ನಿವೇಶನ ಜಾಗಕ್ಕಾಗಿ ದಲಿತ ವ್ಯಕ್ತಿಯ ಜಮೀನು ಖುಲ್ಲಾ ಮಾಡಿಸಲು ಕಿರುಕುಳ; ಆರೋಪ

Update: 2020-07-28 18:54 GMT

ಚಿಕ್ಕಮಗಳೂರು, ಜು.28: ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಕಳೆದ 10 ವರ್ಷಗಳಿಂದ ಪರಿಶಿಷ್ಟ ಸಮುದಾಯಕ್ಕೆ ಸೇರಿರುವ ಕೃಷಿಕರೊಬ್ಬರ ಜಮೀನು ಖುಲ್ಲಾ ಮಾಡಿಸಲು ಕಂದಾಯ, ಅರಣ್ಯಾಧಿಕಾರಿಗಳು ಮುಂದಾದ ಘಟನೆ ಮಂಗಳವಾರ ತಾಲೂಕಿನ ಆಲ್ದೂರು ಗ್ರಾಪಂ ವ್ಯಾಪ್ತಿಯಲ್ಲಿ ವರದಿಯಾಗಿದ್ದು, ಜೀವನಕ್ಕೆ ಆಧಾರವಾಗಿರುವ ಜಮೀನು ಖುಲ್ಲಾಮಾಡಿಸಿದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂತ್ರಸ್ತ ಕೃಷಿಕ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಆಲ್ದೂರು ಗ್ರಾಪಂ ವ್ಯಾಪ್ತಿಯಲ್ಲಿರುವ ತುಡುಕೂರು ಗ್ರಾಮದಲ್ಲಿರುವ ಸ.ನಂ.289ರಲ್ಲಿ 7.13 ಎಕರೆ ಕಂದಾಯ ಜಮೀನಿದೆ. ಈ ಸರಕಾರಿ ಜಾಗದಲ್ಲಿ ಬಹುತೇಕ ಎಲ್ಲ ಸಮುದಾಯಗಳ ಜನರು ಕೃಷಿ ಮಾಡಿದ್ದು, ಈ ಪೈಕಿ ಕೆಲವರು ಜಮೀನು ಹಕ್ಕುಪತ್ರ ಹೊಂದಿದ್ದಾರೆ. ಇನ್ನು ಕೆಲವರು ಒತ್ತುವರಿ ಜಮೀನು ಹೊಂದಿದ್ದಾರೆ. ಇದೇ ಸರಕಾರಿ ಜಾಗದಲ್ಲಿ ಸ್ಥಳೀಯರೇ ಆಗಿರುವ ಪರಿಶಿಷ್ಟ ಜಾತಿ ಸಮುದಾಯದ ಸುಂದರೇಶ್ ಎಂಬವರು 1 ಎಕರೆ ಜಮೀನಿನಲ್ಲಿ ಕೃಷಿ ಮಾಡಿದ್ದು, ಕಳೆದ 10 ವರ್ಷಗಳಿಂದ ಕಾಫಿ, ಬಾಳೆ ಮತ್ತಿತರ ಬೆಳೆ ಬೆಳೆದಿದ್ದಾರೆ. ಜಮೀನಿನ ಸಾಗುವಳಿ ಚೀಟಿಗಾಗಿ ಫಾರಂ ನಂ.53ರಲ್ಲಿ ಈಗಾಗಲೇ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಆದರೆ ಆಲ್ದೂರು ಗ್ರಾಪಂ ಮಾಜಿ ಸದಸ್ಯೆ ಹೇಮಾವತಿ ಎಂಬವರು ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ನೆಪದಲ್ಲಿ ಸರ್ವೇ ನಂ.289ರಲ್ಲಿ ಕೃಷಿ ಮಾಡಿರುವ ಸುಂದರೇಶ್ ಜಮೀನನನ್ನು ಖುಲ್ಲಾ ಮಾಡಿಸುವಂತೆ ಚಿಕ್ಕಮಗಳೂರು ತಹಶೀಲ್ದಾರ್ ಬೇಡಿಕೆ ಸಲ್ಲಿಸಿದ್ದು, ಅದರಂತೆ ಮಂಗಳವಾರ ತಹಶೀಲ್ದಾರ್ ಕಾಂತರಾಜ್ ಹಾಗೂ ಅರಣ್ಯಾಧಿಕಾರಿಗಳು ಸುಂದರೇಶ್ ಜಮೀನಿಗೆ ಭೇಟಿ ಜಾಗ ಪರಿಶೀಲಿಸಿದ್ದಾರೆ.

