ಸಿಎಂ ಬಿಎಸ್‌ವೈಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ: ದೇವೇಗೌಡ, ಸಿದ್ದರಾಮಯ್ಯ ಸೇರಿ ಗಣ್ಯರ ಹಾರೈಕೆ

Update: 2020-08-03 13:12 GMT

ಬೆಂಗಳೂರು, ಆ.3: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣಾ ಹಾಗೂ ಸರಕಾರಿ ನಿವಾಸ ಕಾವೇರಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ ಸ್ಯಾನಿಟೈಸ್ ಮಾಡಿದ್ದು, ಹೊರಗಿನಿಂದ ಬರುವವರಿಗೆ ಕೃಷ್ಣಾ ಹಾಗೂ ಕಾವೇರಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ, ಊರುಗಳಿಗೆ ತೆರಳಿರುವ ಇಲ್ಲಿನ ಸಿಬ್ಬಂದಿಗಳು ಹಾಗೂ ಮುಖ್ಯಮಂತ್ರಿಯ ಕುಟುಂಬ ಸದಸ್ಯರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.

ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣಗೂ ಕೋವಿಡ್ ಪರೀಕ್ಷೆ ಮಾಡಿದ್ದು ವರದಿ ನೆಗೆಟಿವ್ ಬಂದಿದೆ. ಮುಖ್ಯಮಂತ್ರಿ ನಿವಾಸದ ಅಡುಗೆ ಸಿಬ್ಬಂದಿ, ಕಾರು ಚಾಲಕ ಸೇರಿದಂತೆ 9 ಮಂದಿಗೆ ಕೊರೋನ ಸೋಂಕು ತಗಲಿದ್ದು, ರೋಗದ ಲಕ್ಷಣಗಳು ಕಂಡು ಬಂದಿಲ್ಲ. ಆದುದರಿಂದ, ಅವರನ್ನೆಲ್ಲ ವೈದ್ಯರ ಸಲಹೆ ಮೇರೆಗೆ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಖ್ಯಮಂತ್ರಿಯ ಆರೋಗ್ಯ ಸ್ಥಿರವಾಗಿದ್ದು, ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರ ತಂಡವು ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಯಾರೊಬ್ಬರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಆಸ್ಪತ್ರೆಯ ಪ್ರಕಟಣೆ ಸ್ಪಷ್ಟಪಡಿಸಿದೆ.

ಯಾರೂ ಆತಂಕಕ್ಕೆ ಒಳಗಾಗಬೇಡಿ: ನಿನ್ನೆ ರಾತ್ರಿ ಸುಮಾರು 9 ಗಂಟೆಗೆ ನನಗೆ ಕೊರೋನ ಪಾಸಿಟಿವ್ ಬಂದಿರುವುದು ಗೊತ್ತಾದ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದೇನೆ. ವೈದ್ಯರು ನಿನ್ನೆ ರಾತ್ರಿ, ಬೆಳಗ್ಗೆ ಪರೀಕ್ಷೆ ಮಾಡಿ ಯಾವುದೇ ತೊಂದರೆ ಇಲ್ಲ, ಆದಷ್ಟು ಬೇಗ ಗುಣಮುಖನಾಗುತ್ತೇನೆಂದು ಹೇಳಿದ್ದಾರೆ ಎಂದು ಯಡಿಯೂರಪ್ಪ ವಿಡಿಯೋ ಸಂದೇಶ ಕಳುಹಿಸಿದ್ದಾರೆ.

