಹಣಿ ನಡೆಸಲಿವೆ.

ಭಾರತದಲ್ಲಿ 2023ರಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದೆ. ಆತಿಥೇಯ ಭಾರತ ಮತ್ತು ಅಗ್ರ ಏಳು ತಂಡಗಳು ನೇರವಾಗಿ 2023 ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ. 2 ತಂಡಗಳು ಕ್ವಾಲಿಫೈಯರ್ ಮೂಲಕ ಅರ್ಹತೆ ಪಡೆಯುತ್ತವೆೆ. ಐದು ತಂಡಗಳು ವಿಶ್ವಕಪ್‌ನಲ್ಲಿ ಅರ್ಹತೆ ಪಡೆಯಲು ಹಣಾಹಣಿ ನಡೆಸಲಿವೆ. ಲೀಗ್‌ನಲ್ಲಿ ಪ್ರತಿ ತಂಡವು ತವರಿನಲ್ಲಿ ನಾಲ್ಕು ಮತ್ತು ವಿದೇಶದಲ್ಲಿ ಮೂರು ಪಂದ್ಯಗಳ 4 ಸರಣಿಯನ್ನು ಆಡುತ್ತದೆ.

  ‘‘ನಾವು ಮತ್ತೆ ಕ್ರಿಕೆಟ್ ಆಡಲು ಮತ್ತು ಐಸಿಸಿ ಪುರುಷರ ವಿಶ್ವಕಪ್ ಸೂಪರ್ ಲೀಗ್‌ನ್ನು ಎದುರು ನೋಡುತ್ತಿದ್ದೇವೆ. ಪರಿಸ್ಥಿತಿಯನ್ನು ಗಮನಿಸಿದರೆ, ನಾವು ಕೊನೆಯ ಬಾರಿಗೆ ಆಡಿದ ಸಮಯಕ್ಕಿಂತ ಇದು ವಿಭಿನ್ನವಾಗಿರುತ್ತದೆ. ತವರುನೆಲ ಲಾರ್ಡ್ಸ್‌ನಲ್ಲಿ ವಿಶ್ವಕಪ್‌ನ್ನು ಎತ್ತಿದಾಗಿನ ಪರಿಸ್ಥಿತಿ ಈಗಿಲ್ಲ. ಆದರೆ ಪಂದ್ಯಾವಳಿಯ ಮುಂದಿನ ಆವೃತ್ತಿಗೆ ನಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತಿರುವುದು ಸಂತಸದ ವಿಚಾರ’’ ಎಂದು ವಿಶ್ವಕಪ್ ವಿಜೇತ 2019ರ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೊರ್ಗನ್ ಹೇಳಿದರು.

 ಐಸಿಸಿ ಪುರುಷರ ವಿಶ್ವಕಪ್ ಸೂಪರ್ ಲೀಗ್‌ನ ಉದ್ಘಾಟನಾ ಸರಣಿಯಲ್ಲಿ ಆಡುತ್ತಿರುವುದು ಒಂದು ಭಾಗ್ಯವಾಗಿದೆ. ಇದು ಕೇವಲ ಒಂದು ವರ್ಷದ ಹಿಂದೆ ವಿಶ್ವಕಪ್ ಗೆದ್ದ ತಂಡವನ್ನು ಎದುರಿಸುವುದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಆದರೆ ನಾವು ಚೆನ್ನಾಗಿ ತಯಾರಿ ನಡೆಸಿದ್ದೇವೆ’’ ಐರ್‌ಲ್ಯಾಂಡ್ ತಂಡದ ನಾಯಕ ಆ್ಯಂಡ್ರೊ ಬಲ್ಬಿರ್ನಿ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News