ಈ ವೇಳೆ ಸ್ಥಳಕ್ಕೆ ಆಲ್ದೂರು ಗ್ರಾಪಂ ಮಾಜಿ ಸದಸ್ಯೆ ಹೇಮಾವತಿ ಸೇರಿದಂತೆ ಸುತ್ತಮುತ್ತಲಿಗೆ ನಿವೇಶನ ರಹಿತರೂ ಆಗಮಿಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ತನ್ನ ಜೀವನಕ್ಕೆ ಆಧಾರವಾಗಿರುವ ಜಮೀನು ಖುಲ್ಲಾ ಮಾಡಿಸಿದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುಂದರೇಶ್ ಪಟ್ಟು ಹಿಡಿದಿದ್ದು, ಈ ಸರ್ವೇ ನಂಬರ್ ನಲ್ಲಿರುವ 7.13 ಎಕರೆ ಜಮೀನು ಪೈಕಿ ಒತ್ತುವರಿ ಮಾಡಿರುವವರ ಜಮೀನುಗಳ ಬಗ್ಗೆ ತಕರಾರು ತೆಗೆಯದ ಅಧಿಕಾರಿಗಳು ಮತ್ತು ಗ್ರಾಪಂ ಸದಸ್ಯೆ ದಲಿತ ಸಮುದಾಯಕ್ಕೆ ಸೇರಿದ ತನ್ನ ಜಮೀನನ್ನೇ ಖುಲ್ಲಾ ಮಾಡಿಸಲು ಮುಂದಾಗಿದ್ದಾರೆ. ಖುಲ್ಲಾ ಮಾಡಿಸುವುದಾರೆ ಎಲ್ಲ ಒತ್ತುವರಿ ಜಮೀನನ್ನೂ ಖುಲ್ಲಾ ಮಾಡಿಸಬೇಕು. ಕಳೆದ 10 ವರ್ಷಗಳಿಂದ ಜಮೀನು ಕೃಷಿ ಮಾಡಿದ್ದು, ಕಾಫಿ ಫಸಲು ಬರುತ್ತಿದೆ. ಜಮೀನು ಹಕ್ಕುಪತ್ರಕ್ಕಾಗಿ ಅಕ್ರಮ ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿದ್ದೇನೆ. ದಲಿತರು ಕೃಷಿ ಜಮೀನು ಹೊಂದಬಾರದೇ, ಕೃಷಿ ಮಾಡಬಾರದೇ ಎಂದು ಅಳಲು ತೋಡಿಕೊಂಡಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಪಂ ಸದಸ್ಯೆ ಜಮೀನು ಖುಲ್ಲಾ ಮಾಡಿಸಲು ಪಟ್ಟು ಹಿಡಿದಿದ್ದರಿಂದ ಈ ವೇಳೆ ಅಧಿಕಾರಿಗಳು, ನಿವೇಶನ ರಹಿತರು ಹಾಗೂ ಸುಂದರೇಶ್ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು ಎಂದು ತಿಳಿದು ಬಂದಿದೆ.

ನಂತರ ಕಂದಾಯ, ಅರಣ್ಯಾಧಿಕಾರಿಗಳು ಜಾಗ ಪರಿಶೀಲಿಸಿ, ಅಗತ್ಯ ಕ್ರಮವಹಿಸುವುದಾಗಿ ಹೇಳಿ ಪರಸ್ಥಿತಿಯನ್ನು ತಿಳಿಗೊಳಿಸಿದ್ದಾರೆಂದು ತಿಳಿದು ಬಂದಿದೆ.

ಆಲ್ದೂರು ಗ್ರಾಪಂ ಮಾಜಿ ಸದಸ್ಯೆ ಹೇಮಾವತಿ ಅವರು ನಿವೇಶನ ರಹಿತರಿಂದ ತಲಾ 5 ಸಾವಿರ ರೂ. ಪಡೆದು ನಿವೇಶನ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ನಿವೇಶನ ಕಲ್ಪಿಸದಿರುವುದರಿಂದ ಹಣ ನೀಡಿದ ನಿವೇಶನ ರಹಿತರು ಹಣವನ್ನು ಹಿಂದಕ್ಕೆ ಕೇಳಿದ್ದಾರೆ. ಈ ಕಾರಣಕ್ಕೆ ನಾನು ಕೃಷಿ ಮಾಡಿರುವ ಹಾಗೂ ಸಕ್ರಮಕ್ಕೆ ಅರ್ಜಿ ಸಲ್ಲಿಸಿರುವ ಜಮೀನು ಖುಲ್ಲಾ ಮಾಡಿಸಲು ಪ್ರಭಾವಿಗಳ ಮೂಲಕ ಕಂದಾಯ, ಅರಣ್ಯಾಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ. ಅಧಿಕಾರಿಗಳು ಪದೇ ಪದೇ ಸ್ಥಳಕ್ಕೆ ಬಂದು ಜಾಗ ಖುಲ್ಲಾ ಮಾಡಿಸಲು ಕಿರುಕುಳ ನೀಡುತ್ತಿದ್ದಾರೆ. ಜಮೀನು ಕೃಷಿ ಮಾಡಲು ಸಾಲ ಮಾಡಿದ್ದೇನೆ. ಅಧಿಕಾರಿಗಳು ಮತ್ತು ಗ್ರಾಪಂ ಮಾಜಿ ಸದಸ್ಯೆ ನನ್ನ ಜಮೀನನ್ನೇ ಖುಲ್ಲಾ ಮಾಡಿಸಲು ಮುಂದಾಗಿರುವುದು ಏಕೆಂದು ತಿಳಿಯುತ್ತಿಲ್ಲ. ಈ ಸವೇ ನಂಬರ್‍ನಲ್ಲಿ ಪ್ರಭಾವಿ ಸಮುದಾಯದವರೂ ಒತ್ತುವರಿ ಮಾಡಿದ್ದು, ಅವರ ತಂಟೆಗೆ ಹೋಗದೇ ನನ್ನ ಜಮೀನು ಖುಲ್ಲಾ ಮಾಡಿಸಲು ಮುಂದಾಗಿದ್ದಾರೆ.

- ಸುಂದರೇಶ್, ನೊಂದ ಕೃಷಿಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News