ನ.1-10: ಯುಎಇಯಲ್ಲಿ ಮಹಿಳಾ ಟ್ವೆಂಟಿ-20 ಚಾಲೆಂಜ್

Update: 2020-08-03 04:46 GMT

ದುಬೈ:ಪ್ರಮುಖ ಬೆಳವಣಿಗೆಯೊಂದರಲ್ಲಿ ನವೆಂಬರ್ 1ರಿಂದ 10ರ ತನಕ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಾಲ್ಕು ತಂಡಗಳ ಮಹಿಳಾ ಟ್ವೆಂಟಿ-20 ಚಾಲೆಂಜ್ ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

 ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಅವರು ಇಂತಹ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ‘‘ಹೌದು ಇದು ಸಂಭವಿಸುತ್ತದೆ’’ಎಂದು ಅವರು ಹೇಳಿದರು.

 ತಯಾರಿ ಶಿಬಿರವು ಅಕ್ಟೋಬರ್‌ನಲ್ಲಿ ನಡೆಯಲಿದೆ ಮತ್ತು ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ ಎಂದು ತಿಳಿದುಬಂದಿದೆ. ಮಹಿಳಾ ಟ್ವೆಂಟಿ-20 ಚಾಲೆಂಜ್ ನಂತರ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದೆ.

 ಕಳೆದ ಮಾರ್ಚ್‌ನಲ್ಲಿ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಭಾಗವಹಿಸಿದ ಬಳಿಕ ಭಾರತದ ಆಟಗಾರ್ತಿಯರು ಆಡಿಲ್ಲ.

  ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲು ಶಿಬಿರವಿದೆ ಎಂದು ಗಂಗುಲಿ ಸುಳಿವು ನೀಡಿದ್ದರೂ, ಅದರ ವಿವರಗಳನ್ನು ಬಹರಂಗಪಡಿಸಿಲ್ಲ. ‘‘ಸುಮಾರು ಆರು ತಿಂಗಳುಗಳಿಂದ ಆಟಗಾರ್ತಿಯರು ಆಡಿಲ್ಲ. ಆದ ಕಾರಣ ಅವರು ಪಂದ್ಯಕ್ಕೆ ಮುನ್ನ ಫಿಟ್‌ನೆಸ್ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ’’ ಎಂದು ಮೂಲಗಳು ತಿಳಿಸಿವೆ.

  ‘‘ಮಹಿಳಾ ಬಿಗ್ ಬ್ಯಾಷ್ ಲೀಗ್‌ನೊಂದಿಗೆ ಪಂದ್ಯಾವಳಿ ಅಕ್ಟೋಬರ್ 17 ಮತ್ತು ನವೆಂಬರ್ 29ರ ನಡುವೆ ಆಯೋಜಿಸಲು ನಿರ್ಧರಿಸಲಾಗಿದೆ. ಆಸ್ಟ್ರೇಲಿಯ ತಂಡದ ಅನೇಕ ಆಟಗಾರ್ತಿಯರು ಇದರಲ್ಲಿ ಭಾಗವಹಿಸದಿರುವ ಸಾಧ್ಯತೆ ಇದೆ. ಭಾರತ ಮತ್ತು ಏಶ್ಯನ್ ಆಟಗಾರ್ತಿಯರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ’’ ಎಂದು ಮೂಲಗಳು ತಿಳಿಸಿವೆ.

ಆದರೆ, ಪಂದ್ಯಗಳು ಎಲ್ಲಿ ನಡೆಯುತ್ತವೆ ಎಂಬುದು ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News