ಕೇರಳ ಚಿನ್ನ ಕಳ್ಳ ಸಾಗಾಟ ಪ್ರಕರಣ: ಎನ್‌ಐಎಯಿಂದ 6 ಮಂದಿಯ ಬಂಧನ

Update: 2020-08-02 17:19 GMT

ಹೊಸದಿಲ್ಲಿ, ಆ. 2: ಕೇರಳದ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಕಳೆದ ಒಂದು ವಾರದಲ್ಲಿ ಆರು ಮಂದಿಯನ್ನು ಬಂಧಿಸಿದೆ ಹಾಗೂ 6 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

 ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಎನ್‌ಐಎ ದಾಳಿ ನಡೆಸಿದ ಕಡೆಗಳಲ್ಲಿ ಆರೋಪಿಗಳ ಬ್ಯಾಂಕ್ ಪಾಸ್‌ಬುಕ್, ಕ್ರೆಡಿಟ್/ಡೆಬಿಟ್ ಕಾರ್ಡ್, ಪ್ರಯಾಣ ದಾಖಲೆ, ಗುರುತು ಪತ್ರ ಸಹಿತ ಎರಡು ಹಾರ್ಡ್ ಡಿಸ್ಕ್, ಒಂದು ಟ್ಯಾಬ್ಲೆಟ್ ಕಂಪ್ಯೂಟರ್, 8 ಮೊಬೈಲ್ ಫೋನ್, 6ಸಿಮ್ ಕಾರ್ಡ್, 1 ಡಿಜಿಟಲ್ ವೀಡಿಯೊ ರೆಕಾರ್ಡರ್, 5 ಡಿವಿಡಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

 ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ಯುಎಇ ರಾಯಭಾರಿ ಕಚೇರಿ ಹೆಸರಿಗೆ ಬಂದ ಪಾರ್ಸಲ್ ಮೂಲಕ ಚಿನ್ನ ಕಳ್ಳ ಸಾಗಾಟ ಮಾಡಿರುವುದಕ್ಕೆ ಹಾಗೂ ಈಗಾಗಲೆ ಬಂಧಿತರಾಗಿರುವ ರಮೀಸ್ ಕೆ.ಟಿ.ಯೊಂದಿಗೆ ಸೇರಿ ಪಿತೂರಿ ನಡೆಸಿರುವುದಕ್ಕೆ ಸಂಬಂಧಿಸಿ ಎರ್ನಾಕುಲಂ ಜಿಲ್ಲೆಯ ಜಲಾಲ್ ಎ.ಎಂ. ಹಾಗೂ ಮಲಪ್ಪುರಂ ಜಿಲ್ಲೆಯ ಸೈದ್ ಅಲಾವಿ ಇ.ಯನ್ನು ಎನ್‌ಐಎ ಜುಲೈ 30ರಂದು ಬಂಧಿಸಿದೆ.

ಪ್ರಕರಣದಲ್ಲಿ ಇದೇ ಪಾತ್ರ ನಿರ್ವಹಿಸುವುದಕ್ಕೆ ಸಂಬಂಧಿಸಿ ಮರು ದಿನ ಮುಹಮ್ಮದ್ ಶಫಿ ಹಾಗೂ ಅಬ್ದುಲ್ ಪಿ.ಟಿ.ಯನ್ನು ಬಂಧಿಸಲಾಯಿತು.

ಅನಂತರ ಇನ್ನಿಬ್ಬರು ಆರೋಪಿಗಳಾದ ಮುಹಮ್ಮದ್ ಅಲಿ ಇಬ್ರಾಹಿಂ ಹಾಗೂ ಮುಹಮ್ಮದ್ ಅಲಿಯನ್ನು ಬಂಧಿಸಲಾಯಿತು. ಇಬ್ಬರೂ ಎರ್ನಾಕುಲಂನ ನಿವಾಸಿಗಳು. ತಿರುವನಂತಪುರದಲ್ಲಿ ರಮೀಸ್ ಕೆ.ಟಿ.ಯಿಂದ ಕಳ್ಳ ಸಾಗಾಟದ ಚಿನ್ನವನ್ನು ಸಂಗ್ರಹಿಸಿದ ಹಾಗೂ ಅದನ್ನು ವಿತರಿಸಲು ಜಲಾಲ್‌ಗೆ ನೆರವು ನೀಡಿದ ಆರೋಪ ಹಾಗೂ ಪೀತೂರಿಯ ಶಂಕೆಯಲ್ಲಿ ಇವರಿಬ್ಬರನ್ನು ಆಗಸ್ಟ್ 1ರಂದು ಬಂಧಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News