ಬೆಂಗಳೂರಿನಲ್ಲಿ ಕ್ವಾರಂಟೈನ್‍ನಲ್ಲಿರುವ 10 ಸಾವಿರಕ್ಕೂ ಅಧಿಕ ಮಂದಿ ನಾಪತ್ತೆ: ಎಚ್.ಕೆ.ಪಾಟೀಲ್ ಆತಂಕ

Update: 2020-07-30 17:04 GMT

ಬೆಂಗಳೂರು, ಜು.30: ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಮಾಹಿತಿ ಮತ್ತು ಕಣ್ಗಾವಲು ವ್ಯಾಪ್ತಿಯಿಂದ ನಾಪತ್ತೆಯಾಗಿದ್ದು, ಅದರ ಪರಿಣಾಮವಾಗಿ ಭಾರೀ ಪ್ರಮಾಣದ ಹರಡುವಿಕೆಯ ಅನಾಹುತ ಎದುರಾಗಬಹುದಾಗಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ವಿಶ್ವವೇ ಬೆಚ್ಚಿಬಿದ್ದಿರುವ ಕೊರೋನ ಮಹಾಮಾರಿಯ ಗಂಭೀರ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ. ಇಡೀ ರಾಷ್ಟ್ರದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಪ್ರತಿನಿತ್ಯ 50 ಸಾವಿರದಷ್ಟಕ್ಕೇರಿದೆ. ನಮ್ಮ ರಾಜ್ಯದಲ್ಲಿ ಈಗ ಸಂಖ್ಯೆ ಪ್ರತಿ ದಿನ 5 ಸಾವಿರವನ್ನು ತಲುಪಿದೆ ಎಂದು ಅವರು ತಿಳಿಸಿದ್ದಾರೆ.

