ಚೀನೀ ಕಂಪೆನಿ ವಿವೋ ಐಪಿಎಲ್ ಪ್ರಾಯೋಜಕ: ಅಮಿತ್ ಶಾಗೆ ಪತ್ರ ಬರೆದು ಖಂಡಿಸಿದ ವರ್ತಕರ ಮಹಾಸಂಘಟನೆ

Update: 2020-08-03 11:02 GMT

ಕಾನ್ಪುರ: ಇಂಡಿಯನ್ ಪ್ರೀಮಿಯರ್ ಲೀಗ್ ಗೆ (ಐಪಿಎಲ್) ಚೀನಿ ಕಂಪೆನಿ ವೀವೋ ಅನ್ನು ಪ್ರಮುಖ ಪ್ರಾಯೋಜಕ ಸಂಸ್ಥೆಯನ್ನಾಗಿ ಉಳಿಸಿಕೊಳ್ಳಲು ಬಿಸಿಸಿಐ ಕೈಗೊಂಡ ನಿರ್ಧಾರವನ್ನು ವಿರೋಧಿಸಿ ಅಖಿಲ ಭಾರತ ವರ್ತಕರ ಮಹಾಸಂಘಟನೆ- ಕಾನ್ಫಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್  ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದೆ.

ಸೆಪ್ಟಂಬರ್ 19ರಿಂದ ನವೆಂಬರ್ 10ರ ತನಕ ದುಬೈಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ಐಪಿಎಲ್ ಪಂದ್ಯಾಟಕ್ಕೆ ನೀಡಲಾದ ಅನುಮತಿಯನ್ನು ತಡೆ ಹಿಡಿಯಬೇಕೆಂದೂ ಸಂಘಟನೆ ಕೇಂದ್ರದ ಮೋದಿ ಸರಕಾರವನ್ನು ಆಗ್ರಹಿಸಿದೆ.

ಕಳೆದ ತಿಂಗಳು ಚೀನಾ ಜತೆಗಿನ ಗಡಿ ಸಂಘರ್ಷದ ನಂತರ ಭಾರತೀಯರಲ್ಲಿರುವ ಚೀನಾ ವಿರೋಧಿ ಭಾವನೆ ಜತೆಗೆ ಪ್ರಧಾನಿಯ ಆತ್ಮನಿರ್ಭರ್ ಭಾರತ್ ಹಾಗೂ ವೋಕಲ್ ಫಾರ್ ಲೋಕಲ್ ಕರೆಗಳಿಗೆ ವಿರುದ್ಧವಾಗಿ ಬಿಸಿಸಿಐ ನಿರ್ಧಾರ ಕೈಗೊಂಡಿದೆ ಎಂದು ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಬಿಸಿಸಿಐ ಹಣದ ಆಸೆಗೆ ಬಿದ್ದು ಇಂತಹ ನಿರ್ಧಾರವನ್ನು ಜನರ ಸುರಕ್ಷತೆಗಯ ಕಡೆಗೆ ಗಮನ ನೀಡದೆ ಕೈಗೊಂಡಿದೆ ಹಾಗೂ ದುಬೈ ಅಥವಾ ಬೇರೆ ಎಲ್ಲಿಯೂ ಐಪಿಎಲ್ ನಡೆಸುವುದಕ್ಕೆ ಅನುಮತಿ ನೀಡಬಾರದು ಎಂದು ಪತ್ರದಲ್ಲಿ ಹೇಳಲಾಗಿದೆ. ಕೋವಿಡ್ ಸಮಸ್ಯೆಯಿಂದ ಒಲಿಂಪಿಕ್ಸ್ ಹಾಗೂ ವಿಂಬಲ್ಡನ್ ರದ್ದುಗೊಂಡಿರುವುದನ್ನೂ ಉಲ್ಲೇಖಿಸಿದೆ.

ಐಪಿಎಲ್ ಟೈಟಲ್ ಸ್ಪಾನ್ಸರ್ ಆಗಿ ವೀವೋ ಕಂಪೆನಿಯನ್ನು ಉಳಿಸಿಕೊಳ್ಳುವ ಬಿಸಿಸಿಐ ನಿರ್ಧಾರವನ್ನು ಆರೆಸ್ಸೆಸ್ ಸಹ ಸಂಘಟನೆ ಸ್ವದೇಶಿ ಜಾಗರಣ್ ಮಂಚ್ ಕೂಡ ಖಂಡಿಸಿದೆ. “ಇಡೀ ವಿಶ್ವವೇ ಚೀನಾವನ್ನು ಬಹಿಷ್ಕರಿಸುತ್ತಿದೆ. ಆದರೆ ಐಪಿಎಲ್ ಅದಕ್ಕೆ ಆಶ್ರಯ ನೀಡುತ್ತಿದೆ” ಎಂದು ಸಂಘಟನೆಯ ರಾಷ್ಟ್ರೀಯ ಸಹಸಂಚಾಲಕ ಅಶ್ವನಿ ಮಹಾಜನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News