ನನ್ನ ಕೊರೋನ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋಗ ಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್‍ನಲ್ಲಿದ್ದು, ಮುಂಜಾಗ್ರತೆ ವಹಿಸಿ ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಮಠಾಧೀಶರು ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಆಶೀರ್ವಾದ ಮಾಡಿದ್ದಾರೆ. ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಸರಕಾರಿ ಕಚೇರಿ ಕೆಲಸಗಳು ಯಾವುದೆ ಅಡ್ಡಿ ಆತಂಕವಿಲ್ಲದೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಯಾರು ಆತಂಕಕ್ಕೆ ಒಳಗಾಗಬೇಡಿ, ಗುಣಮುಖನಾಗಿ ಹೊರ ಬಂದು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇನೆ. ಎಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ, ರಾಜ್ಯದ 6.50 ಕೋಟಿ ಜನರ ಆರೋಗ್ಯ ಬಹಳ ಮುಖ್ಯ. ಸುರಕ್ಷಿತ ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಧರಿಸಿಕೊಳ್ಳಿ. ಕೊರೋನ ವಿರುದ್ಧ ನಾವು ಯಶಸ್ವಿಯಾಗಿ ಹೋರಾಡಬಹುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಕೊರೋನ ಸೋಂಕು ತಗುಲಿರುವ ವಿಷಯ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಗಿದೆ. ಅವರು ಶೀಘ್ರ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಕೂಡ ಕೊರೋನ ಸೋಂಕಿನಿಂದ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಜನ ಸೇವೆಯಲ್ಲಿ ತೊಡಗಿರುವ ಜನಪ್ರತಿನಿಧಿಗಳು ಅತ್ಯಂತ ಎಚ್ಚರಿಕೆಯಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ, ಸಚಿವರು ಹಾಗೂ ಈ ಮಾರಕ ಸೋಂಕು ತಗುಲಿರುವ ಜನತೆ ಶೀಘ್ರ ಚೇತರಿಸಿಕೊಂಡು, ಈ ಸೋಂಕು ಮೆಟ್ಟಿನಿಲ್ಲುವ ಶಕ್ತಿ ದಯಪಾಲಿಸುವಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಎಲ್ಲರ ಪ್ರಾರ್ಥನೆ, ಆಶೀರ್ವಾದ, ಸದಾಶಯ ನಿಮ್ಮೊಂದಿಗೆ ಇದೆ ಎಂದು ಕುಮಾರಸ್ವಾಮಿ ಹಾರೈಸಿದ್ದಾರೆ.

ಭೈರತಿ ಬಸವರಾಜ ಕ್ವಾರಂಟೈನ್: ಗುರುವಾರ ಮೆಟ್ರೋ ಸುರಂಗ ಮಾರ್ಗ ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಉಪಸ್ಥಿತರಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮೂರು ದಿನಗಳ ಕಾಲ ಸ್ವಯಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಆರೋಗ್ಯ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಇನ್ನಿತರರು ಮುಖ್ಯಮಂತ್ರಿಯ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪಗೆ ಕೊರೋನ ಪಾಸಿಟಿವ್ ಬಂದಿರುವುದನ್ನು ಗಮನಿಸಿದ್ದೇನೆ. ಅವರು ಶೀಘ್ರ ಗುಣಮುಖರಾಗಲಿ, ಜನರ ಸಂಕಷ್ಟಕ್ಕೆ ಸ್ಪಂದಿಸುವಂತಾಗಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಾರ್ಥಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಶೀಘ್ರ ಕೊರೋನ ಸೋಂಕಿನ ಬಾಧೆಯಿಂದ ಮುಕ್ತರಾಗಿ ರಾಜ್ಯದ ಜನತೆಯ ಆರೋಗ್ಯ ರಕ್ಷಣೆಯೂ ಸೇರಿದಂತೆ ಆಡಳಿತಾತ್ಮಕ ಕಾರ್ಯದಲ್ಲಿ ತೊಡಗಿಕೊಳ್ಳಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾರೈಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪಗೆ ಕೊರೋನ ಪಾಸಿಟಿವ್ ಬಂದಿದ್ದು, ಆದಷ್ಟು ಬೇಗನೆ ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯದ ಜನತೆಯ ಹಾರೈಕೆ, ಪ್ರಾರ್ಥನೆಗಳು ನಿಮ್ಮೊಂದಿಗಿದೆ. ಶೀಘ್ರದಲ್ಲಿ ಚೇತರಿಸಿಕೊಂಡು ಮತ್ತೆ ಎಂದಿನಂತೆ ಕರ್ತವ್ಯದಲ್ಲಿ ತೊಡಗಿಕೊಳ್ಳಲಿದ್ದೀರಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ನಿಮ್ಮೆಲ್ಲರ ಪ್ರಾರ್ಥನೆ, ಶುಭ ಹಾರೈಕೆಗಳಿಗೆ ಧನ್ಯವಾದಗಳು. ನನ್ನ ತಂದೆ ಯಡಿಯೂರಪ್ಪಜೀ ಆರೋಗ್ಯವಾಗಿದ್ದು, ವೈದ್ಯರ ನಿಗಾವಣೆಯಲ್ಲಿದ್ದಾರೆ. ಯಾರೊಬ್ಬರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮವಾಗಿ ನಾನು ಮುಂದಿನ 7 ದಿನಗಳ ಅವಧಿಗೆ ಹೋಂ ಕ್ವಾರಂಟೈನ್‍ಗೆ ಒಳಗಾಗುತ್ತಿದ್ದೇನೆ ಎಂದು ಮುಖ್ಯಮಂತ್ರಿ ಪುತ್ರ ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News