ಕೊರೋನ ಮಹಾಮಾರಿಯ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಸಾವಿರಾರು ಸುತ್ತೋಲೆಗಳನ್ನು, ಸರಕಾರಿ ಆದೇಶಗಳನ್ನು ಹೊರಡಿಸಿದೆ. ಈ ಸಂಬಂಧ ಅನೇಕ ಸಭೆಗಳನ್ನು ತಾವು ನಡೆಸಿದ್ದೀರಿ. ಸಚಿವರನ್ನು ಬೆಂಗಳೂರಿನಲ್ಲಿ ವಲಯವಾರು ಉಸ್ತುವಾರಿಯಾಗಿ ನೇಮಕ ಮಾಡಿದ್ದೀರಿ. ಸಚಿವರು ಅನೇಕ ಸಭೆಗಳನ್ನು ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಧಿಕಾರಿಗಳ ಮಟ್ಟದಲ್ಲಿ ಸರಾಸರಿ 10 ರಿಂದ 15 ಸಭೆಗಳು ಪ್ರತಿನಿತ್ಯ ನಡೆಯುತ್ತಿವೆ. ಮುಖ್ಯಕಾರ್ಯದರ್ಶಿ ಮಟ್ಟದಲ್ಲಿ ನಿತ್ಯ 2-3 ಸಭೆಗಳು, ಹೊಸ ಹೊಸ ಅಧಿಸೂಚನೆಗಳು ಮತ್ತು ಆದೇಶಗಳು ಹೊರಡುತ್ತಲೇ ಇವೆ. ಆದರೆ, ಸರಕಾರದ ಈ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿವೆ ಮತ್ತು ನಿರೀಕ್ಷಿತ ಸಮರ್ಪಕ ಪರಿಣಾಮ ಬೀರುತ್ತಿಲ್ಲ. ಇಲ್ಲವೇ ನಿರ್ಣಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಎಚ್.ಕೆ.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಈಗಿರುವ ಸದ್ಯದ ವ್ಯವಸ್ಥೆಯಂತೆ ಸೋಂಕಿತ ವ್ಯಕ್ತಿಯನ್ನು ಪತ್ತೆ ಹಚ್ಚಿ ತಕ್ಷಣ ಅವರನ್ನು ಪಟ್ಟಿಗೆ ಸೇರಿಸಿ ಅವರಿಗೆ ಸಂಖ್ಯೆ ನೀಡಿ, ಅವರೊಂದಿಗಿನ ಪ್ರಾಥಮಿಕ ಸಂಪರ್ಕ ಪತ್ತೆ ಹಚ್ಚಿ ಸೋಂಕಿತರಿಗೆ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಇಲ್ಲವೇ ಮನೆಯಲ್ಲಿಯೇ ಪ್ರತ್ಯೇಕಿಸುವ ವ್ಯವಸ್ಥೆಗೊಳಿಸುವ ಕಟ್ಟುನಿಟ್ಟಾದ ವ್ಯವಸ್ಥೆ ಇದೆ ಎಂದು ಸಾರ್ವಜನಿಕರಿಗೆಲ್ಲಾ ತಿಳಿಸಿ, ನಾವೆಲ್ಲಾ ಅದೇ ವ್ಯವಸ್ಥೆಯನ್ನು ಸರಕಾರ ಮಾಡಿದೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಒಂದರಲ್ಲಿಯೇ 10 ಸಾವಿರ ಸೋಂಕಿತರು ಕೋವಿಡ್ ನಿಯಂತ್ರಣ ವ್ಯಾಪ್ತಿಯಿಂದ ತಪ್ಪಿಸಿಕೊಂಡು ನಾಪತ್ತೆಯಾಗಿದ್ದಾರೆಂಬ ಮಾಹಿತಿ ನನಗೆ ದೊರಕಿದೆ. ಬೆಂಗಳೂರು ದಕ್ಷಿಣದಲ್ಲಿ 2500, ಬೆಂಗಳೂರು ಪಶ್ಚಿಮದಲ್ಲಿ 2000, ಬೆಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ತಲಾ 1000, ರಾಜರಾಜೇಶ್ವರಿನಗರ ವಲಯದಲ್ಲಿ 1000, ಯಲಹಂಕ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ತಲಾ 1500 ಕೊರೋನ ಸೋಂಕಿತರು ಸರಕಾರದ ಚಿಕಿತ್ಸಾ ಹಾಗೂ ಮಾಹಿತಿ ನೆಟ್ ವ್ಯಾಪ್ತಿಗೆ ಬಂದು ನಾಪತ್ತೆಯಾಗಿದ್ದಾರೆಂಬುದಕ್ಕಿಂತ ಕಳವಳಕಾರಿ, ಆಘಾತಕಾರಿ ಸಂಗತಿ ಬೇರೆ ಇನ್ನೇನಿರಲು ಸಾಧ್ಯ ಎಂದು ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಸೋಂಕಿತರು ತಪ್ಪು ಮೊಬೈಲ್ ಸಂಖ್ಯೆ, ತಪ್ಪು ವಿಳಾಸ ನೀಡಿದ್ದಾರೆ. ಡೆಟಾ ಎಂಟ್ರಿ ಮಾಡುವಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ತಪ್ಪು ಎಸಗಿದ್ದಾರೆಂಬುದು ಒಂದು ಕಾರಣವಷ್ಟೇ. ಕೋವಿಡ್ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಕ್ರಮಗಳು ಪ್ರಾರಂಭದಿಂದಲೂ ಇರಲಿಲ್ಲ ಎಂಬುದಕ್ಕೆ ಇದನ್ನು ಹೊರತುಪಡಿಸಿ ಬೇರೊಂದು ನಿದರ್ಶನ ಬೇಕಿಲ್ಲ. ದೂರದೃಷ್ಟಿರಹಿತ ಮತ್ತು ಮುಂಧೋರಣೆಯ ಕೊರತೆ, ನಿರೀಕ್ಷೆಯಿಲ್ಲದ ಕ್ರಮವು ಇಂತಹ ಸನ್ನಿವೇಶ ಸೃಷ್ಟಿಗೆ ಕಾರಣವಾಗುತ್ತವೆ. ಈಗ ವೈಫಲ್ಯದ ಸಾಕ್ಷ್ಯಗಳು ನಮ್ಮೆಲ್ಲರನ್ನು ನರಕಯಾತನೆಗೆ ತಳ್ಳಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ, ಕೊರೋನ ನಿಯಂತ್ರಣ ಅಸಾಧ್ಯವೆನ್ನುವ ಸ್ಥಿತಿಗೆ ತಲುಪಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಶಂಕಿತರಿರಲಿ, ಸೋಂಕಿತರಿರಲಿ ಅವರೆಲ್ಲಾ ಸರಕಾರದ ಕಣ್ಗಾವಲಿನಲ್ಲಿರಬೇಕು. ಆದರೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಣ್ಗಾವಲು ಘಟಕಗಳು ಸಿಬ್ಬಂದಿ ಇಲ್ಲದೇ ನರಳುತ್ತಿವೆ. ಕೋವಿಡ್ ಮಹಾಮಾರಿಯಂತಹ ಮಹತ್ವದ ಸಂಕಷ್ಟದ ಸಂದರ್ಭದಲ್ಲಿ ಈ ಕಣ್ಗಾವಲು ಘಟಕಗಳನ್ನು ನಿರ್ಲಕ್ಷಿಸಿರುವುದು ನಮ್ಮೆಲ್ಲರ ಅರಿವಿಗೆ ಬಂದಿದೆ. ವೈದ್ಯರು, ಅಧಿಕಾರಿಗಳು ಇಲ್ಲದೆಯೇ ಕಣ್ಗಾವಲು ಘಟಕಗಳು ನಿಷ್ಪ್ರಯೋಜಕವಾಗಿ ಪರಿಣಾಮಕಾರಿಯಾದ ಸೇವೆ ನೀಡುತ್ತಿಲ್ಲ. ಇದರಿಂದಾಗಿ ಸೋಂಕಿತರು, ಶಂಕಿತರು ನಾಪತ್ತೆಯಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.

