ಜಾನುವಾರುಗಳ ಸಮೇತ ಕೋಚಿಮುಲ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ರೈತ ಸಂಘ

Update: 2020-07-28 18:49 GMT

ಕೋಲಾರ: ಪಶು ಆಹಾರದ ಬೆಲೆ ಇಳಿಕೆ ಮಾಡಿ, ಹಾಲಿನ ಬೆಲೆಯನ್ನು ಏರಿಕೆ ಮಾಡಬೇಕು ಹಾಗೂ ಕೊರೋನ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಹಾಲಿನ ಬೆಲೆಯನ್ನು 40ರೂ. ಗಳಿಗೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಜಾನುವಾರುಗಳ ಸಮೇತ ಕಪ್ಪು ಪಟ್ಟಿ ಧರಿಸಿ ಕೋಚಿಮುಲ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ತಮ್ಮ ಹೊಟ್ಟೆಪಾಡಿಗಾಗಿ ನಗರಗಳತ್ತ ವಲಸೆ ಹೋಗಿದ್ದ ಅನೇಕರು ಇಂದು ಗ್ರಾಮೀಣ ಭಾಗಗಳಿಗೆ ವಾಪಸ್ಸು ಬಂದ ಸಂದರ್ಭದಲ್ಲಿ ಹೈನೋದ್ಯಮವು ಕೈ ಹಿಡಿಯಿತು. ಒಡವೆಗಳನ್ನು ಅಡವಿಟ್ಟು ಹಸುಗಳನ್ನು ಖರೀದಿಸಿ ಸ್ವಾಭಿಮಾನದ ಜೀವನವನ್ನು ನಡೆಸಲು ಆರಂಭಿಸಿದ್ದಾರೆ. ಆದರೆ ರೈತರು ಬೆಳೆದ ಬೆಳೆಗಳಿಗೂ ಬೆಲೆಯಿಲ್ಲದ ಸಮಯದಲ್ಲಿ ಹಾಲು ಒಕ್ಕೂಟವು ಪ್ರತಿ ಲೀಟರ್ ಹಾಲಿನ ಬೆಲೆ ಏರಿಕೆ ಮಾಡುವುದನ್ನು ಬಿಟ್ಟು ಉತ್ಪಾದನೆ ಹೆಚ್ಚಾಗಿದೆ ಎಂದು ಕಾರಣ ನೀಡಿ 4 ರೂ. ಗಳನ್ನು ಕಡಿ ಮಾಡಿರುವುದು ಲಕ್ಷಾಂತರ ಕುಟುಂಬಗಳ ಮರಣಶಾಸನ ಬರೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿ ಗೌಡ ಮಾತನಾಡಿ, ಹೈನೋದ್ಯಮವು ಗ್ರಾಮೀಣ ಪ್ರದೇಶದ ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿದ್ದು, ಅದಕ್ಕೆ ಪ್ರೋತ್ಸಾಹ ನೀಡಬೇಕಾದ ಸರ್ಕಾರ ಮತ್ತು ಒಕ್ಕೂಟಗಳು ದಿನೇದಿನೇ ಹಾಲಿನ ಬೆಲೆ ಕಡಿಮೆ ಮಾಡಿ ಹೈನೋದ್ಯಮ ನಂಬಿರುವ ಕುಟುಂಬಗಳನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಆದಾಯ ಬರುವ ಮದ್ಯದ ಬೆಲೆಗಳನ್ನು ಏಕಾಏಕಿ ಏರಿಕೆ ಮಾಡುವಂತೆಯೇ ಹಾಲಿನ ಬೆಲೆಯನ್ನು ಏಕಾಏಕಿ ಕಡಿತಗೊಳಿಸುವುದು ಸರಿಯಲ್ಲ.  ಹಲವಾರು ವರ್ಷಗಳ ಇತಿಹಾಸವಿರುವ ಕೋಚಿಮುಲ್ ಒಕ್ಕೂಟವು ಕೋಟ್ಯಂತರರೂ ಲಾಭ ಪಡೆದಿರುವುದನ್ನು ಸಂಕಷ್ಟದಲ್ಲಿ ರೈತರಿಗೆ ನೀಡದೆ ತೊಂದರೆ ಕೊಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಿಡಿಕಾರಿದರು.

ಹಾಗಾಗಿ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಈ ಕೂಡಲೇ ಪಶು ಆಹಾರ ಬೆಲೆ ಇಳಿಕೆ ಮಾಡಿ, ಹಾಲಿನ ಬೆಲೆ ಏರಿಕೆ ಮಾಡಬೇಕು. ಜೊತೆಗೆ ಒಕ್ಕೂಟದಲ್ಲಿನ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು, ದೇವಾಲಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ದತ್ತಿ ಹಣ 3.36 ಕೋಟಿ ರೂ. ಗಳನ್ನು ನಿರ್ದೇಶಕರ ಖಾತೆಗಳಿಂದ ವಾಪಸ್ಸು ಪಡೆದು ಹಾಲು ಉತ್ಪಾದಕರಿಕೆಗೆ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಇಲ್ಲವಾದಲ್ಲಿ ಸ್ವಾಭಿಮಾನದ ಜೀವನ ನಡೆಸಲು ಸಾಧ್ಯವಾಗದೆ ಅಂಜಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಅದ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಲಿನ ಬೆಲೆ ಹೆಚ್ಚಾಗಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಇದು ತಾತ್ಕಾಲಿಕ ಆದಷ್ಟು ಬೇಗ ಹಾಲಿನ ಬೆಲೆ ಏರಿಕೆ ಮಾಡುವ ನಿರ್ಧಾರ ಮಾಡುವ ಜೊತೆಗೆ ಪಶು ಆಹಾರದ ಬೆಲೆ ಇಳಿಕೆಗೆ ನಾವು ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮಗರಲ್ ಶ್ರೀನಿವಾಸ್, ಹುಲ್ಕೂರು ಹರಿಕುಮಾರ್, ಈಕಂಬಳ್ಳಿ ಮಂಜುನಾಥ್, ತೆರ್ನಹಳ್ಳಿ ಆಂಜಿನಪ್ಪ, ಮಾಸ್ತಿ ವೆಂಕಟೇಶ್. ಮಂಗಸಂದ್ರ ತಿಮ್ಮಣ್ಣ, ನಾಗೇಶ್, ವೆಂಕಟೇಶ್, ಕಾವ್ಯಾಂಜಲಿ, ವಿ.ನಳಿನಿ, ಸುಪ್ರಿಂಚಲ, ಶಿವ, ನವೀನ್ ರಾಮಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News