ಸಿಎಂಗೆ ಕೊರೋನ ದೃಢ: ಗೃಹ ಸಚಿವ ಬೊಮ್ಮಾಯಿ, ವಿಜಯೇಂದ್ರ ಸಹಿತ ಹಲವರು ಕ್ವಾರಂಟೈನ್

Update: 2020-08-03 13:10 GMT

ಬೆಂಗಳೂರು, ಆ. 3: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿರುವುದರಿಂದ ಅವರ ಸಂಪರ್ಕದಲ್ಲಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಬಿಎಸ್‍ವೈ ಪುತ್ರ ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಡಿ.ಎನ್.ಜೀವರಾಜ್ ಸೇರಿದಂತೆ ಅಧಿಕಾರಿಗಳು ಮತ್ತು ಹಲವು ಮುಖಂಡರು ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ವಾಲಾ ಅವರೂ ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆ ಮಾಡಿಸಿದ್ದು ಕೊರೋನ ನಗೆಟಿವ್ ಬಂದಿದೆ ಎಂದು ರಾಜಭವನದ ಪ್ರಕಟಣೆ ಬಂದಿದೆ.

ಈ ನಡುವೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಬಿಎಸ್‍ವೈ ಪುತ್ರ ವಿಜಯೇಂದ್ರ ಅವರೂ ಪರೀಕ್ಷೆ ಮಾಡಿದ್ದು ಇಬ್ಬರಿಗೂ ನೆಗೆಟಿವ್ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೊರೋನ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಅದೇ ರೀತಿಯಲ್ಲಿ ಅವರ ಸಂಪರ್ಕಕ್ಕೆ ಬಂದಿದ್ದ ಯಾರೊಬ್ಬರಿಗೂ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಸಂಪರ್ಕದಲ್ಲಿದ್ದ ಬಸವರಾಜ ಬೊಮ್ಮಾಯಿ, ಪುತ್ರ ವಿಜಯೇಂದ್ರ, ಸಿಎಂ ಗೃಹ ಕಚೇರಿ ಕೃಷ್ಣಾ, ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಸೇರಿದಂತೆ ಹಲವು ಅಧಿಕಾರಿಗಳು ಸಿಎಂಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎಲ್ಲರೂ ಸ್ವಯಂ ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ ಎಂದು ಗೊತ್ತಾಗಿದೆ.

`ನಮ್ಮ ಮೆಟ್ರೋ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ನಾನು ಭಾಗಿಯಾಗಿದ್ದೆ. ಹೀಗಾಗಿ ನಾನು ಕೊರೋನ ಸೋಂಕು ಪರೀಕ್ಷೆಗೆ ಒಳಪಡಲಿದ್ದು, ಮೂರು ದಿನಗಳ ಕಾಲ ಸ್ವಯಂ ಕ್ವಾರಂಟೈನ್‍ಗೆ ಒಳಗಾಗುತ್ತಿದ್ದೇನೆ'

-ಬೈರತಿ ಬಸವರಾಜು, ನಗರಾಭಿವೃದ್ಧಿ ಸಚಿವ

ಮುನ್ನಚ್ಚರಿಕೆ ಕ್ರಮವಾಗಿ ನಾನು ಕೋವಿಡ್-19 ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗೆ ಒಳಗಾಗಿದ್ದೆ. ವರದಿ ನೆಗೆಟಿವ್ ಬಂದಿದ್ದು, ನಿಮ್ಮ ಪ್ರೀತಿ, ಆಶೀರ್ವಾದಗಳಿಗೆ ಆಭಾರಿಯಾಗಿದ್ದೇನೆ. ನಮ್ಮ ಹಾಗೂ ಸಮಾಜದ ಸುರಕ್ಷತೆಗಾಗಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳೋಣ. ಎಲ್ಲರೂ ತಮ್ಮದೇ ಮಾಸ್ಕ್ ಧರಿಸೋಣ'

-ಡಾ.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News