ಕೋವಿಡ್19: ರಾಜ್ಯದಲ್ಲಿ ಚೇತರಿಕೆ ಸಂಖ್ಯೆಯಲ್ಲಿ ಗಣನೀಯ ಏರಿಕೆ; ಸಚಿವ ಡಾ.ಸುಧಾಕರ್

Update: 2020-08-03 12:52 GMT

ಬೆಂಗಳೂರು, ಆ. 3: ರಾಜ್ಯದಲ್ಲಿ ಕೊರೋನ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿರುವ ಬೆನ್ನಲ್ಲೆ ಕಳೆದ ಒಂದು ವಾರದಲ್ಲಿ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯಲ್ಲಿಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಸೋಮವಾರ ಟ್ವೀಟ್ ಮಾಡಿರುವ ಅವರು, ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿನಿಂದ ಚೇತರಿಕೆ ದರ ಶೇ.5.67ರಷ್ಟು ಏರಿಕೆ ಕಂಡಿದ್ದು, ಬೆಂಗಳೂರು ನಗರದಲ್ಲಿ ಶೇ.9.17ರಷ್ಟು ಏರಿಕೆ ಕಂಡಿದೆ ಎಂದು ಮಾಹಿತಿ ನೀಡಿದ್ದಾರೆ. ನಿನ್ನೆ ಸಂಜೆಯವರೆಗೆ ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಚೇತರಿಕೆ ದರ ಶೇ.42.81ರಷ್ಟಿದ್ದು, ಬೆಂಗಳೂರು ನಗರದಲ್ಲಿ ಶೇ.35.14ರಷ್ಟು ಚೇತರಿಕೆ ದರ ದಾಖಲಾಗಿದೆ ಎಂದು ಡಾ.ಸುಧಾಕರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಮಾನವೀಯತೆ ಮುಖ್ಯ: `ಹಣಕ್ಕಿಂತ ಮಾನವೀಯತೆ ದೊಡ್ಡದು. ಹಣ ಕಟ್ಟಿ ಇಲ್ಲ ಅಂದರೆ ಮೃತದೇಹ ನೀಡುವುದಿಲ್ಲ ಎನ್ನುತ್ತಿರುವ ಮಡಿವಾಳ ಸೆಂಟ್ ಜಾನ್ಸ್ ಆಸ್ಪತ್ರೆಯ ವರ್ತನೆ ತೀರಾ ಅಮಾನವೀಯ' ಎಂದು ಡಾ.ಕೆ.ಸುಧಾಕರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ತಂದೆಯ ಮೃತದೇಹಕ್ಕಾಗಿ ಮಗಳು ಕಣ್ಣೀರಿಡುತ್ತಿರುವ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಈ ಕೂಡಲೇ ಮಹಿಳೆಯ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ' ಎಂದು ಡಾ.ಸುಧಾಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News