ಸರಕಾರವಿರಲಿ, ಖಾಸಗಿ ಇರಲಿ ಹಾಸಿಗೆಗಳ ಪರಿಸ್ಥಿತಿಯಂತೂ ಗಂಭೀರವಾಗಿದೆ. ಕೋವಿಡ್ ದೃಢಪಟ್ಟು ಮನೆಗಳಲ್ಲಿಯೇ ಪ್ರತ್ಯೇಕಿಸಲ್ಪಟ್ಟಿರುವ ವ್ಯಕ್ತಿಗಳಿಗೆ ಕೋವಿಡ್ ಕಿಟ್ ದೊರಕುತ್ತಿಲ್ಲ. ಖಾಸಗಿ ಆಸ್ಪತ್ರೆಗಳ ವೆಚ್ಚದಾಯಕ ಚಿಕಿತ್ಸೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿಗಳ ಸಾರ್ವಜನಿಕ ಹೇಳಿಕೆಗಳು, ಮಂತ್ರಿಗಳ ಉಡಾಫೆ ಸಾಧನೆಯ ಮಾತುಗಳು, ಸತ್ಯಕ್ಕೆ ದೂರವಾದ ಅಂಕಿ-ಸಂಖ್ಯೆಗಳು ಮತ್ತು ಅಧಿಕಾರಿಗಳು ಪ್ರಾಮಾಣಿಕವಾಗಿ ಒಪ್ಪಿ ಅಧಿಕೃತ ವೇದಿಕೆಗಳಲ್ಲಿ ವಸ್ತುಸ್ಥಿತಿಯನ್ನು ಬಿಚ್ಚಿಟ್ಟಿರುವ ಪ್ರಸಂಗಗಳನ್ನು ಕಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

ವಾಸ್ತವಿಕ ಪ್ರಜ್ಞೆಯಿಂದ, ನೈಜ ಮಾಹಿತಿಯೊಂದಿಗೆ ಪಾರದರ್ಶಕವಾದ ವ್ಯವಸ್ಥೆಯನ್ನು ಈಗಲಾದರೂ ಅನುಷ್ಠಾನಗೊಳಿಸಿ. ಸತ್ಯವನ್ನು ಯಾರೇ ತಮ್ಮ ಗಮನಕ್ಕೆ ತರಲಿ, ಅಂತಹದನ್ನು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ತಕ್ಷಣ ಜಾರಿಗೆ ಕ್ರಮಕೈಗೊಳ್ಳಿ. ಮುಖ್ಯಮಂತ್ರಿ ಮತ್ತು ತಮ್ಮ ಸಚಿವ ಸಂಪುಟದ ಇತರೆ ಸಚಿವರು ನೀಡುವ ನಿದರ್ಶನಗಳು, ವಿರೋಧ ಪಕ್ಷದ ಸದಸ್ಯರು ಮತ್ತು ರಚನಾತ್ಮಕ ಕಾರ್ಯಕರ್ತರು ನೀಡುವ ಸಲಹೆ, ಮಾರ್ಗದರ್ಶನಗಳ ಪರಿಣಾಮಕಾರಿ ಅನುಷ್ಠಾನಗಳನ್ನು ಹಿಂಬಾಲಿಸಲು ಸಾಂಸ್ಥಿಕ ವ್ಯವಸ್ಥೆಯನ್ನು ಮಾಡಲೇಬೇಕಾದ ವಿಶ್ವಾಸಾರ್ಹತೆಯ ಕೊರತೆಯ ಸ್ಥಿತಿಗೆ ನಾವಿಂದು ತಲುಪಿದ್ದೇವೆ. ಇದಕ್ಕಿಂತ ದುರಂತ ಬೇರಾವುದೂ ಇಲ್ಲ ಎಂದು ಅವರು ತಿಳಿಸಿದರು.

ಇಂಥ ಪ್ರಸಂಗದಲ್ಲಿ ಸರಕಾರದ ಕಾರ್ಯಶೈಲಿ ವ್ಯವಸ್ಥೆ ಹಾಗೂ ನಿರ್ಣಯಗಳನ್ನು ಪರಿಶೀಲಿಸಲು ಸರ್ವಪಕ್ಷಗಳ ಪ್ರತಿನಿಧಿಗಳ ಮತ್ತು ಎಲ್ಲ ಸಂವಿಧಾನಾತ್ಮಕ ಸಂಸ್ಥೆಗಳ ಮುಖ್ಯಸ್ಥರ ಪ್ರತಿನಿಧಿಗಳನ್ನೊಳಗೊಂಡ ಅಂದರೆ ರಾಜ್ಯ ಶ್ರೇಷ್ಠ ನ್ಯಾಯಾಲಯ, ರಾಜ್ಯ ಮಾನವ ಹಕ್ಕುಗಳ ಆಯೋಗ, ಲೋಕಾಯುಕ್ತ ಮತ್ತಿತರ ಪ್ರತಿನಿಧಿಗಳನ್ನೊಳಗೊಂಡ ಉನ್ನತಾಧಿಕಾರ ಸಮಿತಿಯೊಂದನ್ನು ದೈನಂದಿನ ಮೇಲ್ವಿಚಾರಣೆಗಾಗಿ ತಕ್ಷಣ ನೇಮಕ ಮಾಡುವಂತೆ ಎಚ್.ಕೆ.ಪಾಟೀಲ್ ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News